ಮುಡಾ ಕೇಸ್'ನಲ್ಲಿ ಸಿಎಂ ಆರೋಪಮುಕ್ತ: ಕೈ ಕಾರ್ಯಕರ್ತರ ಸಂಭ್ರಮ

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಮುಕ್ತರಾಗಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಂಭ್ರಮಾಚರಣೆ ನಡೆಸಿದರು. ಎಂ.ಲಕ್ಷ್ಮಣ್, ಬಿ.ಜೆ.ವಿಜಯಕುಮಾರ್, ಆರ್.ಮೂರ್ತಿ ಇನ್ನಿತರರಿದ್ದರು.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಮುಕ್ತರಾಗಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಂಭ್ರಮಾಚರಣೆ ನಡೆಸಿದರು. ಎಂ.ಲಕ್ಷ್ಮಣ್, ಬಿ.ಜೆ.ವಿಜಯಕುಮಾರ್, ಆರ್.ಮೂರ್ತಿ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಮುಕ್ತ
  • ಕುತಂತ್ರ ಮಾಡಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಹುನ್ನಾರ
ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಮುಕ್ತರಾಗಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಸಂಭ್ರಮಾಚರಣೆ ನಡೆಸಿದರು.
ಎಂಡಿಎ (ಹಿಂದೆ ಮುಡಾ)ವತಿಯಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆಂದು ಆರೋಪಿಸಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಸೇರಿದಂತೆ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. 
ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಲೋಕಾಯುಕ್ತ ಕಚೇರಿ ಎದುರು ಕೈ ಕಾರ್ಯಕರ್ತರು ಸಂಭ್ರಮಿಸಿದರು.
‘ಸತ್ಯಮೇವ ಜಯತೆ’ ಎಂಬ ಫಲಕ ಪ್ರದರ್ಶಿಸಿದ ಕೈ ಕಾರ್ಯಕರ್ತರು, ಸಿದ್ದರಾಮಯ್ಯ ವಿರುದ್ಧ ಕುತಂತ್ರ ನಡೆಸಿದ ಕಿಡಿಗೇಡಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು, ಸಿದ್ದರಾಮಯ್ಯ ವಿರುದ್ಧ ಕಿಡಿಗೇಡಿಗಳು ಹುನ್ನಾರ ಮಾಡಿದ್ದರು. ಜಮೀನು ಕಳೆದುಕೊಂಡು ಸಿದ್ದರಾಮಯ್ಯ ಕುಟುಂಬ ಮುಡಾದಿಂದ ನಿವೇಶನ ಪಡೆದುಕೊಂಡಿದ್ದರು. ಇದನ್ನು ಅಕ್ರಮ ಅಂತ ಸ್ನೇಹಮಯಿ ಕೃಷ್ಣ ಹಾಗೂ ಅಬ್ರಹಾಂ ಕೇಸ್ ಹಾಕಿದ್ದರು. ರಾಜ್ಯಪಾಲರಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದರು. ಸ್ನೇಹಮಯಿ ಕೃಷ್ಣಗೆ ಇಡೀ ಬಿಜೆಪಿ ಬೆಂಬಲ ಕೊಟ್ಟಿತ್ತು ಎಂದು ದೂರಿದರು.
ಈ ಬಗ್ಗೆ ತನಿಖೆಗೆ ಕೋರ್ಟ್ ಆದೇಶ ಮಾಡಿತ್ತು. ಲೋಕಾಯುಕ್ತ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತ್ತು. ಇದರಲ್ಲಿ ಸಿದ್ದರಾಮಯ್ಯ ಪ್ರಭಾವ ಇಲ್ಲ. ಸಿದ್ದರಾಮಯ್ಯ ಕುಟುಂಬ ಯಾವುದೇ ತಪ್ಪು ಮಾಡಿಲ್ಲ ಎಂದು ವರದಿ ತಿಳಿಸಲಾಗಿದೆ.
 ಕುತಂತ್ರ ಮಾಡಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಹುನ್ನಾರ ಮಾಡಿದ್ದರು. ಸದ್ಯ ಲೋಕಾಯುಕ್ತ ತನಿಖೆಯಲ್ಲಿ ಸಿದ್ದರಾಮಯ್ಯ ತಪ್ಪಿಲ್ಲ ಎಂದು ಹೇಳಲಾಗಿದೆ. ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಪ್ರಶ್ನೆ ಮಾಡಿ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋಗಿದ್ದರು. ಇದೀಗ ಆ ನ್ಯಾಯಾಲಯವು ಕೂಡ ಬಿ ರಿಪೋರ್ಟ್ ಅಂಗೀಕಾರ ಮಾಡಿದೆ. ಈ ಮೂಲಕ ಸಿದ್ದರಾಮಯ್ಯ ಕುಟುಂಬ ಮುಡಾದಲ್ಲಿ ಯಾವುದೇ ಅಕ್ರಮ ಮಾಡಿಲ್ಲ ಎಂಬುದು ಗೊತ್ತಾಗಿದೆ ಎಂದು ಹೇಳಿದರು.
ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ ಸ್ನೇಹಮಯಿ ಕೃಷ್ಣ ಸಾವಿರಾರು ಕೋಟಿ ಹಗರಣ ಎಂದು ಸುಳ್ಳು ಹೇಳಿದ್ದರು. ಇದೀಗ ಸತ್ಯ ಹೊರಗಡೆ ಬಂದಿದೆ. ಸತ್ಯಕ್ಕೆ ಜಯ ಎಂದು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸಂಸದ ಯದುವೀರ್ ವಿರುದ್ಧವೂ ಕಿಡಿಕಾರಿದ ಎಂ.ಲಕ್ಷ್ಮಣ್ ಅವರು, ನಮ್ಮ ಮೈಸೂರು ಸಂಸದರು ಎರಡು ವರ್ಷದಿಂದ ಒಂದೇ ಒಂದು ಯೋಜನೆ ತಂದಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಿಸಿಕೊಂಡು ನಮ್ಮ ಜನ ಅವರಿಗೆ ವೋಟ್ ಹಾಕಿದ್ದರು. ಕುಶಾಲನಗರಕ್ಕೆ ರೈಲ್ವೆ ತರುತ್ತೇನೆ ಎಂದಿದ್ದರು. ಏನು ತರಲಿಲ್ಲ. ಕೇಳಿದರೆ ರಾಜ್ಯ ಸರ್ಕಾರ ಸಹಕಾರ ನೀಡಿಲ್ಲ ಅಂತಾರೆ ಎಂದು ಹರಿಹಾಯ್ದರು.
ಚಾಮುಂಡಿ ಬೆಟ್ಟದಲ್ಲಿ ಜಾರಿ ಮಾಡಿರುವ ‘ಪ್ರಸಾದ’ ಯೋಜನೆ ಕೂಡ ಕೇಂದ್ರ ಸರ್ಕಾರದ್ದು. ಅದಕ್ಕೂ ಎಳ್ಳುನೀರು ಬಿಡುವ ಕೆಲಸ ಮಾಡುತ್ತಿದ್ದಾರೆ. ಇನ್ನಾದರೂ ಯದುವೀರ್ ಕೆಲಸ ಮಾಡಲಿ. ಈ ಹಿಂದೆ ಒಬ್ಬ ಪ್ರತಾಪ್ ಸಿಂಹ ಎಂಬ ಸಂಸದ ಇದ್ದ. ದಿನ ಬೆಳಗ್ಗೆ ಸುಳ್ಳು ಹೇಳುತ್ತಿದ್ದ. ಈಗ ಕೆಲಸವಿಲ್ಲದೆ ನಿರುದ್ಯೋಗಿ ಆಗಿದ್ದಾನೆ. 
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಗಬೇಕೆಂದು ಇದೀಗ ಓಡಾಟ ಮಾಡುತ್ತಿದ್ದಾನೆ. ಇಂತಹವರು ಬಿಜೆಪಿಯಲ್ಲಿ ಇದ್ದಾರೆ. ಇನ್ನಾದರೂ ಬಿಜೆಪಿ ನಾಯಕರು ಹುಚ್ಚಾಟ ನಿಲ್ಲಿಸಲಿ ಎಂದು ಕುಟುಕಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net