ಬಿಪಿಎಲ್ ಹೆಲ್ತ್ ಪ್ಯಾಕೇಜ್ ದರ ಪರಿಷ್ಕರಣೆ : ದಿನೇಶ್ ಗುಂಡೂರಾವ್

  ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೈ ಹೋಪ್ -2026; ಮೈಸೂರಿನಲ್ಲಿ ಆಸ್ಪತ್ರೆಗಳ ಕಾರ್ಯಾಚರಣೆ ಮತ್ತು ಪ್ರಸ್ತುತದ ಅನುಭವಗಳು‘ ಸಮ್ಮೇಳನವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಎನ್.ಜಿ.ಭರತೇಶ್ ರೆಡ್ಡಿ,  ಡಾ.ಬಿ.ಸುರೇಶ್, ಉತ್ಸವ್ ಅಗರವಾಲ್,  ಸವಿತಾ ಮಲ್ಲಪ್ಪ, ಡಾ.ಚಂದ್ರಭಾನ್ ಸಿಂಗ್,  ಡಾ.ಜಿ.ಆರ್.ಚಂದ್ರಶೇಖರ್ ಇದ್ದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೈ ಹೋಪ್ -2026; ಮೈಸೂರಿನಲ್ಲಿ ಆಸ್ಪತ್ರೆಗಳ ಕಾರ್ಯಾಚರಣೆ ಮತ್ತು ಪ್ರಸ್ತುತದ ಅನುಭವಗಳು‘ ಸಮ್ಮೇಳನವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಎನ್.ಜಿ.ಭರತೇಶ್ ರೆಡ್ಡಿ, ಡಾ.ಬಿ.ಸುರೇಶ್, ಉತ್ಸವ್ ಅಗರವಾಲ್, ಸವಿತಾ ಮಲ್ಲಪ್ಪ, ಡಾ.ಚಂದ್ರಭಾನ್ ಸಿಂಗ್, ಡಾ.ಜಿ.ಆರ್.ಚಂದ್ರಶೇಖರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಆರೋಗ್ಯ ಯೋಜನೆಯಡಿ ಆಸ್ಪತ್ರೆಗಳಿಗೆ ನೀಡುವ ಸೇವೆಗಳು
  • ಬಡತನ ರೇಖೆಗಿಂತ ಕೆಳಗಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಗಳು ಕಷ್ಟ ಅನುಭವಿಸುತ್ತಿವೆ.
  • ಈ ವರ್ಷ ನಾವು ಈ ವಿಷಯವನ್ನು ಖಂಡಿತವಾಗಿ ಪರಿಶೀಲಿಸಲಾಗುವುದು.
ಮೈಸೂರು: ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ಆರೋಗ್ಯ ಯೋಜನೆಯಡಿ ಆಸ್ಪತ್ರೆಗಳಿಗೆ ನೀಡಲಾಗುವ ಪ್ಯಾಕೇಜ್ ದರಗಳನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಿಐಐ ಮೈಸೂರು ವತಿಯಿಂದ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೈ ಹೋಪ್ -2026’ ಮೈಸೂರಿನಲ್ಲಿ ಆಸ್ಪತ್ರೆಗಳ ಕಾರ್ಯಾಚರಣೆ ಮತ್ತು ಪ್ರಸ್ತುತದ ಅನುಭವಗಳು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ಯಾಕೇಜ್ ದರ ಪರಿಷ್ಕರಣೆಗಾಗಿ ಮನವಿಯೂ ಬಹಳ ವರ್ಷಗಳಿಂದಲೂ ಕೇಳಿಬರುತ್ತಿದೆ.  ಬಹಳ ಸಮಯದಿಂದ ಈ ಪರಿಷ್ಕರಣೆ ಆಗಿರಲಿಲ್ಲ. ಆದರೆ, ಈಗ ದರ ಪರಿಷ್ಕರಣೆ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಬಡತನ ರೇಖೆಗಿಂತ ಕೆಳಗಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಗಳು ಕಷ್ಟ ಅನುಭವಿಸುತ್ತಿವೆ. ಆಸ್ಪತ್ರೆಗಳಿಗೆ ಸರ್ಕಾರದಿಂದ ದೊರೆಯುವ ಪರಿಹಾರ ದರಗಳು ಪ್ರಸ್ತುತ ವಾಸ್ತವ ವೆಚ್ಚಕ್ಕಿಂತ ಕಡಿಮೆಯಾಗಿವೆ. ಆದ್ದರಿಂದ ಈ ವರ್ಷ ನಾವು ಈ ವಿಷಯವನ್ನು ಖಂಡಿತವಾಗಿ ಪರಿಶೀಲಿಸಲಾಗುವುದು. ಜತೆಗೆ ಪ್ರಸಕ್ತ ಬಜೆಟ್‌ನಲ್ಲೂ ದರ ಪರಿಷ್ಕರಣೆ ಮಾಡುವುದಾಗಿ ಘೋಷಿಸಲಾಗಿದೆ ಎಂದರು.
ಆರೋಗ್ಯ ಕ್ಷೇತ್ರದ ಕೇಂದ್ರ (ಹೆಲ್ತ್ ಕೇರ್ ಹಬ್)ವಾಗಿ ಅಭಿವೃದ್ಧಿಪಡಿಸಲು ಬೇಕಾದ ಎಲ್ಲ ಸಾಮರ್ಥ್ಯಗಳು ಮೈಸೂರು ನಗರದಲ್ಲಿ ಇದೆ. ಯಾವುದೇ ಆರೋಗ್ಯ ಕೇಂದ್ರ ಅಥವಾ ಇತರ ಕೇಂದ್ರಗಳು ಪ್ರತ್ಯೇಕವಾಗಿ ಬೆಳೆಯುವುದಿಲ್ಲ. ಅದಕ್ಕಾಗಿ ಸೂಕ್ತ ಪರಿಸರ ನಿರ್ಮಾಣದ ಅಗತ್ಯ ಇರುತ್ತದೆ ಎಂದರು.
ಉತ್ತಮ ಪ್ರತಿಭಾವಂತರನ್ನು ಆಕರ್ಷಿಸಬೇಕಾದರೆ, ನಗರವು ಉತ್ತಮ ಸೌಲಭ್ಯ ಒದಗಿಸಬೇಕು. ಉತ್ತಮ ಶಿಕ್ಷಣ ವ್ಯವಸ್ಥೆ, ವಸತಿ ಸೌಲಭ್ಯ, ರಸ್ತೆಗಳು ಹಾಗೂ ಇತರ ಮೂಲ ಸೌಕರ್ಯಗಳು ಇರಬೇಕು. ಇಂತಹ ಸಂಪೂರ್ಣ ಪರಿಸರ ವ್ಯವಸ್ಥೆ ನಿರ್ಮಾಣವಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಇಂತಹ ವಾತಾವರಣವೂ ಇರುವುದರಿಂದ ಆರೋಗ್ಯ ಕ್ಷೇತ್ರದ ದೃಷ್ಟಿಯಿಂದ ಪ್ರಥಮ ಹಂತದ ನಗರವಾಗುವ ಎಲ್ಲ ಗುಣಲಕ್ಷಣವೂ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ಸಾಂಸ್ಕೃತಿಕ ನಗರ, ಪಾರಂಪರಿಕ ನಗರ ಎಂದು ಹೆಸರುವಾಸಿಯಾಗಿದೆ. ಅದೇ ರೀತಿ ಕ್ಷೇಮ ನಗರವೂ ಆಗಿದೆ. ಯೋಗ, ಆರೋಗ್ಯ ಹಾಗೂ ಮಾನವನ ಕಲ್ಯಾಣಕ್ಕೆ ಸಂಬಂಧಿಸಿದ ಅನೇಕ ಕೇಂದ್ರಗಳು ಇಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿವೆ. ಇವುಗಳು ಪ್ರಾದೇಶಿಕ ಮಟ್ಟದಲ್ಲಿ ಜನರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ. ಹೇಗೆಂದರೆ ದೇಶದ ವಿವಿಧ ಭಾಗಗಳಿಂದ ಜನರನ್ನು ತಮಿಳುನಾಡಿನ ಕೊಯಮತ್ತೂರು ಆಕರ್ಷಿಸುತ್ತದೆ. ಅದೇ ರೀತಿಯಲ್ಲಿ ಮೈಸೂರಿಗೂ ಜನರನ್ನು ಸೆಳೆಯುವ ಎಲ್ಲ ಸಾಧ್ಯತೆಗಳಿವೆ ಎಂದರು.
ನಗರೀಕರಣವು ಎಲ್ಲ ವಲಯದ ಬೆಳವಣಿಗೆಗೆ ಪ್ರಮುಖ ಕಾರಣವಾಗುತ್ತಿದೆ. ಸದ್ಯದ ಅಂಕಿಅಂಶಗಳ ಪ್ರಕಾರ ಶೇ.35ಕ್ಕೂ ಹೆಚ್ಚು ಜನರು ನಗರವಾಸಿಗಳಾಗಿದ್ದಾರೆ. 2050ರ ವೇಳೆಗೆ ಇದು ಶೇ.70ರ ಹತ್ತಿರಕ್ಕೆ ಹೋಗುತ್ತದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಆರೋಗ್ಯ ಕ್ಷೇತ್ರದಲ್ಲಿ ಮೈಸೂರು ಪ್ರಮುಖ ನಗರವಾಗಲಿದೆ. ಆರೋಗ್ಯ, ಶಿಕ್ಷಣ, ಕೈಗಾರಿಕೆ ಹಾಗೂ ಇತರ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಮೈಸೂರಿನಲ್ಲಿ ಆರೋಗ್ಯ ಕ್ಷೇತ್ರವೂ ಸೇರಿದಂತೆ ವಿವಿಧ ವಲಯಗಳಲ್ಲಿ ಸರ್ಕಾರ ಹೂಡಿಕೆ ಮಾಡುತ್ತಿದೆ, ಖಾಸಗಿ ವಲಯ ಹೂಡಿಕೆ ಮಾಡುತ್ತಿದೆ. ಸ್ಥಳೀಯ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮೈಸೂರನ್ನು ಆರೋಗ್ಯ ಸೇವೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸಬಹುದು. ಇಲ್ಲಿರುವ ಉತ್ತಮ ಹವಾಮಾನ, ಉತ್ತಮ ಜೀವನಮಟ್ಟ, ಉತ್ತಮ ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ವಲಯ ಮತ್ತು ಬೆಳೆಯುತ್ತಿರುವ ಆರೋಗ್ಯ ಮೂಲಸೌಕರ್ಯಗಳು ಈ ಕನಸನ್ನು ನನಸಾಗಿಸಲು ನೆರವಾಗಲಿವೆ. ಭವಿಷ್ಯದಲ್ಲಿ ಮೈಸೂರು ಕರ್ನಾಟಕವಷ್ಟೇ ಅಲ್ಲ, ದೇಶದ ಪ್ರಮುಖ ಆರೋಗ್ಯ, ಶಿಕ್ಷಣ ಮತ್ತು ಕೈಗಾರಿಕಾ ನಗರಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದರು.
ಸಮ್ಮೇಳನದ ಅಧ್ಯಕ್ಷ ಎನ್.ಜಿ.ಭರತೇಶ್ ರೆಡ್ಡಿ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್, ಸಿಐಐ ಮೈಸೂರು ಅಧ್ಯಕ್ಷ ಉತ್ಸವ್ ಅಗರವಾಲ್, ಉಪಾಧ್ಯಕ್ಷೆ ಸವಿತಾ ಮಲ್ಲಪ್ಪ, ಐಎಂಎ ಮೈಸೂರು ಚಾಪ್ಟರ್ ಅಧ್ಯಕ್ಷ ಡಾ.ಚಂದ್ರಭಾನ್ ಸಿಂಗ್, ಎಂಎಎಚ್‌ಎನ್‌ಸಿ ಆ್ಯಂಡ್ ಡಿ ಅಧ್ಯಕ್ಷ  ಡಾ.ಜಿ.ಆರ್.ಚಂದ್ರಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net