ಹುಣಸೂರು ನಗರದ ತಾಲೂಕು ಕಚೇರಿ ಮುಂಭಾಗ ಬಿಜೆಪಿ ಪಕ್ಷದ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನ ನಡೆಸಲಾಯಿತು. ತಾಲೂಕು ಅಧ್ಯಕ್ಷ ಕಾಂತರಾಜು, ಗಣೇಶ್ ಕುಮಾರಸ್ವಾಮಿ, ಸತೀಶ್, ನಾರಾಯಣ, ಕಮಲಮ್ಮ ಇತರರಿದ್ದರು.
ಹುಣಸೂರು: ರಾಜ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರುದ್ಧ ಬಿಜೆಪಿ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಆವರಣದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಳ್ಳಿ ಇಡಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ರೈತವಿರೋಧಿ, ಜನವಿರೋಧಿ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ವಿಧೇಯಕ ಜಾರಿಯ ಮೂಲಕ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕಾರ್ಯಕ್ಕೆ ನಾಂದಿ ಹಾಡುತ್ತಿದೆ. ಅಧಿಕಾರಕ್ಕಾಗಿ ಹಾದಿಬೀದಿ ಕಚ್ಚಾಟ ನಡೆಸಿರುವ ರಾಜ್ಯ ಸರ್ಕಾರ ಇದೀಗ ವಿಪಕ್ಷಗಳ ಬಾಯಿ ಮುಚ್ಚಿಸುವ ನಿರ್ಧಾರಕ್ಕೆ ಬಂದಿದೆ. ಸಂವಿಧಾನದ ಬಗ್ಗೆ ಪದೇ ಪದೆ ಮಾತನಾಡುವ ಕಾಂಗ್ರೆಸ್ ಹಾಗೂ ಇದರ ಹಿಂಬಾಲಕರು ಇದೀಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆಯೊಡ್ಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸರ್ಕಾರವನ್ನು ಪ್ರಶ್ನಿಸುವವರು ಇರಬಾರದು ಎನ್ನುವುದೇ ಸಿದ್ದರಾಮಯ್ಯ ಸರ್ಕಾರದ ನೀತಿಯಾಗಿದೆ. ಸತ್ಯವನ್ನು ಹೇಳುವುದೂ ದ್ವೇಷ ಎಂದು ಪರಿಗಣಿಸಲು ಹೊರಟಿದ ಈ ಸರ್ಕಾರದ ನಡೆ ಜನವಿರೋಧಿ, ಪ್ರಜಾಪ್ರಭುತ್ವ ವಿರೋದಿಯಲ್ಲದೇ ಮತ್ತೇನೂ ಅಲ್ಲ. ರಾಜ್ಯಪಾಲರು ಯಾವುದೇ ಕಾರಣಕ್ಕೂ ಈ ವಿಧೇಯಕಕ್ಕೆ ಅಂಕಿತ ಹಾಕಬಾರದು. ಆ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕೆಂದು ಒತ್ತಾಯಿಸಿದರು.
ರೈತಮೋರ್ಚಾ ತಾಲೂಕು ಅಧ್ಯಕ್ಷ ಬಿಳಿಕೆರೆ ಪ್ರಸನ್ನ ಮಾತನಾಡಿ, ವಿಧೇಯಕದ ಮೂಲಕ ಪ್ರತಿಭಟನೆ, ಸಭೆಗಳು, ಸಾಮಾಜಿಕ ಚಳವಳಿಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಿಯಂತ್ರಿಸಲು ಸರ್ಕಾರ ಅಡ್ಡದಾರಿ ಹಿಡಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಸಮಿತಿ ಉಪಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ಅನ್ಯಾಯ ಅಥವಾ ಸರ್ಕಾರದ ತಪ್ಪುಗಳನ್ನು ಮಾತನಾಡಿದರೆ ಭಾವನಾತ್ಮಕ ಹಾನಿ ಎಂದು ಆರೋಪಿಸಿ ಬಂಧನ ಮಾಡಲು ಪೊಲೀಸರಿಗೆ ವಿಧೇಯಕ ಅವಕಾಶ ನೀಡಿದೆ. ವಿಧೇಯಕದ ಮೂಲ ಉದ್ದೇಶವೇ ಗೊಂದಲದಿಂದ ಕೂಡಿದೆ. ಹಾಗಾಗಿ ವಿಧೇಯಕದ ಜಾರಿ ಪ್ರಜಾತಂತ್ರಕ್ಕೆ ಮಾರಕವಾಗಲಿದೆ ಎಂದರು.
ತಹಸೀಲ್ದಾರ್ ಜೆ.ಮಂಜುನಾಥ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನಗರ ಮಂಡಲ ಅಧ್ಯಕ್ಷ ನಾರಾಯಣ, ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್, ನಾಗಣ್ಣಗೌಡ, ನಾಗರಾಜ ಮಲ್ಲಾಡಿ, ದೇವರಳ್ಳಿ ಸೋಮಶೇಖರ್, ಬಿ.ಎನ್.ನಾಗರಾಜಪ್ಪ, ಸೂರೇಗೌಡ, ಕಮಲಮ್ಮ, ಯಶೋಧಮ್ಮ ಇತರರಿದ್ದರು.