ಆಂಜನೇಯಸ್ವಾಮಿಯ ಬ್ರಹ್ಮ ರಥೋತ್ಸವ ಇಂದು

ಹುಣಸೂರಿಗೆ ಸಮೀಪದ ಬಾಚಳ್ಳಿಯ ಆಂಜನೇಯ ದೇವಸ್ಥಾನ.
ಹುಣಸೂರಿಗೆ ಸಮೀಪದ ಬಾಚಳ್ಳಿಯ ಆಂಜನೇಯ ದೇವಸ್ಥಾನ.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಆಂಜನೇಯಸ್ವಾಮಿಯ 75ನೇ ವರ್ಷದ ಜಾತ್ರಾ ಮಹೋತ್ಸವ
ಹುಣಸೂರು: ನಗರಕ್ಕೆ ಸಮೀಪದ ಬಾಚಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯ 75ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜ.25ರ ಭಾನುವಾರದಂದು ಬ್ರಹ್ಮ ರಥೋತ್ಸವ, ಜ.26ರಸೋಮವಾರ ತೆಪ್ಪೋತ್ಸವ ನಡೆಯಲಿದೆ.
ಭಾನುವಾರ ಮುಂಜಾನೆಯಿಂದಲೇ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆಯ ನಂತರ ಮದ್ಯಾಹ್ನ 1.30ಕ್ಕೆ ಅಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನಿಟ್ಟು ಬ್ರಹ್ಮ ರಥೋತ್ಸವ ನಡೆಸುವರು. ದೇವಾಲಯದ ಹಿಂಬದಿ ರಥವನ್ನು ನಿಲ್ಲಿಸಿ, ಮತ್ತೆ ಸಂಜೆ ವೇಳೆಗೆ ಸ್ವಸ್ಥಾನಕ್ಕೆ ತಂದು ನಿಲ್ಲಿಸುತ್ತಾರೆ. ಆಂಜನೇಯ ರಥೋತ್ಸವದ ವೇಳೆ ಭಕ್ತಾದಿಗಳು, ನವ ವಿವಾಹಿತರು ರಥಕ್ಕೆ ಹಣ್ಣು-ಜವನ ಎಸೆದು ಪುನೀತರಾಗುತ್ತಾರೆ. ಅದೇ ದಿನ ರಾತ್ರಿ ಪೌರಾಣಿಕ ಚಲನಚಿತ್ರಗಳು ಪ್ರಸಾರವಾಗಲಿದೆ. ಜ.26ನೇ ಸೋಮವಾರ ಬೆಳಿಗ್ಗೆ 8ಕ್ಕೆ ಪಕ್ಕದ ಕಾಲುವೆಯಲ್ಲಿ ಆಂಜನೇಯ ಸ್ವಾಮಿಯ ತೆಪ್ಪೋತ್ಸವ ನಡೆಸಲಿದ್ದಾರೆ.
ನಗರಕ್ಕೆ ಸುಮಾರು ಮೂರು ಕಿ.ಮೀ.ದೂರದ ಅಸ್ಪತ್ರೆ ಕಾವಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಚಳ್ಳಿ ಜಾತ್ರೆಯನ್ನು ಹುಣಸೂರು ನಗರದ ಕರಿಗೌಡ ಬೀದಿಯ ಶ್ರೀಆಂಜನೇಯಸ್ವಾಮಿ ಸೇವಾಟ್ರಸ್ಟ್‌ನವರು ಈ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಹುಣಸೂರು ನಗರ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಯ ಮಂದಿ ಜಾತ್ರೆಗೆ ಸೇರುವರು. ಮನೆಯಿಂದ ಬುತ್ತಿ ತಂದು ಸಾಮೂಹಿಕ ಬೋಜನ ಮಾಡುತ್ತಾರೆ. ವಿಶೇಷವಾಗಿ ವಿನೋಬಾ ಕಾಲೋನಿಯ ಗ್ರಾಮಸ್ಥರು ರಥೋತ್ಸವದ ಹಿಂದಿನ ದಿನ ದೇವಾಲಯದದ ಆವರಣದಲ್ಲಿ ಪ್ರತಿ ಮನೆಯವರು ಪ್ರತ್ಯೇಕವಾಗಿ ಒಲೆ ಹಚ್ಚಿ ಪೊಂಗಲ್ ತಯಾರಿಸಿ ಊಟ ಮಾಡುವ ಪದ್ಧತಿ ಇಂದಿಗೂ ನಡೆದು ಕೊಂಡು ಬಂದಿದೆ.
ಜಾನುವಾರು ಕಟ್ಟುತ್ತಾರೆ:
ಹತ್ತಾರು ವರ್ಷಗಳಿಂದ ಜಾತ್ರೆ ಅಂಗವಾಗಿ ನೂರಾರು ಜಾನುವಾರುಗಳನ್ನು ಕಟ್ಟುತ್ತಾರೆ. ಲಕ್ಷಾಂತರ ರೂ., ವ್ಯವಹಾರ ನಡೆಯಲಿದೆ. ದೇವಸ್ಥಾನ ಸಮಿತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುತ್ತದೆ. ಹುಣಸೂರಿನ ಆಂಜನೇಯ ಸಮಿತಿವತಿಯಿಂದ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಭಾನುವಾರ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಾತ್ರಾ ಸಮಿತಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net