ಮಾಡುವ ಕಾಯಕದ ಬಗ್ಗೆ ಹೆಮ್ಮೆ ಇರಲಿ

ಪಟ್ಟಣದ ಕನಕ ಭವನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿ ಪಡೆದ ಸಾವಿರ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ರವಿ ಡಿ ಚನ್ನಣ್ಣನವರ್ ಹಾಗೂ ಅನಿಲ್ ಚಿಕ್ಕಮಾದು ಅಭಿನಂದಿಸಿದರು.
ಪಟ್ಟಣದ ಕನಕ ಭವನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿ ಪಡೆದ ಸಾವಿರ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ರವಿ ಡಿ ಚನ್ನಣ್ಣನವರ್ ಹಾಗೂ ಅನಿಲ್ ಚಿಕ್ಕಮಾದು ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • Ravi Channannavar
ಎಚ್.ಡಿ.ಕೋಟೆ: ಬಡವರು, ರೈತರು, ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಿತರಾಗಬೇಕು. ಕಾಯಕದ ಬಗ್ಗೆ ಕೀಳರಿಮೆ ಇರಬಾರದು, ಹೆಮ್ಮೆ ಇರಬೇಕು. ಯಾರಿಗೆ ಕೀಳರಿಮೆ ಭಾವನೆ ಇರುತ್ತದೋ ಅವರು ಮುಂದೆ ಬರಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ರವಿ ಡಿ. ಚೆನ್ನಣನವರ್ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಓದು, ಸಂಸ್ಕಾರ, ಸಮಯ ಪ್ರಜ್ಞೆ ಹೆಚ್ಚಾಗಬೇಕು. ಸಭೆ, ಸಮಾರಂಭಗಳು, ಹೊಗಳಿಕೆಯ ಕಾರ್ಯಕ್ರಮಗಳು ಕಡಿಮೆಯಾಗಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕಿನಲ್ಲೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯ ಕ್ಷೌರಿಕನ ಮಗಳು ಎಂದು ಕೇಳಿ ಸಂತಸವಾಯಿತು. ಇದೇ ರೀತಿ ಡ್ರೈವರ್, ದಿನಗೂಲಿ ನೌಕರ, ಅಗಸ, ದರ್ಜಿಯ ಮಕ್ಕಳು ಉನ್ನತ ಶ್ರೇಣಿಯಲ್ಲಿ ಪಾಸಾಗಬೇಕು. ಉಳ್ಳವರ ಮಕ್ಕಳೇ ಪ್ರಗತಿ ಸಾಧಿಸಿದರೆ ಅದು ಅಭಿವೃದ್ಧಿಯ ಸಂಕೇತವಲ್ಲ. ಉಳ್ಳವರ ಸಮಾನಾಗಿ ಬಡವನ ಮಕ್ಕಳು ಬೆಳೆಯಬೇಕು ಎಂದರು.
ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಒಬ್ಬ ಮಂತ್ರಿಗೆ ಸಮವಿದ್ದಂತೆ. ಆದ್ದರಿಂದ ಓದುತ್ತೇನೆ ಎಂಬ ಇಚ್ಛಾಶಕ್ತಿಯುಳ್ಳ ವಿದ್ಯಾರ್ಥಿಗಳು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳಾಗುವ ಕನಸನ್ನು ಹೊತ್ತು ಓದಬೇಕು ಎಂದರು.
ರೈತ ಬೀಜ ಬಿತ್ತನೆ ಮಾಡಿ, ಬೆಳೆಯಲ್ಲಿನ ಕಳೆ ತೆಗೆದು, ಪಕ್ಷಿಗಳಿಂದ ತೆನೆಯನ್ನು ರಕ್ಷಿಸಿ ಉತ್ತಮ ಕಾಳುಗಳನ್ನು ಪಡೆಯುವಂತೆ, ಪಾಲಕರಿಗೆ ನೀವು ಅಧಿಕಾರಿಗಳಾಗುವ ಮೂಲಕ ಉತ್ತಮ ಕಾಳುಗಳಾಗಬೇಕು ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅವರು ನುಡಿದಂತೆ ಒಂಭತ್ತನೇ ಸ್ಥಾನದಲ್ಲಿದ್ದ ತಾಲೂಕನ್ನು ಮೊದಲನೇ ಸ್ಥಾನಕ್ಕೆ ತಂದಿದ್ದಾರೆ. ಅದಕ್ಕಾಗಿ ಅವರನ್ನು ನಾನು ಅಭಿನಂದಿಸಿದ್ದೇನೆ ಎಂದು ತಿಳಿಸಿದರು.
ನಮ್ಮ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಬೆರೆಯದ ರೀತಿ ಕೆಲಸ ಮಾಡಿದರ ಪರಿಣಾಮವಾಗಿ ನಮ್ಮ ಕ್ಷೇತ್ರ ಶಿಕ್ಷಣದಲ್ಲಿ ಮೊದಲನೇ ಸ್ಥಾನದಲ್ಲಿ ಬಂದು ನಿಂತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮ ತಾಲೂಕಿಗೆ ಆದರ್ಶ ಶಾಲೆ, ಏಕಲವ್ಯ ಶಾಲೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ಶಾಲೆ ಮಂಜೂರಾಗಲು ಸಂಸದ ಆರ್. ಧ್ರುವನಾರಾಯಣ ಅವರ ಶ್ರಮವಿತ್ತು, ಅಲ್ಲದೆ ಮಾಜಿ ಶಾಸಕ ಚಿಕ್ಕಮಾದು ಅವರ ಶ್ರಮವೂ ಸಹ ಇತ್ತು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ರಾಜು ಮಾತನಾಡಿ, ತಾಲೂಕಿನ ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿ ತಿಂಗಳ ಮೊದಲ ದಿನ ನಿಗದಿತ ಪಠ್ಯ ನೀಡಲಾಗುತ್ತಿತ್ತು. ಆ ಪಠ್ಯವನ್ನು ವಿದ್ಯಾರ್ಥಿಗಳು ಇಡೀ ತಿಂಗಳು ಕಲಿಯಬೇಕಿತ್ತು. ತಿಂಗಳ ಕೊನೆಯಲ್ಲಿ ನಡೆಯುವ ಪರೀಕ್ಷೆಯಲ್ಲಿ ಆ ಪಠ್ಯದಿಂದಲೇ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ ಇಲ್ಲಿ ಶಿಕ್ಷಕರು, ಪ್ರಶ್ನೆ ಪತ್ರಿಕೆ ತಯಾರಿಸುವವರು ಎಲ್ಲರೂ ಬೇರೆ ಶಾಲೆಯವರೇ ಆಗಿರುತ್ತಿದ್ದರು. ಇಲ್ಲಿ ಅನುತ್ತೀರ್ಣ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಪ್ರತಿ ತಿಂಗಳು ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು ಎಂದರು.
ನಾನೂ ಓದುತ್ತಿದ್ದೇನೆ ಎಂಬ ಯೋಜನೆ ವಿಶೇಷ ಕಾರ್ಯಕ್ರಮವಾಗಿದ್ದು, ಇಡೀ ರಾಜ್ಯದಲ್ಲಿ ಈ ಕಾರ್ಯಕ್ರಮವನ್ನು ಅಳವಡಿಸಿಕೊಂಡ ಏಕೈಕ ತಾಲೂಕು ಎಚ್.ಡಿ.ಕೋಟೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಇಡೀ ವಿಷಯಗಳ ವೇಳಾಪಟ್ಟಿಯನ್ನು ತಯಾರಿಸಿ ಮಕ್ಕಳಿಗೆ ನೀಡಲಾಗುತ್ತಿತ್ತು. ವಿದ್ಯಾರ್ಥಿ ಮುಂಜಾನೆ 5 ಗಂಟೆಗೆ ಎದ್ದು ಅಭ್ಯಾಸ ಮಾಡುವಂತೆ ಉತ್ತೇಜಿಸುವುದು, ಅದರ ಬಗ್ಗೆ ನಿಗಾ ಇಡುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಇದು ಫಲ ನೀಡಿದ್ದು, ಜಿಲ್ಲೆಯಲ್ಲಿಯೇ ನಮ್ಮ ತಾಲೂಕು ಮೊದಲ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದು ತಿಳಿಸಿದರು.
ಮೈಮುಲ್ ನಿರ್ದೇಶಕ ಈರೇಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ನಂದಿನಿ ಚಂದ್ರಶೇಖರ್, ರವಿ ನರಸೀಪುರ, ಮುಖಂಡರಾದ ಶಿವಪ್ಪ ಕೋಟೆ, ಮಧುಕುಮಾರ್, ಹಿರೇಹಳ್ಳಿ ಸೋಮೇಶ್, ಅಶೋಕ್, ಭಾಗ್ಯಲಕ್ಷ್ಮೀ, ಶ್ರೀನಿವಾಸ, ಪುರದಕಟ್ಟೆ ಬಸವರಾಜು, ಶಿವರಾಜು, ಕ್ಯಾತನಹಳ್ಳಿ ನಾಗರಾಜು, ಅಜರುದ್ದೀನ್, ರಾಜು, ಸೌಮ್ಯಾ, ಮಂಜು, ಲೋಕೇಶ್, ಚಂದ್ರು, ಶಿಕ್ಷಕರಾದ ಪ್ರಮೋದಕುಮಾರ್, ನಾಗರಾಜು, ನಿಂಗರಾಜು, ನಾರಾಯಣಸ್ವಾಮಿ, ರೂಪಾ ಪ್ರಮೋದ್, ಭೀಮಪ್ಪ, ಪ್ರಕಾಶ್, ಆನಂದ, ಚನ್ನನಾಯಕ, ಅನಿತಾ, ಸಾವಿತ್ರಿ, ನಂಜುಂಡಯ್ಯ, ಶಿವಶಂಕರ್, ನಂದೀಶ್, ಮಹದೇವಸ್ವಾಮಿ, ನಂಜುಂಡಸ್ವಾಮಿ, ರಾಜು, ಸ್ವಾಮಿನಾಯಕ, ಶ್ರೀನಿವಾಸ, ರವಿ, ಸಿದ್ದನಾಯಕ, ಕೃಷ್ಣಯ್ಯ, ಚಂದ್ರಶೇಖರ್, ಪ್ರಸನ್ನಕುಮಾರ್, ಶಿವಪ್ಪ, ದಾಸಾಚಾರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net