ಮೈಸೂರಿನ ಚಾಮುಂಡೇಶ್ವರಿ’ ಶ್ರೀಮಂತ ದೇಗುಲ!

ಚಾಮುಂಡಿ ಬೆಟ್ಟದ ದೇವಸ್ಥಾನ
ಚಾಮುಂಡಿ ಬೆಟ್ಟದ ದೇವಸ್ಥಾನ
Published on

ಪ್ರಮುಖ ಮುಖ್ಯಾಂಶಗಳು

  • ವರಮಾನದಲ್ಲಿ ರಾಜ್ಯದಲ್ಲೇ 3ನೇ ಸ್ಥಾನ
  • ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ 4ನೇ ಶ್ರೇಣಿ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ರಾಜ್ಯದ ಪ್ರಮುಖ ಧಾರ್ಮಿಕ ತಾಣವಾಗಿರುವ ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನ ಶ್ರೀಮಂತ ದೇಗುಲವಾಗಿದ್ದು, ತನ್ನ ಆದಾಯದಿಂದ ಇದು ರಾಜ್ಯದಲ್ಲೇ 3ನೇ ಮತ್ತು ಜಿಲ್ಲೆಯಲ್ಲೇ ಮೊದಲನೇ ಸಿರಿವಂತ ದೇವಸ್ಥಾನವಾಗಿ ಹೊರಹೊಮ್ಮಿದೆ..!
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಹೆಚ್ಚಿನ ವರಮಾನ ಹೊಂದಿರುವ 10 ಪ್ರಮುಖ ದೇವಾಲಯಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಚಾಮುಂಡೇಶ್ವರಿ ಗುಡಿ 3ನೇ ಸ್ಥಾನ, ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ 4ನೇ ಸ್ಥಾನ ಗಟ್ಟಿಸಿಕೊಂಡಿದೆ. ಜಿಲ್ಲಾಪಟ್ಟಿಯಲ್ಲಿ ನಂಜನಗೂಡಿನ ದೇವಸ್ಥಾನ 2ನೇ ಸ್ಥಾನದಲ್ಲಿ ಇದೆ. ಜಿಲ್ಲೆಯ ಉಭಯ ದೇವಾಲಯಕ್ಕೆ ಹೆಚ್ಚಿನ ಭಕ್ತ ಆಗಮನದೊಂದಿಗೆ ಆದಾಯವೂ ಹರಿದು ಬರುತ್ತಿರುವುದಕ್ಕೆ ಇದು ಸಾಕ್ಷಿ ಎನಿಸಿದೆ.
ವರಮಾನ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ ಕ್ರಮವಾಗಿ 1 ಮತ್ತು 2ನೇ ಸ್ಥಾನದಲ್ಲಿವೆ. 
ಬೆಳಗಾವಿಯ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರಿನ ಸಿದ್ಧಲಿಂಗೇಶ್ವರಸ್ವಾಮಿ ದೇವಸ್ಥಾನ ಕ್ರಮವಾಗಿ 5, 6 ಮತ್ತು 7ನೇ ಸ್ಥಾನ ಪಡೆದಿವೆ. ಉಡುಪಿಯ ಬ್ರಹ್ಮಾವರ ತಾಲೂಕಿನ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 8, ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ 9, ಬೆಂಗಳೂರು ನಗರ ಜಿಲ್ಲೆಯ ಬನಶಂಕರಿ ದೇವಸ್ಥಾನ 10ನೇ ಸ್ಥಾನದಲ್ಲಿವೆ. ಈ ಪಟ್ಟಿಯಲ್ಲಿ ಜಿಲ್ಲೆಯ ಎರಡು ದೇವಸ್ಥಾನಗಳಿರುವುದು ವಿಶೇಷ.
ಕಳೆದ 3 ವರ್ಷದಲ್ಲಿ ಚಾಮುಂಡೇಶ್ವರಿ ದೇವಾಲಯದ ವರಮಾನದಲ್ಲಿ ಇಳಿಕೆಯಾಗಿದ್ದರೂ ಇದರ 3ನೇ ಸ್ಥಾನ ಅಬಾಧಿತವಾಗಿದೆ. 2022-23ರಲ್ಲಿ 25.40 ಕೋಟಿ ರೂ. ಮತ್ತು 2023-24ರಲ್ಲಿ 56.67 ಕೋಟಿ ರೂ. ಹರಿದು ಬಂದಿತ್ತು. ಕಳೆದ 2024-25ರಲ್ಲಿ 50.68 ಕೋಟಿ ರೂ. ಆದಾಯ ಕ್ರೋಡೀಕರಣವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ 5.99 ಕೋಟಿ ರೂ. ಕಡಿಮೆಯಾಗಿದೆ.
ನಂಜನಗೂಡಿನ ಶ್ರೀ ಕಂಠೇಶ್ವರಸ್ವಾಮಿ ದೇವಸ್ಥಾನದ ವರಮಾನ ಮಾತ್ರ ಕಳೆದ ಮೂರು ವರ್ಷದಲ್ಲಿ ಏರುತ್ತಲೇ ಸಾಗಿದೆ. 2022-23ರಲ್ಲಿ 26.71 ಕೋಟಿ ರೂ. ಆದಾಯವಿದ್ದರೆ, 2023-24ರಲ್ಲಿ 30.36 ಕೋಟಿ ರೂ.ಗೆ ಏರಿಕೆಯಾಗಿದೆ. 2024-25ರಲ್ಲಿ ಅದು 36.12 ಕೋಟಿ ರೂಪಾಯಿಯಷ್ಟಾಗಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ 6 ಕೋಟಿ ರೂ. ಹೆಚ್ಚಿನ ವರಮಾನ ಬಂದಿದೆ. 
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ ನೂರರ ಗಡಿದಾಟಿದ್ದು, ಕಳೆದ 3 ವರ್ಷದಲ್ಲಿ ಕ್ರಮವಾಗಿ 123 ಕೋಟಿ ರೂ., 146 ಕೋಟಿ ರೂ., ಮತ್ತು 155 ಕೋಟಿ ರೂ. ಆದಾಯ ಅದಕ್ಕೆ ಬಂದಿದೆ. ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನ ಆದಾಯವು ಚಾಮುಂಡೇಶ್ವರಿ ದೇವಸ್ಥಾನಕ್ಕಿಂತ 21 ಕೋಟಿ ರೂ. ಹೆಚ್ಚಿದೆ.
ಚಾಮುಂಡಿ ದೇವಿಯ ದರ್ಶನ ಪಡೆದ ಭಕ್ತರಿಂದ ಕೋಟ್ಯಂತರ ಆದಾಯ ಬರುತ್ತದೆ. ಇಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡುವುದರೊಂದಿಗೆ ವಿಶೇಷ ದರ್ಶನ ಟಿಕೆಟ್ ಲಭ್ಯ ಇದೆ. ಇದುವೇ ದೇವಸ್ಥಾನ ಮುಖ್ಯ ಆದಾಯ ಮೂಲ. ಹುಂಡಿ ಕಾಸು ಮತ್ತು  ದೇವಿಗೆ ಸೀರೆ ಅರ್ಪಣೆ, ಚಂಡಿಕಾಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ಕಾಗಿ ಭಕ್ತರಿಂದ ಸೇವಾ ಶುಲ್ಕ ಸಂಗ್ರಹಿಸಲಾಗುತ್ತದೆ.
‘ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪ್ರತಿವರ್ಷ ಹೆಚ್ಚಿನ ವರಮಾನ ಬರುತ್ತಿದ್ದು, ಇದರ ಸಮಗ್ರ ಅಭಿವೃದ್ಧಿಗೆ ದೇವಾಲಯದ ನಿಧಿಯಿಂದ ವೆಚ್ಚ ಭರಿಸಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಅನ್ನ ದಾಸೋಹ ವ್ಯವಸ್ಥೆ ಮತ್ತು ಅಗತ್ಯ ಮೂಲಸೌಲಭ್ಯ ಕಲ್ಪಿಸಿಕೊಡುವ ಕೆಲಸವಾಗುತ್ತಿದೆ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ತಲಕಾಡಿನ ವೈದ್ಯೇಶ್ವರಸ್ವಾಮಿ 3ನೇ ಧನಿಕ ದೇಗುಲ

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ 1,311 ದೇವಸ್ಥಾನಗಳಿವೆ. ಎ ಪ್ರವರ್ಗದಲ್ಲಿ 5 ದೇವಸ್ಥಾನಗಳಿವೆ. ಈ ಎಲ್ಲರದಲ್ಲೂ ಚಾಮುಂಡೇಶ್ವರಿ ದೇವಸ್ಥಾನವೇ ಅಧಿಕ ಆದಾಯ ಹೊಂದಿದೆ.
 ಬಳಿಕ 2024-25ನೇ ಸಾಲಿನಲ್ಲಿ 19.9 ಕೋಟಿ ರೂ. ಆದಾಯದೊಂದಿಗೆ ತಿ.ನರಸೀಪುರ ತಾಲೂಕಿನ ತಲಕಾಡಿನ ವೈದ್ಯೇಶ್ವರಸ್ವಾಮಿ ದೇವಸ್ಥಾನವು ಜಿಲ್ಲೆಯ 3ನೇ ಧನಿಕ ದೇಗುಲವಾಗಿದೆ. 95.14 ಲಕ್ಷ ರೂ. ಆದಾಯ ಹೊಂದಿರುವ ಪಿರಿಯಾಪಟ್ಟಣದ ಮಸಣಿಕಮ್ಮ ದೇವಸ್ಥಾನ 5ನೇ ಸ್ಥಾನ, 51.22 ಲಕ್ಷ ರೂ. ವರಮಾನದೊಂದಿಗೆ ತಿ.ನರಸೀಪುರ ತಾಲೂಕಿನ ಮೂಗೂರಿನ ತ್ರಿಪುರಸುಂದರಿ ಅಮ್ಮನವರ ದೇವಸ್ಥಾನ 6ನೇ ಸ್ಥಾನ ಪಡೆದುಕೊಂಡಿದೆ.

ದುಡ್ಡಿಗೆ ಕೊರತೆ ಇಲ್ಲ:

ಚಾಮುಂಡೇಶ್ವರಿ ಪ್ರಾಧಿಕಾರದಲ್ಲಿ ದುಡ್ಡಿನ ಕೊರತೆ ಇಲ್ಲ. 169 ಕೋಟಿ ರೂ. ನಿಶ್ಚಿತ ಠೇವಣಿ(ಎಫ್‌ಡಿ) ಇದ್ದು, ಇದರ ಆದಾಯದಲ್ಲಿ ವಿವಿಧ ವೆಚ್ಚ ಭರಿಸಬಹುದಾಗಿದೆ. ಜತೆಗೆ, ದೇವಾಲಯದ ಉಳಿತಾಯ ಖಾತೆಯಲ್ಲಿ 20.24 ಕೋಟಿ ರೂ. ಇದೆ. ಖರ್ಚು ತೆಗೆದರೂ ನಿವ್ವಳ ಆದಾಯ ಉಳಿದಿದೆ. ಜತೆಗೆ, ಪ್ರತಿ ವರ್ಷ ಆದಾಯ ಹೆಚ್ಚಾಗುತ್ತಿದೆ. 

ಕೆಎಸ್‌ಎ ಅಧಿಕಾರಿಗಳಿಗೆ ಮೂಗುದಾರ:

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ-2024ಕ್ಕೆ ತಿದ್ದುಪಡಿ ಮಾಡುವ ಮೂಲಕ ಕೆಎಸ್‌ಎ ಅಧಿಕಾರಿಗೆ ಮೂಗುದಾರ ಹಾಕಿ, ಇಡೀ ಅಧಿಕಾರವನ್ನು ಐಎಎಸ್ ಅಧಿಕಾರಿಗೆ ವರ್ಗಾಯಿಸಲಾಗಿದೆ.
 ಎ-ದರ್ಜೆ ಹಿರಿಯ ಶ್ರೇಣಿಯ ಅಧಿಕಾರಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ, ಧರ್ಮಾದಾಯ ಇಲಾಖೆಯ ಬಿ-ದರ್ಜೆಯ ಅಧಿಕಾರಿಯನ್ನು ಉಪಕಾರ್ಯದರ್ಶಿ ನೇಮಕ ಮಾಡಬೇಕಿದೆ. ಕಳೆದ ಅಧಿವೇಶನದಲ್ಲಿ ಈ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿದೆ.

ವರ್ಷಕ್ಕೆ 40 ಲಕ್ಷ ಜನರು ಭೇಟಿ

ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನಕ್ಕಾಗಿ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ. 2024ರಲ್ಲಿ 42.51 ಲಕ್ಷ ಜನರು ಬಂದಿದ್ದಾರೆ. 
2023ರಲ್ಲಿ ಈ ಸಂಖ್ಯೆ 44.41 ಲಕ್ಷ ಆಗಿತ್ತು. ರಾಜಕಾರಣಿಗಳು, ಚಲನಚಿತ್ರ ನಟರು ನಾಡದೇವಿ ಕೃಪೆಗೆ ಪಾತ್ರವಾಗಲು ಇಲ್ಲಿಗೆ ದೌಡಾಯಿಸುತ್ತಿದ್ದಾರೆ. ಆಷಾಢ ಮಾಸದ 4 ಶುಕ್ರವಾರಗಳಂದು, ದಸರಾ, ಚಾಮುಂಡೇಶ್ವರಿದೇವಿಯ ವರ್ಧಂತಿ, ದೀಪಾವಳಿ ಸೇರಿದಂತೆ ವಿವಿಧ ಹಬ್ಬ, ವಾರಾಂತ್ಯದಲ್ಲಿ ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಜನಸಾಗರ ಹರಿದು ಬರುತ್ತಿದೆ. 
ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವುದರಿಂದ ಅಕ್ಕಪಕ್ಕದ ರಾಜ್ಯಗಳ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಮೈಸೂರಿಗೆ ಬರುವ ಬಹುತೇಕ ಪ್ರವಾಸಿಗರು ಇಲ್ಲಿಗೆ ಒಮ್ಮೆ ಭೇಟಿ ನೀಡಿ ದೇವಿ ದರ್ಶನ ಪಡೆದುಕೊಳ್ಳುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net