ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿ ಚಾಮುಂಡಿಬೆಟ್ಟವನ್ನು ಉಳಿಸುವಂತೆ ಚಾಮುಂಡಿಬೆಟ್ಟ ಚಲೋ

ವಿವಿಧ ಸಂಘಟನೆಗಳ ಮುಖಂಡರು, ಪರಿಸರ ವಾದಿಗಳು, ಸಾರ್ವಜನಿಕರು ಬುಧವಾರ ಚಾಮುಂಡಿಬೆಟ್ಟ ಚಲೋ ನಡೆಸಿದರು.
ವಿವಿಧ ಸಂಘಟನೆಗಳ ಮುಖಂಡರು, ಪರಿಸರ ವಾದಿಗಳು, ಸಾರ್ವಜನಿಕರು ಬುಧವಾರ ಚಾಮುಂಡಿಬೆಟ್ಟ ಚಲೋ ನಡೆಸಿದರು.
Published on
ಮೈಸೂರು: ಚಾಮುಂಡಿಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ನಡೆಯುತ್ತಿರುವ ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿ ಚಾಮುಂಡಿಬೆಟ್ಟವನ್ನು ಉಳಿಸುವಂತೆ ಒತ್ತಾಯಿಸಿ ಬುಧವಾರ ಚಾಮುಂಡಿಬೆಟ್ಟ ಚಲೋ ನಡೆಸಲಾಯಿತು.
ವಿವಿಧ ಸಂಘಟನೆಗಳ ಮುಖಂಡರು, ಪರಿಸರ ವಾದಿಗಳು, ಸಾರ್ವಜನಿಕರು ದೇವಸ್ಥಾನ ಮುಂಭಾಗ ಜಮಾಯಿಸಿ ಅಭಿವೃದ್ಧಿ ಕಾಮಗಾರಿಗಳನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿಗಳು ನಡೆಯುತ್ತಿವೆ. ದೇವಸ್ಥಾನದ ಸಮೀಪದಲ್ಲೇ ಶಾಶ್ವತ ವೇದಿಕೆ ನಿರ್ಮಿಸಲು ಅಗೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶ ಪರಿಸರದ ದೃಷ್ಟಿಯಿಂದ ಅತೀ ಸೂಕ್ಷ್ಮವಾಗಿದ್ದು, ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆ ಇರುವ ವಲಯವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಯಾವುದೇ ಸಮರ್ಪಕ ವೈಜ್ಞಾನಿಕ ಅನುಮೋದನೆ, ಪರಿಸರ ಅನುಮತಿ ಹಾಗೂ ಆಧ್ಯಾತ್ಮಿಕ ಅನುಮತಿ ಪಡೆಯದೆ ಕಾಮಗಾರಿ ನಡೆಸುತ್ತಿರುವುದು ಅಪಾಯಕಾರಿ ಎಂದು ಕಿಡಿ ಕಾರಿದರು.
ಅಭಿವೃದ್ಧಿ ಕಾಮಗಾರಿಗಳಿಂದ ಬೆಟ್ಟದ ಪಾರಂಪರಿಕ ಮೌಲ್ಯಕ್ಕೆ ಧಕ್ಕೆ ಉಂಟಾಗುವುದಲ್ಲದೆ, ಪರಿಸರ ವ್ಯವಸ್ಥೆಗೆ ಹಾನಿ ಸಂಭವಿಸುತ್ತದೆ. ಭೂ ಕುಸಿತಗಳ ಅಪಾಯ ಹೆಚ್ಚಬಹುದು. ಅಲ್ಲದೆ ದೇವಾಲಯದ ರಚನೆಗೂ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಅವೈಜ್ಞಾನಿಕ ಕಾಮಗಾರಿ ನಡೆಸಬಾರದು ಎಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಮುಖಂಡ ಡಾ.ಶುಶ್ರುತ ಗೌಡ ಮಾತನಾಡಿ, ಬೆಟ್ಟಕ್ಕೆ ಬರುವ ಭಕ್ತರಿಗೆ ಮೌಲ ಸೌಕರ್ಯ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಸಾದ್ ಯೋಜನೆಯಲ್ಲಿ ಅನುದಾನ ನೀಡಿದೆ. ಆದರೆ, ಜಿಲ್ಲಾಡಳಿತ ಇದನ್ನು ಅವೈಜ್ಞಾನಿಕ ಕಾಮಗಾರಿಗೆ ಬಳಸಿಕೊಳ್ಳುತ್ತಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಪರಿಸರ, ಬೆಟ್ಟದ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಸಮಗ್ರ ಅಧ್ಯಯನ ನಡೆಸಿ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ, ಜಿಲ್ಲಾಡಳಿತ ಇದ್ಯಾವುದನ್ನೂ ಮಾಡದೆ ರಾತ್ರೋರಾತ್ರಿ ಕದ್ದುಮುಚ್ಚಿ ದಬ್ಬಾಳಿಕೆಯಿಂದ ಕಾಮಗಾರಿ ನಡೆಸುತ್ತಿದೆ. ಏನು ಮಾಡುತ್ತಿದ್ದೇವೆ ಎಂಬ ಮಾಹಿತಿಯನ್ನು ಯಾರೂ ನೀಡುತ್ತಿಲ್ಲ. ಭು ಕುಸಿತವಾಗಿ ವರ್ಷಗಳೇ ಕಳೆದರೂ ಅದನ್ನು ಸರಿಪಡಿಸಲಾಗದವರು ಏಕಾಏಕಿ ಈ ಕಾಮಗಾರಿ ಆರಂಭಿಸಿರುವುದಾದರೂ ಯಾಕೆ ಎಂದು ಪ್ರಶ್ನಿಸಿದರು.
ಕ್ಷೇತ್ರದ ಸಂಸದರಿಗೇ ಕಾಮಗಾರಿಯ ಮಾಹಿತಿ ಇಲ್ಲ. ಸಿದ್ದರಾಮಯ್ಯ ಅವರಿಗೂ ಮಾಹಿತಿ ಇಲ್ಲ ಅನಿಸುತ್ತದೆ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ, ಅಭಿವೃದ್ಧಿ ಪರಿಸರಕ್ಕೆ ಪೂಕರವಾಗಿರಬೇಕು. ಈಗಾಗಲೇ 15 ಕೋಟಿ ಬಿಡುಗಡೆ ಯಾಗಿದೆ ಎಂಬ ಮಾಹಿತಿ ಇದೆ. ಕೇವಲ ಅಗೆಯುವ ಕಾಮಗಾರಿಗೇ ಇಷ್ಟು ಹಣ ಖರ್ಚಾಗಲು ಸಾಧ್ಯವೇ? ಇದರ ಬಗ್ಗೆ ತನಿಖೆ ಆಗಬೇಕು. ಕಾಮಗಾರಿಯಿಂದ ದೇವಸ್ಥಾನಕ್ಕೆ ಧಕ್ಕೆಯಾಗಲಿದ್ದು, ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈಕಾ ಪ್ರೇಮ್‌ಕುಮಾರ್ ಮಾತನಾಡಿ, ರಾಜ್ಯದಲ್ಲಿ ಹಿಂದೂ ದೇವಾಲಯಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಜಿಲ್ಲಾಡಳಿತ ಚಾಮುಂಡಿಬೆಟ್ಟದಲ್ಲಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡು ಬೆಟ್ಟದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿದೆ. ದೇವಸ್ಥಾನದ ಪಕ್ಕದಲ್ಲಿ ಇಷ್ಟು ದೊಡ್ಡ ವೇದಿಕೆ ನಿರ್ಮಿಸಿದರೆ ರಥೋತ್ಸವ ಸಾಗಲು ಜಾಗವೇ ಇರುವುದಿಲ್ಲ. ಕಾಮಗಾರಿ ಸಂಬಂಧ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೂ ಜಿಲ್ಲಾಡಳಿತ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದೆ ಕಾಮಗಾರಿ ನಡೆಸುತ್ತಿದೆ. ದುಡ್ಡು ಮಾಡಬೇಕಿದ್ದರೆ ಒಳ್ಳೆಯ ಕೆಲಸ ಮಾಡಿ ದುಡ್ಡು ಮಾಡಿ. ಈ ರೀತಿಯ ಅವೈಜ್ಞಾನಿಕ ಕಾಮಕಾರಿಗಳಿಂದ ಬೆಟ್ಟವನ್ನು ಹಾಳು ಮಾಡಬೇಡಿ. ಕೂಡಲೇ ಕಾಮಗಾರಿ ನಿಲ್ಲಿಸದಿದ್ದರೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪರಿಸರ ಬಳಗದ ಅಧ್ಯಕ್ಷ ಪರಶುರಾಮೇಗೌಡ, ಹೃದಯವಂತ ಕನ್ನಡಿಗರ ಬಳಗದ ಅಧ್ಯಕ್ಷ ಡಿಪಿಕೆ ಪರಮೇಶ್, ಸಾಮಾಜಿಕ ಹೋರಾಟಗಾರ ಅಕ್ಬರ್, ಪರಿಸರ ಹೋರಾಟಗಾರರಾದ ಭಾನು ಪ್ರಶಾಂತ್, ಲೀಲಾ ವೆಂಕಟೇಶ್, ವಿಶ್ವನಾಥ್, ಭಾಗ್ಯ ಶಂಕರ್, ನಾಗಮಣಿ, ಗಣೇಶ್, ಅನಿಲ್, ಶ್ರೀನಿವಾಸ್ ಸೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net