ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಅಭಿಯಾನ

ನಗರದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡ ಜಾಗೃತಿ ಸಮಿತಿ ಸದಸ್ಯರೊಂದಿಗೆ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಮಾತನಾಡಿದರು. ದಾಸೇಗೌಡ,  ಡಾ.ವಿನೋದಮ್ಮ, ಎಚ್.ಆರ್.ರವಿಪ್ರಸಾದ್ ಕುಮಾರ್, ಡಾ.ಬಿ.ಎಸ್.ದಿನಮಣಿ , ನಾ.ದಿವಾಕರ, ಪರಮೇಶ್, ಮೋಹನ್ ಕುಮಾರ್ ಗೌಡ ಇನ್ನಿತರರಿದ್ದರು.
ನಗರದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡ ಜಾಗೃತಿ ಸಮಿತಿ ಸದಸ್ಯರೊಂದಿಗೆ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಮಾತನಾಡಿದರು. ದಾಸೇಗೌಡ, ಡಾ.ವಿನೋದಮ್ಮ, ಎಚ್.ಆರ್.ರವಿಪ್ರಸಾದ್ ಕುಮಾರ್, ಡಾ.ಬಿ.ಎಸ್.ದಿನಮಣಿ , ನಾ.ದಿವಾಕರ, ಪರಮೇಶ್, ಮೋಹನ್ ಕುಮಾರ್ ಗೌಡ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಹೇಳಿಕೆ
  • ಅನುಷ್ಠಾನ ಕುರಿತಂತೆ ಜಾಗೃತಿ ಸಮಿತಿ ಸದಸ್ಯರ ಸಭೆ
ಮೈಸೂರು: ನಗರದ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡುವ ಬಗ್ಗೆ ಅಭಿಯಾನ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಿತಿ ಸದಸ್ಯರೊಂದಿಗೆ ಸಭೆಯಲ್ಲಿ ಮಾತನಾಡಿ, ಮಾತೃಭಾಷೆಯಾದ ಕನ್ನಡವನ್ನು ಗೌರವಿಸಿ ಹೆಚ್ಚು ಬಳಕೆ ಮಾಡುವುದನ್ನು ನಾಡಿನ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. 
ಹೆಚ್ಚು ಕನ್ನಡ ಮಾಡಲು ಕನ್ನಡಕ್ಕಾಗಿ ಓಟ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರೊಂದಿಗೆ ಸಂಘಟಿಸಿ ಆಯೋಜಿಸಬೇಕು. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಬಹಳಷ್ಟು ಇಲಾಖೆ ಅಧಿಕಾರಿಗಳು ಗೈರಾಗಿದ್ದು, ಮುಂದಿನ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿದರು. 
ಸಂಚಾರ ನಿಯಮಗಳ ಫಲಕಗಳಲ್ಲಿ ಒಂದು ಬದಿಯಲ್ಲಿದ್ದರೂ ಕನ್ನಡ ಭಾಷೆ  ಬಳಕೆ ಮಾಡಬೇಕು. ಕನ್ನಡಪರ ಹೋರಾಟ ನಡೆದಾಗ ಪೊಲೀಸ್ ಇಲಾಖೆಯಿಂದ ದೂರು ದಾಖಲಿಸುವಾಗ ಕನ್ನಡ ಪರ ಹೋರಾಟದ ಸಂದರ್ಭ ಎಂದು ಉದ್ದೇಶವನ್ನು ದೂರಿನಲ್ಲಿ ನಮೂದಿಸಬೇಕು. 
ಮೈಸೂರು ನಗರ ಪ್ರವಾಸಿ ತಾಣವಾಗಿದ್ದು, ಪೆಟ್ರೋಲ್ ಬಂಕ್ ಹಾಗೂ ಇತರ ಸ್ಥಳಗಳಲ್ಲಿ ‘ಐ ಲವ್ ಮೈಸೂರು’ ಎಂಬ ಇಂಗ್ಲಿಷ್ ಪದದ  ಬದಲು ‘ನನ್ನ  ಪ್ರೀತಿಯ ಮೈಸೂರು’ ಎಂಬ ಕನ್ನಡ ಪದ ಉಪಯೋಗಿಸುವುದು ಉತ್ತಮ. ಕೆಲವು ಖಾಸಗಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕವೇ ಮಾಡಿಕೊಂಡಿಲ್ಲ ಹಾಗೂ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುವ ಕ್ರಮವಿದೆ. ಇವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮಿತಿಗೆ ಕನ್ನಡ ಅಭಿವೃದ್ಧಿ ಪ್ರಧಿಕಾರದ ನಾಮನಿರ್ದೇಶಿತ ಸದಸ್ಯ ಟಿ.ಗುರುರಾಜ್ ತಿಳಿಸಿದರು.
ಹೋರಾಟ ಅನುಮತಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪೊಲೀಸರು ಕನ್ನಡಪರ ಹೋರಾಟಗಾರರನ್ನು ಗೌರವಯುತವಾಗಿ ಕಾಣಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೂಚನಾ ಫಲಕಗಳು ಹಾಗೂ ಜಾಹೀರಾತು ಪಲಕಗಳಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು. ಡಿಟಿಪಿ ಆಪರೇಟರ್‌ಗಳಿಗೆ ಕನ್ನಡ ಭಾಷಾ ಜ್ಞಾನದ ತರಬೇತಿ ನೀಡಬೇಕು ಎಂದು ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕಡಕೊಳ ಕುಮಾರಸ್ವಾಮಿ ತಿಳಿಸಿದರು.
ಅಂಗಡಿ ಮುಂಗಟ್ಟು, ಶಿಕ್ಷಣ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡದಲ್ಲಿರಬೇಕು. ಆದರೆ ಇನ್ನೂ ಬಹಳಷ್ಟು ಕಡೆ ಈ ನಿಯಮ ಪಾಲಿಸುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕನ್ನಡ ಪರ ಹೋರಾಟಗಾರರು ಹೋರಾಟ ನಡೆಸಲಾಗುವುದು ಎಂದು ಸಮಿತಿ ಸದಸ್ಯ ಜಿ.ಮೋಹನ್ ಎಚ್ಚರಿಸಿದರು. 
ಬ್ಯಾಂಕ್‌ಗಳಲ್ಲಿ ಚಲನ್ ಸೇರಿದಂತೆ ಇತರ ನಮೂನೆಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿ ಕನ್ನಡ ಭಾಷೆಯ ಬಳಕೆಯಾಗಬೇಕು.  ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡದ ಬಳಕೆಗೆ ಆದ್ಯತೆ ನೀಡಬೇಕು ಎಂದು ಪಾಲಿಕೆ ವ್ಯಾಪ್ತಿಯ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಆರ್. ಗೋಪಾಲಕೃಷ್ಣ  ತಿಳಿಸಿದರು.
ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಚರ್ಚಿಸಿರುವ ವಿಷಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆಯಾ ಇಲಾಖೆಗೆ ಪತ್ರ ಬರೆಯಬೇಕು ಎಂದು ಎಡಿಸಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುದರ್ಶನ್ ಅವರಿಗೆ ಸೂಚಿಸಿದರು. 
ಸಭೆಯಲ್ಲಿ ಪಾಲಿಕೆ ಉಪ ಆಯುಕ್ತ ದಾಸೇಗೌಡ, ಸಮಿತಿ ಸದಸ್ಯರಾದ  ಡಾ.ವಿನೋದಮ್ಮ, ಎಚ್.ಆರ್.ರವಿಪ್ರಸಾದ್ ಕುಮಾರ್, ಡಾ.ಬಿ.ಎಸ್.ದಿನಮಣಿ , ನಾ.ದಿವಾಕರ, ಪರಮೇಶ್, ಮೋಹನ್ ಕುಮಾರ್ ಗೌಡ, ಡಾ. ಎಂ.ಪಿ. ಮಂಜಪ್ಪ ಶೆಟ್ಟಿ ಮಸಗಲಿ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net