ಕೌಟುಂಬಿಕ ವಾತಾವರಣದಿಂದ ಮಕ್ಕಳು ವಂಚಿತ

 ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಳವಳ
  • ನೇಗಿಲೋತ್ಸವ-ಸತ್ಸಂಗ-ಸಂಗೀತ ಕಾರ್ಯಕ್ರಮ
ಮೈಸೂರು: ಮಕ್ಕಳನ್ನು ಭಾವನಾತ್ಮಕವಾಗಿ ಹಾಗೂ ದೃಢ ಸಂಕಲ್ಪವಿರುವ ವ್ಯಕ್ತಿಯಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ಸಮುದಾಯಗಳ ಪಾತ್ರ ದೊಡ್ಡದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಇತ್ತೀಚಿಗೆ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ನೇಗಿಲೋತ್ಸವ-ಸತ್ಸಂಗ-ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಆಧುನಿಕ ಸಮಾಜದಲ್ಲಿ ಕೌಟುಂಬಿಕ ವಾತಾವರಣ ಸಿಗುತ್ತಿಲ್ಲ. ಇದರಿಂದಾಗಿ ಮಾನಸಿಕ ತೊಂದರೆ ಒಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಸ್ತುತ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದಾರೆ. ಮನೆಗಳಲ್ಲಿ ಏಕಾಂಗಿಯಾಗಿ ಅನಾಥರಂತೆ ಬೆಳೆಯುವ ಮಕ್ಕಳು ಮಾನಸಿಕ ತೊಳಲಾಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯವನ್ನು ರೂಪಿಸುವ ಮಕ್ಕಳು ಈ ರೀತಿ ತೊಂದರೆಗೆ ಒಳಗಾಗುವುದು ಆತಂಕಕಾರಿ ಬೆಳವಣಿಗೆ ಎಂದರು.
ಮಕ್ಕಳನ್ನು ಸಂಸ್ಕಾರವಂತರಾಗಿ ಹಾಗೂ ಭಾವನಾತ್ಮಕವಾಗಿ ಬೆಳೆಸಬೇಕು. ಮಕ್ಕಳು ಆದಷ್ಟು ಸಮಾಜಕ್ಕೆ ಒಗ್ಗಿಗೊಂಡು ಬೆಳೆಯಬೇಕು. ಇದರಿಂದ ಅವರಿಗೆ ಸಮಾಜದಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದು ಮನವರಿಕೆಯಾಗುತ್ತದೆ. ತನ್ಮೂಲಕ ಅವರಿಗೆ ಸಮಾಜಸಮ್ಮತವಾದ ನಡವಳಿಕೆಗಳು ಮೈಗೂಡುತ್ತವೆ ಎಂದರು. 
ಮಕ್ಕಳ ಮಾನಸಿಕತೆ ಚೆನ್ನಾಗಿರಬೇಕಾದರೆ ತಂದೆ-ತಾಯಿ, ಅಜ್ಜ-ಅಜ್ಜಿ ಹಾಗೂ ಇನ್ನಿತರ ಸಂಬಂಧಗಳ ನಡುವೆ ಅವರು ಬದುಕುವ ವಾತಾವರಣ ಸೃಷ್ಟಿಯಾಗಬೇಕು. ಇದರಿಂದ ಅವರ ಎಲ್ಲ ಭಾವನೆಗಳಿಗೆ ಹಿರಿಯರು ಒತ್ತಾಸೆಯಾಗಿ ನಿಲ್ಲುತ್ತಾರೆ. ಪರಿಣಾಮವಾಗಿ ತಮ್ಮ ಎಲ್ಲ ಒಳ್ಳೆಯ ಪ್ರಯತ್ನಗಳಿಗೆ ಹಿರಿಯರ ಬೆಂಬಲ ಸಿಗುತ್ತದೆಂಬ ಆಶಾಭಾವನೆ ಮೂಡುತ್ತದೆ. ಒಳ್ಳೆಯ ಕೆಲಸವನ್ನು ಮಾಡುವುದಲ್ಲದೇ ಸಾಧನೆಗಳ ಕಡೆಗೂ ಅವರು ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 
ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಒಕ್ಕಗಲಿಗರು ವಿಘಟಿತರಾಗುತ್ತಿರುವುದು ಕಂಡು ಬರುತ್ತಿದೆ. ಮಾತ್ರವಲ್ಲದೇ, ಒಕ್ಕಲುತನ ಹಾಗೂ ಅದರೊಂದಿಗೆ ಸಾಗಿ ಬಂದಿರುವ ಸಂಸ್ಕೃತಿಯೂ ಮಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಾಜಿ ಶಾಸಕ ಎಲ್.ನಾಗೇಂದ್ರ, ಐಪಿಎಸ್ ಅಧಿಕಾರಿ ಪ್ರಕಾಶ್‌ಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ, ಮರಿಸ್ವಾಮಿ, ನೇಗಿಲ ಯೋಗಿ ಸಮಾಜಸೇವಾ ಟ್ರಸ್ಟ್‌ನ ರವಿಕುಮಾರ್, ಶೋಭಾ ನಾಗರಾಜು ಹಾಗೂ ಇತರರು ಇದ್ದರು. 
ಸಮಾಜದ ಜನತೆಯನ್ನು ಒಗ್ಗೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ನೇಗಿಲೋತ್ಸವ-ಸಮ್ಮಿಲನ-ಸತ್ಸಂಗ-ಸಂಗೀತ ಹೆಸರಿನ ವಿನೂತನ ಕಾರ್ಯಕ್ರಮ ಗಮನ ಸೆಳೆಯಿತು. ಸಮಾಜದ ವಿವಿಧ  ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಚರ್ಚಿಸಿದರು. ನೇಗಿಲೋತ್ಸವ ಕಾರ್ಯಕ್ರಮದ ಮೂಲಕ ಒಕ್ಕಲುತನದ ಹಿರಿಮೆ ಪ್ರದರ್ಶಿಸಲಾಯಿತು. ಬಳಿಕ ದೇಶ ವಿದೇಶಗಳಲ್ಲಿ ಒಕ್ಕಲುತನದ ಹಾಡುಗಳನ್ನು ಗಾಯನ ಮಾಡಿರುವ ಗೋನಾ ಸ್ವಾಮಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net