ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿಷಯವನ್ನು ಹಂಚಿಕೊಳ್ಳಬಾರದು.
ಮೈಸೂರು: ಇನ್ಸ್ಟಾಗ್ರಾಮ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಸೈಬರ್ ಕ್ರೈಮ್ ನಡೆಯುತ್ತಿವೆ. ಇವುಗಳ ಬಳಕೆ ಮಾಡುವ ಸಂದರ್ಭ ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ಕ್ರೈಮ್ ಇನ್ಸ್‌ಪೆಕ್ಟರ್ ನಂದೀಶ್‌ಕುಮಾರ್ ಹೇಳಿದರು.
ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃತಕ ಬುದ್ಧಿಮತ್ತೆ (ಎಐ) ಜೀವನವನ್ನು ಹೆಚ್ಚು ಚುರುಕು, ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸುವ ಯುಗದಲ್ಲಿ ನಾವಿದ್ದೇವೆ. ಅದು ಮೋಸವನ್ನೂ ಹಿಂದಿನಿಗಿಂತ ಹೆಚ್ಚು ನಂಬಿಕೆ ಮೂಡಿಸುವಂತೆ ಮಾಡಬಹುದು. ಸಾಮಾಜಿಕ ಜಾಲತಾಣಗಳ ಮೂಲಕ ಅತಿ ಹೆಚ್ಚು ಜನರು ಮೋಸ ಹೋಗುತ್ತಿದ್ದಾರೆ. ಆದ್ದರಿಂದ ಜನರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಸೈಬರ್ ಕ್ರೈಮ್ ಬಗ್ಗೆ ಶಾಲಾ ಮಟ್ಟದಿಂದಲೇ ಈ ಬಗ್ಗೆ ಅರಿವಿನೊಂದಿಗೆ ಮಾಹಿತಿ ನೀಡಬೇಕಿದೆ ಎಂದರು,
ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿಷಯವನ್ನು ಹಂಚಿಕೊಳ್ಳಬಾರದು. ಇನ್ಸ್ಟಾಗ್ರಾಮ್‌ನಲ್ಲಿ ಬರುವ ಎಐ ತಂತ್ರಜ್ಞಾನದಿಂದ ತಯಾಸಿರುವ ರೀಲ್ಸ್‌ಗಳ ಮೂಲಕ ಲಿಂಕ್‌ಗಳನ್ನು ಅತಿ ಹೆಚ್ಚು ಫಾರ್‌ವರ್ಡ್ ಮಾಡುತ್ತಿರುವುದು ಜಾಸ್ತಿಯಾಗಿದೆ ಎಂದರು.
ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ ಮೂಲಕ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಬೇರೆ ಇನ್ಯಾವುದೇ ಅಪ್ಲಿಕೇಶನ್‌ಗಳ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಬಾರದು ಎಂದು ತಿಳಿಸಿದರು.
ದೇಶದಲ್ಲಿ ಕಡಿಮೆ ಸೈಬರ್ ಕ್ರೈಮ್ ಪಟ್ಟಿಯಲ್ಲಿ ತಮಿಳುನಾಡು 1ನೇ ಸ್ಥಾನದಲ್ಲಿದ್ದರೆ, ಕರ್ನಾಟಕ 5ನೇ ಸ್ಥಾನದಲ್ಲಿದೆ. ಆದರೆ, ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ 48 ಕೋಟಿ ರೂ. ವಂಚನೆಯಾಗಿದೆ. ಆದರಿಂದ ಯಾವುದೇ ಒಟಿಪಿ ಅಥವಾ ರಹಸ್ಯ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬಾರದು.
ಆನ್‌ಲೈನ್‌ನಲ್ಲಿ ಅತಿಯಾದ ಹಂಚಿಕೆಯನ್ನು ತಪ್ಪಿಸುವುದು, ಆ್ಯಪ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗೌಪ್ಯತಾ ಸೆಟ್ಟಿಂಗ್ ಬಳಸಬೇಕು ಎಂದು ಸೂಚನೆ ನೀಡಿದರು.
ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ಮಾತನಾಡಿ, ಇಂಟರ್ನೆಟ್ ಮತ್ತು ಅದರ ಸುರಕ್ಷಿತ, ಜವಾಬ್ದಾರಿಯುತ ಬಳಕೆಯ ಬಗ್ಗೆ ಬಳಕೆದಾರರನ್ನು ಜಾಗೃತಗೊಳಿಸಬೇಕು. ಪ್ರಮುಖ ಕೈಗಾರಿಕಾ ಸಂಶೋಧನಾ ಸಂಸ್ಥೆಯ ಅಧ್ಯಯನದ ಪ್ರಕಾರ, ಎಲ್ಲ ಸೈಬರ್ ದಾಳಿಗಳಲ್ಲಿ ಶೇ.90ರಷ್ಟು ಮಾನವ ನಿರ್ಲಕ್ಷ್ಯದಿಂದಲೇ ಉಂಟಾಗುತ್ತವೆ ಎಂದರು.
ಜಿಪಂ ಆಡಳಿತ ಉಪಕಾರ್ಯದರ್ಶಿ ಬಿ.ಎಂ. ಸವಿತಾ, ಅಭಿವೃದ್ಧಿ ಉಪಕಾರ್ಯದರ್ಶಿ ಭೀಮಪ್ಪ, ಮುಖ್ಯ ಯೋಜನಾ ಅಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಮುಖ್ಯ ಲೆಕ್ಕ್ಕಾಧಿಕಾರಿ ಸಿದ್ದಗಂಗಮ್ಮ, ಸೈಬರ್ ಕ್ರೈಮ್ ಇನ್ಸ್‌ಪೆಕ್ಟರ್ ಮಹೇಶ್, ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.