ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ಹೊಸಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀನಿವಾಸಗೌಡ ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಹೊಸಪುರ ಗ್ರಾಮಸ್ಥರು, ಮತ್ತು ಶಾಲೆಯ ವತಿಯಿಂದ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಗಿತ್ತು. ಗೌಡರು ನಿವೃತ್ತಿ ಹೊಂದಿದ ವಿಷಯ ತಿಳಿದ ಅವರ ಶಿಷ್ಯ ತೀ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಬಸವನಹಳ್ಳಿ ಮೂಲದ ಇಂಜಿನಿಯರ್ ಉಮಾಶಂಕರ್ ಅವರು ನೆಚ್ಚಿನ ಗುರುಗಳು ಇದ್ದಲ್ಲಿಗೇ ಆಗಮಿಸಿ ಅವರಿಗೆ ಎಲೆಕ್ಟ್ರಿಕ್ ಬೈಕನ್ನು ಕಾಣಿಕೆಯಾಗಿ ಸಮರ್ಪಿಸಿದರು. ಈ ಸಂದರ್ಭ ಮಾತನಾಡಿದ ಉಮಾಶಂಕರ್, ಬಸವನಹಳ್ಳಿ ಶಾಲೆಯಲ್ಲಿ ನಾನು ಇವರ ವಿದ್ಯಾರ್ಥಿಯಾಗಿದ್ದೆ. ಅವರ ಮಾರ್ಗದರ್ಶನದಂತೆ ವಿದ್ಯೆ ಕಲಿತು ಇಂದು ಇಂಜಿನಿಯರ್ ಹುದ್ದೆಗೇರಿದ್ದೇನೆ. ನನಗೆ ಬದುಕು ರೂಪಿಸಿಕೊಟ್ಟ ಗುರುವಿಗೆ ನನ್ನಿಂದ ಸಣ್ಣ ಗುರು ಕಾಣಿಕೆ ಮಾತ್ರ ಸಮರ್ಪಣೆಯಾಗಿದೆ ಎಂದು ವಿನಮ್ರರಾಗಿ ನುಡಿದರು. ಹಿರಿಯ ವಿದ್ಯಾರ್ಥಿ ಹೊಸಪುರ ಚಂದ್ರೇಗೌಡ ಹಾಜರಿದ್ದರು.