ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಮಾರಕ: ದೇವರಾಜ್ ಟಿ.ಕಾಟೂರು
ಮಾರ್ಬಳ್ಳಿ ಗ್ರಾಮ ಪಂಚಾಯಿತಿ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ)ಯಿಂದ ಮಾರ್ಬಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ದೇವರಾಜ್ ಟಿ. ಕಾಟೂರು ಉದ್ಘಾಟಿಸಿದರು. ಕುಮಾರಸ್ವಾಮಿ, ನಾಗವೇಣಿ, ಉಮಾ, ಶಶಿಕುಮಾರ್, ಕೀರ್ತನಾ, ಶಿವು, ಶಾಲೆಯ ಶಿಕ್ಷಕರು ಇದ್ದರು.
ಮಕ್ಕಳು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ
ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಾಲೆಯಿಂದ ಹೊರಗಿಡದೆ ಶಿಕ್ಷಣ ಮುಂದುವರಿಸಿ
ಮೈಸೂರು:ಬಾಲ ಕಾರ್ಮಿಕ ಪದ್ಧತಿ ನಿಷೇಧಿಸುವ ಕಾನೂನು ಜಾರಿಯಾಗಿ ಹಲವು ವರ್ಷಗಳು ಕಳೆದಿದ್ದರೂ, ಇಂದಿಗೂ ಕೆಲವೆಡೆ ಈ ಪದ್ಧತಿ ಮುಂದುವರಿದಿದೆ ಎಂದು ಕರ್ನಾಟಕ ರಾಜ್ಯ ನಾಯಕರ ಯುವಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ. ಕಾಟೂರು ಬೇಸರ ವ್ಯಕ್ತಪಡಿಸಿದರು.
ಮೈಸೂರು ತಾಲೂಕು ಮಾರ್ಬಳ್ಳಿ ಗ್ರಾಮ ಪಂಚಾಯಿತಿ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ)ಯಿಂದ ಮಾರ್ಬಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಮಾರಕವಾಗಿದ್ದು, ಅದರ ನಿರ್ಮೂಲನೆಗಾಗಿ ನಿರಂತರ ಜಾಗೃತಿ ಮೂಡಿಸುವುದು ಅವಶ್ಯ. ಬಾಲ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986 ಇದೆ. 14 ವರ್ಷದೊಳಗಿನ ಯಾವುದೇ ಮಕ್ಕಳು ಯಾವುದೇ ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದ್ದು, ಪಾಲಕರು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಾಲೆಯಿಂದ ಹೊರಗಿಡದೆ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
18 ವರ್ಷ ತುಂಬುವವರೆಗೆ ಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಶಾಶ್ವತ ಬದಲಾವಣೆ ಸಾಧ್ಯ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರ್‌ಎಲ್‌ಎಚ್‌ಪಿ ಸಂಯೋಜಕ ಶಶಿಕುಮಾರ್ ಮಾತನಾಡಿ, ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಮಹತ್ವ ಹಾಗೂ ಈ ವರ್ಷದ ಆಚರಣೆಯ ಉದ್ದೇಶ ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ಮಗುವಿಗೂ ಸುರಕ್ಷಿತ ಬಾಲ್ಯ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕರ ಬೆಳವಣಿಗೆಯ ಹಕ್ಕುಗಳಿವೆ ಎಂದರು.
ಮಕ್ಕಳಿಗೆ ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳು, ಮಕ್ಕಳ ಹಕ್ಕುಗಳು ಹಾಗೂ ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ಮಕ್ಕಳು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿ ಜಾಗೃತಿ ಸಂದೇಶ ಸಾರಿದರು.
ಮಾರ್ಬಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ಪಂಚಾಯಿತಿ ಕಾರ್ಯದರ್ಶಿ ನಾಗವೇಣಿ, ಮುಖ್ಯ ಶಿಕ್ಷಕಿ ಉಮಾ, ಮಕ್ಕಳ ಪ್ರತಿನಿಧಿಗಳಾದ ಕೀರ್ತನಾ, ಶಿವು, ಶಾಲೆಯ ಶಿಕ್ಷಕರು ಇದ್ದರು.