ಅಭಿಯಾನದಿಂದ ಪೋಲಿಯೋಮುಕ್ತ ಸಮಾಜ ನಿರ್ಮಾಣ: ಶಾಸಕ ತನ್ವೀರ್‌ಸೇಠ್

ಮೈಸೂರು ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಮಗುವಿಗೆ ಪೋಲಿಯೋ ಹನಿ ಹಾಕಿದರು. ಸಿ.ಎನ್.ಮಂಜೇಗೌಡ, ಜಿ.ಲಕ್ಷ್ಮೀಕಾಂತ ರೆಡ್ಡಿ, ಎಸ್.ಉಕೇಶ್‌ಕುಮಾರ್, ಮಲ್ಲಿಕಾರ್ಜುನ ಬಾಲದಂಡಿ, ಡಾ.ಕುಮಾರಸ್ವಾಮಿ, ಅರೀಫ್ ಹುಸೇನ್, ಸುಂದರ್ ರಾಜ್ ಇತರರು ಇದ್ದರು.
ಮೈಸೂರು ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಮಗುವಿಗೆ ಪೋಲಿಯೋ ಹನಿ ಹಾಕಿದರು. ಸಿ.ಎನ್.ಮಂಜೇಗೌಡ, ಜಿ.ಲಕ್ಷ್ಮೀಕಾಂತ ರೆಡ್ಡಿ, ಎಸ್.ಉಕೇಶ್‌ಕುಮಾರ್, ಮಲ್ಲಿಕಾರ್ಜುನ ಬಾಲದಂಡಿ, ಡಾ.ಕುಮಾರಸ್ವಾಮಿ, ಅರೀಫ್ ಹುಸೇನ್, ಸುಂದರ್ ರಾಜ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಲವು ವರ್ಷಗಳ ಹಿಂದೆ ಪ್ರತಿ ಐದು ಮನೆಗಳಲ್ಲಿ ಒಂದು ಮಗುವಾದರೂ ಪೋಲಿಯೋ ಪೀಡಿತನಾಗಿರುತ್ತಿತ್ತು
  • ಇದನ್ನು ಸಾಮಾಜಿಕ ಪಿಡುಗು ಎಂದು ಪರಿಗಣಿಸಿ ವಿಶ್ವಸಂಸ್ಥೆ, ಹಲವು ಸಂಘಟನೆಗಳ ಸಹಕಾರದಿಂದ ಪೋಲಿಯೋ ನಿರ್ಮೂಲನೆಗೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಹನಿ ಹಾಕಿಸುವ ಅಭಿಯಾನ ಆರಂಭಿಸಿತು
ಮೈಸೂರು:ಸತತ ಅಭಿಯಾನದಿಂದಾಗಿ ಪೋಲಿಯೋಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದು ಶಾಸಕ ತನ್ವೀರ್‌ಸೇಠ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಬಡಾಮಕಾನ್ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಹಾಗೂ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಲವು ವರ್ಷಗಳ ಹಿಂದೆ ಪ್ರತಿ ಐದು ಮನೆಗಳಲ್ಲಿ ಒಂದು ಮಗುವಾದರೂ ಪೋಲಿಯೋ ಪೀಡಿತನಾಗಿರುತ್ತಿತ್ತು. ಇದನ್ನು ಸಾಮಾಜಿಕ ಪಿಡುಗು ಎಂದು ಪರಿಗಣಿಸಿ ವಿಶ್ವಸಂಸ್ಥೆ, ಹಲವು ಸಂಘಟನೆಗಳ ಸಹಕಾರದಿಂದ ಪೋಲಿಯೋ ನಿರ್ಮೂಲನೆಗೆ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಹನಿ ಹಾಕಿಸುವ ಅಭಿಯಾನ ಆರಂಭಿಸಿತು. ಅದು ಹಂತಹಂತವಾಗಿ ಫಲಕೊಟ್ಟಿ, ಬಹುತೇಕ ನಿರ್ಮೂಲನೆ ಅಗಿದೆ ಎಂದರು.
ದುಡಿಯಲು ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ನಮ್ಮ ಸರ್ಕಾರ ಬಡಾಮಕಾನ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹಲವು ವರ್ಷಗಳ ಪರಿಶ್ರಮ, ನಿರಂತರ ಪ್ರಯತ್ನ ಮತ್ತು ಒಂದು ದೊಡ್ಡ ಕನಸು ಈ ಭಾಗಕ್ಕೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬುದಾಗಿತ್ತು. ಈಗ ಕಟ್ಟಡ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ತಜ್ಞ ವೈದ್ಯರು ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಅಲ್ಲದೆ ತಾಯಿ ಮತ್ತು ಮಗುವಿನ (ಗರ್ಭಿಣಿಯರ ಮತ್ತು ಮಕ್ಕಳ) ವಿಶೇಷ ಚಿಕಿತ್ಸೆಗಾಗಿ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಒಟ್ಟು 2,19,521 ಮಕ್ಕಳನ್ನು ಗುರುತಿಸಿ ಎಲ್ಲರಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲಾದ್ಯಂತ ಒಟ್ಟು 1,641 ಪೋಲಿಯೋ ಬೂತ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ಪ್ರವಾಸಿ ತಾಣವಾಗಿರುವುದರಿಂದ ಮತ್ತು ಇಲ್ಲಿ ಜನರ ಸಂಚಾರ ಹೆಚ್ಚಿರುವುದರಿಂದ, ಚಾಮುಂಡಿ ಬೆಟ್ಟ, ಅರಮನೆ ಆವರಣ ಹಾಗೂ ಮೃಗಾಲಯ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 49 ವಿಶೇಷ ಟ್ರಾನ್ಸಿಟ್ ಪಾಯಿಂಟ್‌ಗಳನ್ನು ತೆರೆಯಲಾಗಿದೆ ಎಂದರು.
ಬೂತ್‌ಗಳಲ್ಲಿ ಲಸಿಕೆ ಪಡೆಯದ ಮಕ್ಕಳನ್ನು ಪತ್ತೆ ಹಚ್ಚಲು ಸೋಮವಾರ, ಮಂಗಳವಾರ ಮತ್ತು ಬುಧವಾರದಂದು ಮನೆ ಮನೆ ಸಮೀಕ್ಷೆ ನಡೆಸಲಾಗುವುದು. ಇದಕ್ಕಾಗಿ 821 ತಂಡಗಳನ್ನು ರಚಿಸಲಾಗಿದ್ದು, ಸುಮಾರು 7 ಲಕ್ಷಕ್ಕೂ ಅಧಿಕ ಮನೆಗಳಿಗೆ ಈ ತಂಡಗಳು ಭೇಟಿ ನೀಡಲಿವೆ. ಕಾರ್ಯಕ್ರಮದ ಮೇಲ್ವಿಚಾರಣೆಗೆ 328 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಬಸ್ ನಿಲ್ದಾಣ ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ಸಂಚರಿಸುವ ಮಕ್ಕಳಿಗಾಗಿ 3 ಮೊಬೈಲ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಲಸಿಕೆಯ ಗುಣಮಟ್ಟ ಮತ್ತು ತಾಪಮಾನ ಕಾಯ್ದುಕೊಳ್ಳಲು ಜಿಲ್ಲಾದ್ಯಂತ 168 ಐಎಲ್‌ಆರ್ ಡೀಪ್ ಫ್ರೀಜರ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಸಾರಿಗೆ ಸೌಲಭ್ಯಗಳಿಲ್ಲದ ಮತ್ತು ತಲುಪಲು ಕಷ್ಟಸಾಧ್ಯವಾಗಿರುವ ಹಾಡಿಗಳು ಸೇರಿದಂತೆ ಒಟ್ಟು 1,396 ಹೈ-ರಿಸ್ಕ್ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಮಕ್ಕಳಿಗೂ ಹನಿ ತಲುಪಿಸಲು ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಉದ್ಘಾಟನೆಗೊಂಡಿರುವ ಬಡಾಮಕಾನ್ ಆಸ್ಪತ್ರೆಗೆ ಈಗ ವೈದ್ಯರನ್ನು ನಿಯೋಜಿಸಿದ್ದು ಮುಂದಿನ ತಜ್ಞ ವೈದ್ಯರನ್ನು ನಿಯೋಜನೆ ಮಾಡಲಾಗುವುದು. ನಗರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಭಿನ್ನ ವಿಭಾಗಗಳ ಸ್ಪೆಷಲಿಸ್ಟ್‌ಗಳು ಲಭ್ಯವಿದ್ದು, ವಾರದಲ್ಲಿ ಎರಡು-ಮೂರು ದಿನ ವಿಶೇಷ ತಜ್ಞರ ಸೇವೆ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು
ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಿಎಚ್‌ಸಿ (ಸಮುದಾಯ ಆರೋಗ್ಯ ಕೇಂದ್ರ) ಆಗಿ ಮೇಲ್ದರ್ಜೆಗೇರಿಸುವ ಯೋಜನೆಯಿದೆ. ಇದರಲ್ಲಿ ’ಆರ್‌ಸಿಎಚ್ ಟ್ರಯಾಡ್’ ವ್ಯವಸ್ಥೆಯಡಿ ಮಹಿಳಾ ತಜ್ಞರು, ಅರಿವಳಿಕೆ ತಜ್ಞರು ಹಾಗೂ ಮಕ್ಕಳ ತಜ್ಞರನ್ನು ಒಳಗೊಂಡ ತಂಡವನ್ನು ಕಾಯಂ ಆಗಿ ಇಲ್ಲಿ ಲಭ್ಯವಾಗುವಂತೆ ಮಾಡಲು ಸೂಕ್ತ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಉಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿಸಿಪಿ ಸುಂದರ್ ರಾಜ್, ಎಎಸ್‌ಪಿ ಮಲ್ಲಿಕ್, ಮಾಜಿ ಮೇಯರ್ ಅರೀಫ್ ಹುಸೇನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net