ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಆರಂಭಗೊಂಡ ಭಾರತ್ ಆಸ್ಪತ್ರೆಯ ಡೇ ಕೇರ್ ಉದ್ಘಾಟನೆಯಲ್ಲಿ ಡಾ.ಬಿ.ಎಸ್. ಅಜಯ್ಕುಮಾರ್, ಅಂಜಲಿ ಅಜಯ್‌ಕುಮಾರ್, ಗೌತಮ್ ಧಮೇರ್ಲಾ, ಡಾ. ವೈ.ಎಸ್.ಮಾಧವಿ, ಡಾ. ಸಿ.ಬಿ. ಅವಿನಾಶ್, ಡಾ. ಎಂ. ವಿಜಯಕುಮಾರ್, ಡಾ. ಕೆ.ಎನ್. ಸಂತೋಷ್‌ಕುಮಾರ್ ಇತರರು ಇದ್ದರು.
ಸಮಯದ ಅಭಾವ ಇರುವವರು ಕುವೆಂಪುನಗರದಲ್ಲಿರುವ ಡೇ ಕೇರ್‌ನಲ್ಲಿಯೂ ಚಿಕಿತ್ಸೆ ಪಡೆಯಬಹುದು
ಜನರಿಗೆ ಸುಲಭವಾಗಿ ಚಿಕಿತ್ಸೆ, ವೈದ್ಯರ ಸಲಹೆ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ನಗರದ ವಿವಿಧ ಭಾಗದಲ್ಲಿ ಡೇ ಕೇರ್‌ಗಳನ್ನು ತೆರೆಯುವ ಉದ್ದೇಶವಿದೆ
ಮೈಸೂರು:ರೋಗಿ ಕೇಂದ್ರಿತ ಆಂಕೊಲಾಜಿ ಸೇವೆಗಳ ಲಭ್ಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ನಗರದ ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆ (ಬಿಎಚ್‌ಐಒ)ಯಿಂದ ಕುವೆಂಪುನಗರದ ವಿಶ್ವಮಾನದ ಜೋಡಿ ರಸ್ತೆಯಲ್ಲಿ ಅತ್ಯಾಧುನಿಕ ‘ಕ್ಯಾನ್ಸರ್ ಡೇ ಕೇರ್ ಕ್ಲಿನಿಕ್’ಗೆ ಅಧಿಕೃತ ಚಾಲನೆ ನೀಡಲಾಯಿತು.
ಡೇ ಕೇರ್ ಕ್ಲಿನಿಕ್ ಅನ್ನು ಉದ್ಘಾಟಿಸಿದ ಬಿಎಚ್‌ಐಒ ಸಂಸ್ಥೆ ಅಧ್ಯಕ್ಷ ಡಾ.ಬಿ.ಎಸ್.ಅಜಯ್ಕುಮಾರ್ ಮಾತನಾಡಿ, ಭಾರತ್ ಆಸ್ಪತ್ರೆಯು ನಗರದಲ್ಲಿ 30 ವರ್ಷಕ್ಕೂ ಹೆಚ್ಚು ಸಮಯದಿಂದ ಮೈಸೂರು ಭಾಗದ ಜನರಿಗೆ ಚಿಕಿತ್ಸೆ ನೀಡುತ್ತಾ ಬರುತ್ತಿದೆ. ಕ್ಯಾನ್ಸರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಿಗೆ ಸುಲಭವಾಗಿ ಚಿಕಿತ್ಸೆ ದೊರೆಯಬೇಕು ಎನ್ನುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.
ಹೆಬ್ಬಾಳು ರಿಂಗ್ ರೋಡ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಮಯದ ಅಭಾವ ಇರುವವರು ಕುವೆಂಪುನಗರದಲ್ಲಿರುವ ಡೇ ಕೇರ್‌ನಲ್ಲಿಯೂ ಚಿಕಿತ್ಸೆ ಪಡೆಯಬಹುದು. ಇದರಿಂದ ದೂರದ ಪ್ರಯಾಣ, ಸಮಯ ಉಳಿತಾಯವಾಗುತ್ತದೆ. ನುರಿತ ತಜ್ಞ ವೈದ್ಯರು, ಸಲಹೆ, ಚಿಕಿತ್ಸೆಯನ್ನು ನೀಡುತ್ತಾರೆ ಎಂದು ತಿಳಿಸಿದರು.
ಜನರಿಗೆ ಸುಲಭವಾಗಿ ಚಿಕಿತ್ಸೆ, ವೈದ್ಯರ ಸಲಹೆ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ನಗರದ ವಿವಿಧ ಭಾಗದಲ್ಲಿ ಡೇ ಕೇರ್‌ಗಳನ್ನು ತೆರೆಯುವ ಉದ್ದೇಶವಿದೆ. ಸರಿಯಾದ ಸಮಯದಲ್ಲಿ ರೋಗ ಪತ್ತೆ ಹಚ್ಚಿ ಬಹುಬೇಗ ಚಿಕಿತ್ಸೆ ದೊರೆಯುವಂತಾಗಬೇಕು ಎನ್ನುವ ಉದ್ದೇಶ ನಮ್ಮದು ಎಂದರು.
ಈ ಕ್ಲಿನಿಕ್ ಡೇ-ಕೇರ್ ಚಿಕಿತ್ಸಾ ಮಾದರಿಯನ್ನು ಅಳವಡಿಸಿಕೊಂಡಿದ್ದು, ರೋಗಿಗಳು ದೀರ್ಘಕಾಲ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದೆ ಸುಧಾರಿತ ಚಿಕಿತ್ಸೆಗಳನ್ನು ಪಡೆಯಲು ಇದು ಅನುವು ಮಾಡಿಕೊಡುತ್ತದೆ. ಈ ವಿಧಾನವು ಚಿಕಿತ್ಸಾ ವೆಚ್ಚ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ರೋಗಿಗಳು ತಮ್ಮ ದೈನಂದಿನ ಚಟುವಟಿಕೆಗಳನ್ನು ಕನಿಷ್ಠ ಅಡಚಣೆಯೊಂದಿಗೆ ಮುಂದುವರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಬಿಎಚ್‌ಐಒ ನಿರ್ದೇಶಕಿ ಅಂಜಲಿ ಅಜಯ್ಕುಮಾರ್ ಮಾತನಾಡಿ, ವಿಶ್ವದರ್ಜೆಯ ಆಂಕೊಲಾಜಿ ಆರೈಕೆಯನ್ನು ಸಮುದಾಯಕ್ಕೆ ಹತ್ತಿರ ತರುವ ಜತೆಗೆ ರೋಗಿಗಳ ಸೌಕರ್ಯ ಮತ್ತು ಸುಲಭ ಚಿಕಿತ್ಸೆ ದೊರೆಯಬೇಕು ಎನ್ನುವ ಉದ್ದೇಶದಿಂದ ಈ ಡೇ-ಕೇರ್ ಆರಂಭಿಸಲಾಗಿದೆ ಎಂದರು.
ಕೀಮೋಥೆರಪಿ, ಟಾರ್ಗೆಟೆಡ್ ಥೆರಪಿ ಮತ್ತು ಇಮ್ಯುನೊಥೆರಪಿಯೊಂದಿಗೆ ಸಮಗ್ರ ಪೂರಕ ಆರೈಕೆ ಇರಲಿದೆ. ಸಮಾಲೋಚನಾ ಕೊಠಡಿಗಳು, ಸಣ್ಣ ಶಸ್ತ್ರಚಿಕಿತ್ಸೆಗಳಿಗಾಗಿ ಮೀಸಲಾದ ಡೇ-ಕೇರ್ ಘಟಕ ಮತ್ತು ಚಿಕಿತ್ಸೆಯ ನಂತರದ ಮೇಲ್ವಿಚಾರಣೆಗಾಗಿ ಹಾಸಿಗೆಗಳನ್ನು ಒಳಗೊಂಡಿದೆ. ಸಮಗ್ರ ರೋಗನಿರ್ಣಯ, ಫಾರ್ಮಸಿ ಮತ್ತು ತಡೆಗಟ್ಟುವ ತಪಾಸಣೆ ಸೇವೆಗಳು ಒಂದೇ ಸೂರಿನಡಿ ಸುಗಮ ಚಿಕಿತ್ಸಾ ದೊರೆಯಲಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಹೆಬ್ಬಾಳಿನಲ್ಲಿರುವ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಬಿಎಚ್‌ಐಒ ಸಿಒಒ ಗೌತಮ್ ಧಮೇರ್ಲಾ, ಮುಖ್ಯ ವಿಕಿರಣ ಆಂಕೊಲಜಿಸ್ಟ್ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ. ವೈ.ಎಸ್. ಮಾಧವಿ, ಮುಖ್ಯ ವೈದ್ಯಕೀಯ ಆಂಕೊಲಜಿಸ್ಟ್ ಡಾ. ಸಿ.ಬಿ. ಅವಿನಾಶ್, ಹಿರಿಯ ಸರ್ಜಿಕಲ್ ಆಂಕೊಲಜಿಸ್ಟ್ ಮತ್ತು ರೋಬೋಟಿಕ್ ಸರ್ಜನ್ ಡಾ. ಎಂ. ವಿಜಯಕುಮಾರ್, ಕನ್ಸಲ್ಟೆಂಟ್ ಮೆಡಿಕಲ್ ಮತ್ತು ಹೆಮಟೊ ಆಂಕೊಲಜಿ ಮತ್ತು ಬಿಎಂಟಿ ವೈದ್ಯ ಡಾ. ಕೆ.ಎನ್. ಸಂತೋಷ್‌ಕುಮಾರ್ ಇತರರು ಇದ್ದರು.