ಗ್ರಾಮೀಣ ಕ್ರೀಡೆಗಳ ಪುನಶ್ಚೇತನಕ್ಕೆ ಎಲ್ಲರೂ ಬೆಂಬಲಿಸಿ

  ತಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೋಡೆತ್ತಿನ ಚಕ್ಕಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು.
ತಿ.ನರಸೀಪುರ ತಾಲೂಕಿನ ಕೇತುಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೋಡೆತ್ತಿನ ಚಕ್ಕಡಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು.
Published on
ತಿ.ನರಸೀಪುರ : ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಅವುಗಳ ಪುನಶ್ಚೇತನಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಮೈಮುಲ್ ಮಾಜಿ ಅಧ್ಯಕ್ಷ ಆರ್. ಚೆಲುವರಾಜು ಹೇಳಿದರು.
ತಾಲೂಕಿನ ಕೇತುಪುರ ಗ್ರಾಮದಲ್ಲಿ ಶನಿವಾರ ಕೆಂಡಗಣ್ಣ ಹಾಗೂ ಮಹದೇಶ್ವರಸ್ವಾಮಿ ದೇವಸ್ಥಾನದ ಉದ್ಘಾಟನೆ ಮತ್ತು ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಗ್ರಾಮದ ಕೆಂಪೇಗೌಡ ಯುವಕರ ಬಳಗ ಶನಿವಾರ ಆಯೋಜಿಸಿದ್ದ ಜೋಡೆತ್ತಿನ ಚಕ್ಕಡಿ ಓಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಾಡಿನ ಪ್ರದೇಶಗಳಲ್ಲಿ ಮಾತ್ರ ಗ್ರಾಮೀಣ ಕ್ರೀಡೆಗಳು ಇನ್ನೂ ಸಲ್ಪ ಉಳಿದುಕೊಂಡಿವೆ. ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಎತ್ತು ಹಾಗೂ ಎತ್ತಿನಗಾಡಿಗಳು ಸಾಮಾನ್ಯವಾಗಿ ಇರುತ್ತಿದ್ದವು. ಆದರೆ ಕಾಲ ಬದಲಾದಂತೆ ವೈಜ್ಞಾನಿಕ ಪ್ರಗತಿಯ ಪರಿಣಾಮ ಅವೆಲ್ಲವೂ ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೆಂಪೇಗೌಡ ಯುವಕರ ಬಳಗ ಜೋಡೆತ್ತಿನ ಚಕ್ಕಡಿ ಓಟದ ಸ್ಪರ್ಧೆಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಹಳ್ಳಿಗಾಡಿನಲ್ಲಿ ಇಂತಹ ಕ್ರೀಡಾಕೂಟಗಳು ಇನ್ನಷ್ಟು ಹೆಚ್ಚಾಗಬೇಕು ಎಂದು ಅವರು ಆಶಿಸಿದರು.
ಎತ್ತುಗಳನ್ನು ಪ್ರೀತಿಯಿಂದ ಸಾಕಬೇಕು:
ಎತ್ತುಗಳು ಕೃಷಿಕರ ಜೀವನಾಡಿ. ಅವುಗಳನ್ನು ಪ್ರೀತಿಯಿಂದ ಸಾಕಬೇಕು. ಉತ್ತಮ ರೀತಿಯಲ್ಲಿ ತರಬೇತಿ ನೀಡಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡುವುದು ರೈತರ ಪರಿಶ್ರಮ ಮತ್ತು ಕೌಶಲಗಳನ್ನು ಪ್ರತಿಬಿಂಬಿಸುತ್ತದೆ ಎಂದರು. ಸ್ಪರ್ಧೆಗಳು ಯಾವಾಗಲೂ ಕ್ರೀಡಾ ಮನೋಭಾವದಿಂದ ನಡೆಯಬೇಕು. ಗೆಲುವು ಮತ್ತು ಸೋಲು ಸಹಜ. ಭಾಗವಹಿಸುವುದೇ ದೊಡ್ಡ ಸಾಧನೆ ಎಂಬ ಮನೋಭಾವ ಎಲ್ಲರಲ್ಲೂ ಇರಬೇಕು ಎಂದು ಚೆಲುವರಾಜು ಸಲಹೆ ನೀಡಿದರು.
ಹಾಸನ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜೋಡೆತ್ತುಗಳು ವೇಗದ ಓಟದ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿದವು. ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪರ್ಧಿಗಳಿಗೆ ಶುಭ ಕೋರಿದರು.
ಮೈಮುಲ್ ಮಾಜಿ ನಿರ್ದೇಶಕ ಪ್ರಭಾಕರ್, ಡೇರಿ ಅಧ್ಯಕ್ಷ ಸಂದೀಪ್, ಉದ್ಯಮಿ ಪ್ರಕಾಶ್, ಸಿದ್ದೇಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿನ್ನಸ್ವಾಮಿ, ನಾಗರಾಜು, ಕುಂತನಹಳ್ಳಿ ಚೆಲುವಣ್ಣ, ಅತ್ತಹಳ್ಳಿ ರವಿ, ಕೆಂಪೇಗೌಡ ಯುವಕರ ಬಳಗದ ಅಧ್ಯಕ್ಷ ಸುನೀಲ್ ಕುಮಾರ್, ಕಾರ್ಯಕ್ರಮದ ಸಂಘಟಕ ಮಹೇಶ್ ಮೂರ್ತಿ, ಮುಖಂಡರಾದ ನವೀನ್, ವಿನಯ್, ಆದರ್ಶ, ನಾಗರಾಜು, ರಾಜೇಶ್, ಮನು ಸೇರಿದಂತೆ ಯುವಕರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net