ಮೈಸೂರು ನಗರದ ರಂಗಾಯಣದಲ್ಲಿ ಮಂಗಳವಾರ ಆಯೋಜಿಸಿದ್ದಚಿಣ್ಣರ ಮೇಳವನ್ನು ಶಿಬಿರ ಉದ್ಘಾಟಿಸಿದ ಗಾಂಧಿವಾದಿ ಸಂತೋಷ್ ಕೌಲಗಿ ಉದ್ಘಾಟಿಸಿದರು. ಸತೀಶ್ ತಿಪಟೂರು, ಡಾ.ಎಂ.ಡಿ. ಸುದರ್ಶನ್, ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಜುಲೇಖಾ ಬೇಗಂ, ಸುರೇಶ್ ಬಾಬು ಹಾಗೂ ಇತರರು ಇದ್ದರು.
ಮೈಸೂರು: ರಂಗಾಯಣ ಮೇ 10ರವರೆಗೆ ಆಯೋಜಿಸಿರುವ ಚಿಣ್ಣರ ಮೇಳಕ್ಕೆ ವನರಂಗದಲ್ಲಿ ಮಂಗಳವಾರ ಸಂಭ್ರಮದ ಚಾಲನೆ ದೊರೆ ಯಿತು. ಮೇಳ ಆರಂಭಕ್ಕೂ ಮುನ್ನ ರಂಗಾಯಣ ಆವರಣದಲ್ಲಿ ಚಿಣ್ಣರು ವಿವಿಧ ಚಿತ್ರಗಳನ್ನು ಬಿಡಿಸುವ ಮೂಲಕ ಬಣ್ಣದ ಚಿತ್ತಾರ ಮೂಡಿಸಿದರು. ಬಹುತೇಕ ಮಕ್ಕಳು ಐಪಿಎಲ್ ಫ್ರಾಂಚೈಸಿ ‘ಆರ್‌ಸಿಬಿ’ ಹೆಸರು ಬರೆಯುವ ಮೂಲಕ ತಮ್ಮ ಪ್ರೀತಿಯನ್ನು ಪ್ರಕಟಪಡಿಸಿದರು. ಉಳಿದಂತೆ ಪ್ರಾಣಿ, ಪಕ್ಷಿಗಳು ಸೇರಿದಂತೆ ವಿವಿಧ ಚಿತ್ರಗಳನ್ನು ಮಕ್ಕಳು ಬಿಡಿಸುವ ಮೂಲಕ ಗಮನ ಸೆಳೆದರು.
ಶಿಬಿರ ಉದ್ಘಾಟಿಸಿದ ಗಾಂಧಿವಾದಿ ಸಂತೋಷ್ ಕೌಲಗಿ ಮಾತನಾಡಿ, ಪ್ರಸ್ತುತ ಪಾಲಕರು ಮಕ್ಕಳನ್ನು ಸಿದ್ಧಾರ್ಥನ ರೀತಿಯಲ್ಲಿ ಬೆಳೆಸುತ್ತಿದ್ದಾರೆ. ಮಕ್ಕಳಿಗೆ ಯಾವುದೇ ಕಷ್ಟಗಳು ಬಾರದೆ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಆದರೆ, ಮಕ್ಕಳು ಸಿದ್ಧಾರ್ಥನಾಗಿಯೇ ಉಳಿಯದೆ ಬುದ್ಧನ ಮಾರ್ಗವನ್ನೂ ತುಳಿಯಬೇಕು. ಇದಕ್ಕೆ ಈ ಶಿಬಿರವು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬುದ್ಧ ಅಂದರೆ ಅರಿವು. ಜ್ಞಾನ ಸಂಪಾದಿಸಿದರೆ ಮಕ್ಕಳು ಬುದ್ಧರಾಗುತ್ತಾರೆ, ಇಲ್ಲವಾದರೆ ಸಿದ್ಧಾರ್ಥನಾಗಿಯೇ ಉಳಿಯುತ್ತಾರೆ. ಹಾಗಾಗಿ ಮಕ್ಕಳಿಗೆ ಸಮಾಜದಲ್ಲಿರುವ ನೋವು ನಲಿವುಗಳನ್ನು ತಿಳಿಸಿಕೊಡುವ ಕಾರ್ಯ ಆಗಬೇಕು. ಸಮಾಜದಲ್ಲಿರುವ ಪ್ರತಿಯೊಬ್ಬರನ್ನು ಗೌರವಿಸುವುದನ್ನು ಕಲಿಸಬೇಕು. ಎಲ್ಲರು ನಮ್ಮವರು ಎಂದು ಭಾವಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.
ಪ್ರಸ್ತುತ ಪ್ರಪಂಚದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಯಾರು ಸಹ ಬುದ್ಧನಾಗುವ ಕಡೆಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಪ್ರಪಂಚದಲ್ಲಿ ಅಶಾಂತಿ ನೆಲೆಸಿದೆ. ಎಲ್ಲರು ಕೊಳ್ಳುಬಾಕ ಸಂಸ್ಕೃತಿಯ ಭಾಗವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಉಪ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ ಜುಲೇಖಾ ಬೇಗಂ, ರಂಗಸಮಾಜ ಸದಸ್ಯ ಸುರೇಶ್ ಬಾಬು ಹಾಗೂ ಇತರರು ಇದ್ದರು.