ಮಕ್ಕಳು ವಿದ್ಯೆ ಜತೆಗೆ ಸಂಸ್ಕಾರ ಕಲಿಯಲಿ: ಸಚಿವ ಎನ್.ಚಲುವರಾಯಸ್ವಾಮಿ

ನಗರದಲ್ಲಿ  ಶಾಸಕ ಕೆ.ಹರೀಶ್‌ಗೌಡ ಸ್ಥಾಪಿಸಿರುವ ಯಶೋಧಾ ಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು.  ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಎನ್.ಚಲುವರಾಯಸ್ವಾಮಿ, ತನ್ವೀರ್ ಸೇಠ್, ರಮೇಶ್ ಬಂಡಿಸಿದ್ದೇಗೌಡ, ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ, ಡಿ.ರವಿಶಂಕರ್,  ಡಿ.ತಿಮ್ಮಯ್ಯ ಇನ್ನಿತರರಿದ್ದರು.
ನಗರದಲ್ಲಿ ಶಾಸಕ ಕೆ.ಹರೀಶ್‌ಗೌಡ ಸ್ಥಾಪಿಸಿರುವ ಯಶೋಧಾ ಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಎನ್.ಚಲುವರಾಯಸ್ವಾಮಿ, ತನ್ವೀರ್ ಸೇಠ್, ರಮೇಶ್ ಬಂಡಿಸಿದ್ದೇಗೌಡ, ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ, ಡಿ.ರವಿಶಂಕರ್, ಡಿ.ತಿಮ್ಮಯ್ಯ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಶೋಧಾ ಕೃಷ್ಣ ಚಾರಿಟಬಲ್ ಟ್ರಸ್ಟ್‌ನಿಂದ 350 ಲ್ಯಾಪ್‌ಟಾಪ್ ವಿತರಣೆ
  • ಐಎಎಸ್, ಐಪಿಎಸ್‌ಗೆ ಆಯ್ಕೆಯದವರು ಶೇ.60-70ರಷ್ಟು ಅಭ್ಯರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದಿದವರು, ಬಡವರ ಮಕ್ಕಳು.
  • ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಗುರಿ ತಲುಪಲು ಸಾಧ್ಯ
 ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಅವರು ತಮ್ಮ ಪಾಲಕರ ಹೆಸರಿನಲ್ಲಿ ಸಮಾಜ ಸೇವೆಗಾಗಿ ಸ್ಥಾಪಿಸಿರುವ ಯಶೋಧಾ ಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ 350 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು.
ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು, ರಾಜಕಾರಣಿಗಳು, ಸಮಾಜದ ಮುಖಂಡರು, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾಸಕರ ತಂದೆ ಕೃಷ್ಣ ಅವರ ಭಾವಚಿತ್ರಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪುಷ್ಪಾರ್ಚನೆ ಮಾಡಿ ಈ ಟ್ರಸ್ಟ್ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. 
ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ, ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಲಿಯಬೇಕು. ಐಎಎಸ್, ಐಪಿಎಸ್‌ಗೆ ಆಯ್ಕೆಯದವರು ಶೇ.60-70ರಷ್ಟು ಅಭ್ಯರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದಿದವರು, ಬಡವರ ಮಕ್ಕಳು. ಜೀವನವೇ ಇವರಿಗೆ ಅನೇಕ ಪಾಠ ಕಲಿಸಿರುತ್ತದೆ. ಇದು ಸಾಧನೆಗೆ ಮೆಟ್ಟಿಲು ಆಗಲಿದೆ. ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಗುರಿ ತಲುಪಲು ಸಾಧ್ಯ ಇದೆ ಎಂದರು.
ರೈತರು ದೇಶದ ಬೆನ್ನೆಲುಬು. ಅಂತೆಯೇ ವಿದ್ಯಾರ್ಥಿಗಳು ದೇಶದ ಆಧಾರ ಸ್ತಂಭವಾಗಿದ್ದಾರೆ. ಈಗ ಯುವಕರು ಸಂಖ್ಯೆ ಹೆಚ್ಚಿದೆ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.
ಶಾಸಕರು ದುಡ್ಡು ಹೊಡೆಯುತ್ತಾರೆ ಎಂದು ಜನರು ಮಾತಾಡುತ್ತಾರೆ. ನಿತ್ಯ ಮದುವೆ, ಸಾವು, ತಿಥಿ, ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು ತಿಳಿಯುವುದಿಲ್ಲ. ಹರೀಶ್‌ಗೌಡ ಅವರು ಶಾಸಕರಾಗುವ ಮೊದಲು ನಿವೇಶನ ಮಾರಿಕೊಂಡಿದ್ದರು.
 ಶಾಸಕರಾದ ಮೇಲೂ ಸೈಟ್ ಮಾರಿದ್ದಾರೆ. ಈಗ 2 ಕೋಟಿ ರೂ. ಖರ್ಚು ಮಾಡಿ ನೀಡುತ್ತಿರುವ ಲ್ಯಾಪ್‌ಟಾಪ್ ಅನ್ನು ವಿದ್ಯಾರ್ಥಿಗಳು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.
ಶಾಸಕ ಕೆ ಹರೀಶ್‌ಗೌಡ ಮಾತನಾಡಿ, ಪಾಲಕರ ಹೆಸರಲ್ಲಿ ಚಾರಿಟಬಲ್ ಟ್ರಸ್ಟ್ ಆರಂಭಿಸಿ ಸಮಾಜ ಸೇವೆ ಮಾಡಬೇಕೆಂಬ ನನ್ನ ಬಹು ವರ್ಷಗಳ ಕನಸು ಇಂದು ಈಡೇರುತ್ತಿದೆ. ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ ದಿನದಂದಲೂ ಉದ್ಯೋಗ ಮೇಳ, ಆರೋಗ್ಯ ಮೇಳ, ಸಾಮೂಹಿಕ ವಿವಾಹ ಆಯೋಜಿಸುತ್ತಿದ್ದು, ಮುಂಬರುವ ದಿನಗಲ್ಲೂ ಈ ಕಾರ್ಯ ಮುಂದುವರಿಸಲಾಗುವುದು ಎಂದರು.
ನಮ್ಮ ಕ್ಷೇತ್ರದಲ್ಲಿ ಬಡ, ಮಧ್ಯಮ ವರ್ಗದ ಪಾಲಕರು ಲ್ಯಾಪ್‌ಟಾಪ್ ಕೊಡುವಂತೆ ಕೋರುತ್ತಿದ್ದರು. 100 ವಿದ್ಯಾರ್ಥಿಗಳಿಗೆ ಕೊಡಲು ಅರ್ಜಿ ಆಹ್ವಾನಿಸಲಾಗಿತ್ತು. ಬಂದಿದ್ದು 500 ಅರ್ಜಿಗಳು. ಯಾರಿಗೆ ಅವಶ್ಯವಿದೆ ಎಂಬುದನ್ನು ಪರಿಶೀಲಿಸಿ 350 ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು.
ಆದಿಚುಂಚನಗಿರಿ ಮಠದ ಶ್ರೀಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ತನ್ವೀರ್ ಸೇಠ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಪುಷ್ಪಾಲತಾ ಚಿಕ್ಕಣ್ಣ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮುಖಂಡರಾದ ಎಸ್.ಚಂದ್ರಶೇಖರ್, ರವಿ ಮಂಚೇಗೌಡನಕೊಪ್ಪಲು ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net