ವಿದ್ಯುತ್ ಸಮಸ್ಯೆ, ಅಪಾಯಗಳ ಜಾಗ್ರತೆ ಇರಲಿ

ಗ್ರಾಹಕರಿಗೆ ಸೆಸ್ಕ್ ಸಲಹೆ
ಗ್ರಾಹಕರಿಗೆ ಸೆಸ್ಕ್ ಸಲಹೆ
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಹಕರಿಗೆ ಸೆಸ್ಕ್ ಸಲಹೆ
  • ಮುಂಗಾರು ಆರಂಭವಾಗುವ ಹಿನ್ನೆಲೆ
ಮುಂಗಾರು ಸಂದರ್ಭದಲ್ಲಿ ಉಂಟಾಗುವ ವಿದ್ಯುತ್ ಸಮಸ್ಯೆಗಳು, ಅಪಾಯಗಳ ಕುರಿತಂತೆ ಗ್ರಾಹಕರು ಜಾಗ್ರತೆ ವಹಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ಸಲಹೆ ನೀಡಿದೆ.
ಸದ್ಯ ಪೂರ್ವ ಮುಂಗಾರು ಆರಂಭವಾಗಿ ಅಲ್ಲಲ್ಲಿ ಮಳೆಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅತಿಯಾದ ಗಾಳಿ ಮತ್ತು ಮಳೆಯಿಂದ ವಿದ್ಯುತ್ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಮಳೆ ಸಂದರ್ಭದಲ್ಲಿ ಸಂಭವಿಸಬಹುದಾದ ವಿದ್ಯುತ್ ಅವಘಡಗಳು, ಅಡಚಣೆಗಳು ಹಾಗೂ ಇತರ ತೊಂದರೆಗಳನ್ನು ಎದುರಿಸಲು ಸೆಸ್ಕ್ ಸನ್ನದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರ ಸುರಕ್ಷತೆ ಬಗ್ಗೆಯೂ ಹೆಚ್ಚಿನ ನಿಗಾವಹಿಸಲಾಗಿದ್ದು, ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಹಕರಿಗೆ ಅಗತ್ಯ ಸೇವೆ ನೀಡಲು ಕಾರ್ಯಪ್ರವೃತ್ತರಾಗಿದ್ದಾರೆ. ಅದರಂತೆ ಸಾರ್ವಜನಿಕರು ಅತಿಯಾದ ಗಾಳಿ ಮತ್ತು ಮಳೆಯ ಸಂದರ್ಭದಲ್ಲಿ ವಿದ್ಯುತ್ ಅಪಾಯಗಳು ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.
ಸಾರ್ವಜನಿಕರು ತಮ್ಮ ಸುತ್ತಮುಲ್ಲಿನ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದು, ವಿದ್ಯುತ್ ಕಂಬಗಳು ಹಾನಿಯಾಗಿರುವುದು, ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ಸಾರ್ವಜನಿಕರು ತುರ್ತಾಗಿ 24*7 ಸಹಾಯವಾಣಿ 1912ಗೆ ಮಾಹಿತಿ ನೀಡುವಂತೆ ಅಥವಾ ಸ್ಥಳೀಯ ಸೆಸ್ಕ್ ಅಧಿಕಾರಿಗಳು, ಸಿಬ್ಬಂದಿಗೆ ಮಾಹಿತಿ ನೀಡುವಂತೆ ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳು:

* ರಸ್ತೆ ಬದಿಯಲ್ಲಿ ಅಥವಾ ಇತರ ಕಡೆಗಳಲ್ಲಿ ತುಂಡಾಗಿ ಬಿದ್ದ ತಂತಿಗಳನ್ನು ಮುಟ್ಟಬೇಡಿ.
* ಬಟ್ಟೆ ಒಣಗಿಸಲು ವಿದ್ಯುತ್ ಕಂಬಗಳು, ವೈಯರ್‌ಗಳನ್ನು ಬಳಸಬೇಡಿ.
* ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳ ಸಮೀಪ ಜಾನುವಾರುಗಳನ್ನು ಕಟ್ಟಬೇಡಿ.
* ಮಳೆ ಹಾಗೂ ಗಾಳಿಯ ಸಂದರ್ಭದಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ಸಮೀಪ ನಿಲ್ಲದಂತೆ ಎಚ್ಚರವಹಿಸಿ.

ರೈತರಿಗೆ ಸುರಕ್ಷತಾ ಕ್ರಮಗಳು

* ಒದ್ದೆ ಕೈಗಳಿಂದ ಪಂಪ್‌ಸೆಟ್‌ಗಳನ್ನು ಆನ್ ಮಾಡಬೇಡಿ.
* ಮಳೆ ಸಂದರ್ಭಗಳಲ್ಲಿ ವಿದ್ಯುತ್ ಉಪಕರಣಗಳನ್ನು ಆಫ್ ಮಾಡಿ.
* ಜಾನುವಾರುಗಳನ್ನು ವಿದ್ಯುತ್ ಕಂಬಗಳು ಮತ್ತು ಕಂಬಗಳ ವೈರ್‌ಗಳಿಗೆ ಕಟ್ಟಬೇಡಿ.
* ಜಲಾವೃತ ಪ್ರದೇಶಗಳಲ್ಲಿ ವಿದ್ಯುತ್ ಉಪಕರಣಗಳೊಂದಿಗೆ ಕೆಲಸ ಮಾಡಬೇಡಿ.
* ಮಳೆ ಸಂದರ್ಭದಲ್ಲಿ ಜಮೀನುಗಳಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳಿಂದ ದೂರವಿರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net