ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಕಾನೂನು ದುರುಪಯೋಗ ತಪ್ಪಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆ
ಮೈಸೂರು: ಬುದ್ಧ, ಬಸವ, ಅಂಬೇಡ್ಕರ್ ಅವರು ಸಮಾನತೆಗಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಮೂಲಕ ಸ್ವಾಭಿಮಾನಿ ಸತ್ಪ್ರಜೆಯಾಗಬೇಕು, ತನ್ಮೂಲಕ ಹೊಸ ಸಮಾಜ ನಿರ್ಮಾಣ ಮಾಡಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.
ರಮಾಬಾಯಿ ಅಂಬೇಡ್ಕರ್ ಸರ್ವೋದಯ ಮಹಿಳಾ ಒಕ್ಕೂಟದ 7ನೇ ವಾರ್ಷಿಕೋತ್ಸವ ಅಂಗವಾಗಿ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದರೂ ಇನ್ನೂ ಶ್ರೇಣಿಕೃತ ವ್ಯವಸ್ಥೆ, ಅಸಮಾನತೆ ಇರುವುದು ಪ್ರತಿಯೊಬ್ಬರೂ ತಲೆತಗ್ಗಿಸಬೇಕಾದ ಸಂಗತಿ. ಅಂಬೇಡ್ಕರ್ ಅವರ ಸಾಧನೆಗೆ ರಮಾಬಾಯಿ ಅವರೂ ಕಾರಣ. ಇದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಎಲ್ಲರಿಗೂ ಶಿಕ್ಷಣ ಹಾಗೂ ಆರೋಗ್ಯ ಸೇವೆ ಉಚಿತವಾಗಿ ಸಿಗಬೇಕು ಎಂದು ಹೇಳಿದರು.
ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಕಾನೂನು ದುರುಪಯೋಗ ತಪ್ಪಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಈ ಕೆಲಸ ಆಗದಿದ್ದಲ್ಲಿ ದೇಶ ಸರ್ವನಾಶವಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಯೋಗದಿಂದಾಗಿ ಭಾರತವು ವಿಶ್ವ ಪ್ರಸಿದ್ಧಿಯಾಗಿದೆ. ಅಂಬೇಡ್ಕರ್ ಅವರು ಕೇವಲ ಭಾರತವಲ್ಲ, ಇಡೀ ವಿಶ್ವದ ಸ್ವತ್ತಾಗಿದ್ದಾರೆ ಎಂದರು.
ಪ್ರತಿಯೊಂದು ದೇಶವು ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಪಾಲಿಸಿದರೆ ಯುದ್ಧ ಇಲ್ಲದಂತಾಗುತ್ತದೆ. ಅಮೆರಿಕ, ಇಸ್ರೇಲ್, ಇರಾನ್, ರಷ್ಯಾ, ಉಕ್ರೇನ್ ಮತ್ತಿತರ ದೇಶಗಳಿಗೆ ಇನ್ನಾದರೂ ಬುದ್ಧಿ ಬರಲಿ ಎಂದು ಆಶಿಸಿದರು.
ಸಮಾಜ ಸೇವಕ ಅಹಿಂದ ಜವರಪ್ಪ ಮಾತನಾಡಿ, ಅಂಬೇಡ್ಕರ್ ಅವರು ಅತ್ಯುತ್ತಮವಾದ ಸಂವಿಧಾನ ಕೊಟ್ಟಿದ್ದರೂ ಅವರ ವಿಚಾರಧಾರೆಗಳು ವ್ಯಾಪಕವಾಗಿ ಹರಡಿದ್ದರೂ ಇನ್ನೂ ದೌರ್ಜನ್ಯ, ದಬ್ಬಾಳಿಕೆ ನಿಂತಿಲ್ಲ. ಅನ್ಯಾಯವನ್ನು ಪ್ರಶ್ನೆ ಮಾಡದ ಪರಿಸ್ಥಿತಿ ಇದೆ ಎಂದು ವಿಷಾದಿಸಿದರು.
ರಮಾಬಾಯಿ ಅಂಬೇಡ್ಕರ್ ಸರ್ವೋದಯ ಮಹಿಳಾ ಒಕ್ಕೂಟವು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಾಂಸ್ಕೃತಿಕ, ಕ್ರೀಡಾ, ಪ್ರತಿಭಾ ಪುರಸ್ಕಾರ ಮತ್ತಿತರ ಚಟುವಟಿಕೆಯನ್ನು ನಡೆಸುವುದರ ಜತೆಗೆ ಅಂಬೇಡ್ಕರ್ ಹಾಗೂ ರಮಾಬಾಯಿ ಅವರ ವಿಚಾರಧಾರೆ ಜನಮನಕ್ಕೆ ತಲುಪಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ಸಂವಿಧಾನದ ಪ್ರಕಾರ ನಮ್ಮ ಹಕ್ಕು ಹಾಗೂ ಶಿಕ್ಷಣ ಪಡೆಯಲು ಸಂಘಟಿತ ಹೋರಾಟ ನಡೆಸಬೇಕು ಎಂದರು.
ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ಸಮಾಜವನ್ನು ಸರಿದಾರಿಗೆ ತರಲು ಮಾರ್ಗದರ್ಶಕರಾಗಿದ್ದಾರೆ. ಅಸಮತೋಲನ ಸಮಾಜವನ್ನು ಸರಿಪಡಿಸಲು ತತ್ವಾದರ್ಶಗಳು ದಾರಿದೀಪವಾಗಿವೆ ಎಂದರು.
ಬ್ರಹ್ಮ, ವಿಷ್ಣು, ಮಹೇಶ್ವರರಂತಿರುವ ಈ ಮೂವರು ಯುಗಪುರುಷರಿಂದ ಸಮಾಜಕ್ಕೆ ಅಪರಿಮಿತ ಕೊಡುಗೆ ಸಂದಿದೆ. ಸಮ ಸಮಾಜದ ಆಶಯ ಈಡೇರಿಸಲು ಇದರಿಂದ ಸಾಧ್ಯವಾಗಿದೆ. ಪ್ರತಿಯೊಬ್ಬರೂ ಸುಶಿಕ್ಷಿತರಾದಲ್ಲಿ ಸಮಾನತೆ ಬರುತ್ತದೆ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿರುವ ಜಿ.ದೀಪ್ತಿ, ಎಂ.ಆರ್.ಹೇಮಂತ್, ಚಂದನಾ ಹಾಗೂ ಎಂ.ಭುವನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಯಾಲಕ್ಕಯ್ಯ, ಕಾರ್ಯದರ್ಶಿ ಎಂ.ಹೇಮಲತಾ ಇದ್ದರು. ಕಮಲಾ, ಶ್ವೇತಾ, ಸುಮತಿ, ಮಹದೇವಮ್ಮ, ಕೋಮಲಾ, ಶಕುಂತಲಾ ಶ್ರೀಧರ್, ಭಾಗ್ಯವತಿ ನಾಡಗೀತೆ ಹಾಡಿದರು. ಶ್ವೇತಾ ಅಂಬೇಡ್ಕರ್ ಕುರಿತು ಸ್ವರಚಿತ ಕವನ ಓದಿದರು.