ಬನ್ನಿಕುಪ್ಪೆ: ಬನ್ನಿಕುಪ್ಪೆ ಕ್ಲಸ್ಟರ್ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕಲಿಕಾ ಹಬ್ಬವನ್ನು ಮರಳಯ್ಯನಕೊಪ್ಪಲು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಸಿ.ಆರ್.ಪಿ. ಕವಿತಾ, ಮುಖ್ಯ ಶಿಕ್ಷಕ ವೆಂಕಟೇಶಪ್ಪ, ಗ್ರಾ.ಪಂ. ಸದಸ್ಯ ಎಂ.ಸಿ.ಚಂದ್ರಶೇಖರ್, ಫ್ಯಾಕ್ಸ್ ನಿರ್ದೇಶಕ ಚೆಲುವರಾಜು ಹಾಗೂ ಗ್ರಾಮದ ಮುಖಂಡರು ಉದ್ಘಾಟಿಸಿದರು.
ಶಿಕ್ಷಕ ಶಿವಕುಮಾರ್ ಮಾತನಾಡಿ, ಗುರುಕುಲ ಹಾಗೂ ಪಾಲಕರು ಶ್ರಮಪಟ್ಟರೆ ವಿದ್ಯಾರ್ಥಿಗಳ ಜೀವನವೂ ಚಿನ್ನದಂತಾಗುತ್ತದೆ. ಮಕ್ಕಳ ಕಲಿಕೆಯಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಮುಖ್ಯ. ಪಾಲಕರು ತಮ್ಮ ಮಕ್ಕಳನ್ನು ಮನೆಯಲ್ಲಿ ಒಂದು ಗಂಟೆಗಳ ಕಾಲ ಟಿವಿ ಹಾಗೂ ಮೊಬೈಲ್‌ಗಳನ್ನು ಬಳಸದೆ ಸಮೀಪದಲ್ಲಿ ಕುಳಿತುಕೊಂಡು ಅವರಿಗೆ ಅಕ್ಷರ, ಸಮಾಜದ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಿದರೆ ವಿದ್ಯಾಭ್ಯಾಸವನ್ನು ಉತ್ತಮ ಕಲಿಕೆಯಲ್ಲಿ ಅವರ ಬದುಕನ್ನು ಹಾಗೂ ಅವರ ಭವಿಷ್ಯವನ್ನು ಕಟ್ಟಿಕೊಳ್ಳಲು ನಿರ್ಧಾರ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಕನ್ನಡ ಶಾಲೆಗಳನ್ನು ತೊರೆದು ಆಂಗ್ಲ ಶಾಲೆಗಳಿಗೆ ಸೇರಿಸುವ ಪಾಲಕರಿಗೆ ಕನ್ನಡದ ಬಗ್ಗೆ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ಗೌರವ ಇಲ್ಲ. ಆದರೆ ಇಂದು ಸರ್ಕಾರಿ ಶಾಲೆಗಳಿಗೆ ಬರುವ ಉಪಾಧ್ಯಾಯರು ನೂರಕ್ಕೆ ನೂರು ನೇರ ನೇಮಕಾತಿಯಲ್ಲಿ ಬಂದು ಸರ್ಕಾರ ಶಾಲೆಗಳನ್ನು ಸಕ್ರಿಯಗೊಳಿಸಿದ್ದಾರೆ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಗ್ರಾಮದ ಮುಖಂಡರಾದ ಯೋಗೇಶ್, ಶಿವನಗೌಡ, ಶಿವಣ್ಣ, ಬಸವಣ್ಣ, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ಬನ್ನಿಕುಪ್ಪೆ, ಕುಪ್ಪೆ ಮತ್ತು ಮೂಡಲಕೊಪ್ಪಲು ಶಾಲೆಯ ಮಕ್ಕಳು ಹೆಚ್ಚು ಬಹುಮಾನವನ್ನು ಪಡೆದರು. 11 ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು. ಶಿಕ್ಷಕರ ಸಂಘದಿಂದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಭೋಜನವನ್ನು ಏರ್ಪಡಿಸಲಾಗಿತ್ತು.