ಎಚ್.ಡಿ.ಕೋಟೆ ತಾಲೂಕಿನ ಬೊಮ್ಮಲಪುರ ಬಸವರಾಜಕಟ್ಟೆ ಹಾಡಿ ಅರಣ್ಯದ ಅಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಶಾಸಕ ಅನಿಲ್ ಚಿಕ್ಕಮಾದು ಶನಿವಾರ ಚಾಲನೆ ನೀಡಿ ಅರಣ್ಯವನ್ನು ವೀಕ್ಷಣೆ ಮಾಡಿದರು. ವೀರನಹೊಸಹಳ್ಳಿ ಅರಣ್ಯ ವಲಯದ ಎಸಿಎಫ್ ಲಕ್ಷ್ಮೀಕಾಂತ್, ಕಾಂಗ್ರೆಸ್ ಮುಖಂಡರಾದ ಸೌಮ್ಯಾ, ಕಾಳೇಗೌಡ, ಸುರೇಶ್, ಚಂದ್ರಶೇಖರ್, ಅಜಾರ್, ನಾಗರಾಜು, ರವಿಕುಮಾರ್ ಇದ್ದರು.
ಎಚ್.ಡಿ. ಕೋಟೆ : ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲ್ಲೂಕಿನ ಬೊಮ್ಮಲಾಪುರ ಬೂದನೂರು ಗ್ರಾಮದ ಸಂಪರ್ಕ ರಸ್ತೆಯಲ್ಲಿನ ಸೇತುವೆ ಬಳಿಯಿಂದ ಬಸವರಾಜನಕಟ್ಟೆ ಹಾಡಿಯವರಗೆ ಅರಣ್ಯದಂಚಿನ 2.9 ಕಿಲೋಮೀಟರ್ ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ತಾಲೂಕಿನ ಭೂ ವಿಸ್ತೀರ್ಣದಲ್ಲಿ ದೊಡ್ಡದಾಗಿದೆ, ಜೊತೆಗೆ ಹೆಚ್ಚು ಅರಣದ್ಯಂಚಿನಲ್ಲಿ ಬರುವುದರಿಂದ ಪ್ರತಿನಿತ್ಯ ಒಂದಲ್ಲ ಒಂದು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಮೇಲೆ ಒತ್ತಡ ಹಾಕಿ ರೈಲ್ವೆ ಬ್ಯಾರಿ ಕ್ಯಾಡ್ ಅಳವಡಿಕೆಗೆ ಹಣವನ್ನು ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಮೇಟಿಕುಪ್ಪೆ ಅರಣ್ಯ ಪ್ರದೇಶದ ಬೊಮ್ಮಲಪುರ ಭಾಗದಲ್ಲಿ ಕಾಡಾನೆಗಳು ಗ್ರಾಮದ ಕಡೆ ಬಂದು ರೈತರ ಬೆಳೆ ಹಾನಿ ಉಂಟು ಮಾಡುವುದನ್ನು ರೈತರು ಒತ್ತಾಯದ ಮೇರೆಗೆ ಮೂರು ಕಿಲೋ ಮೀಟರ್ ವರೆಗೆ ರೈಲ್ವೆ
ಬ್ಯಾರಿಕೇಡ್ ಅಳವಡಿಸಲು ಸುಮಾರು 5 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.ಕಳೆದೊಂದು ವರ್ಷದಿಂದ ಮೇಟಿಕುಪ್ಪೆ ಅರಣ್ಯ ವಲಯದಲ್ಲಿ ಹುಲಿ ಮತ್ತು ಆನೆಗಳ ದಾಳಿ ನಡೆಯದೇ ಇರುವುದಕ್ಕೆ ಇಲ್ಲಿನ ಅರಣ್ಯ ಸಿಬ್ಬಂದಿಗಳ ಸೇವೆಯೇ ಕಾರಣವಾಗಿದೆ.
ಮನೆ ಮಂಜೂರು: ಬೊಮ್ಮಲಾಪುರ ಹಾಡಿಯ ಆದಿವಾಸಿಗಳಿಗೆ 10 ಮನೆಗಳು ಮಂಜೂರಾಗಿದೆ. ಅರಣ್ಯ ಇಲೆಖೆಯಿಂದ ಮನೆ ನಿರ್ಮಾಣಕ್ಕೆ ಅನುಮತಿ ನೀಡುತ್ತಿಲ್ಲ, ಆದ್ದರಿಂದ ಅರಣ್ಯ ಇಲಾಖೆಯು ಮತ್ತೊಮ್ಮೆ ಪರಿಶೀಲನೆ ನಡೆಸಿ ಮನೆ ನಿರ್ಮಿಸಲು ಅನುಮತಿ ನೀಡಬೇಕು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಮೇಟಿಕುಪ್ಪೆ ಅರಣ್ಯ ವ್ಯಾಪ್ತಿಯ 9 ಗ್ರಾಮಗಳ 19 ಕೆರೆಗಳು ಬೇಸಿಗೆಯಲ್ಲಿ ಬತ್ತಿರುವುದು ಗಮನಕ್ಕೆ ಬಂದಿದೆ, ಈ ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ನಾಗರಹೊಳೆ ಡಿಎಫ್‌ಒ ಸೀಮಾ ಮಾತನಾಡಿ ಕಾಡಂಚಿನ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಿದೆ. ಹಾಗಾಗಿ 2.9 ಕಿಲೋಮೀಟರ್ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವನ್ಯ ಜೀವಿಗಳ ಶೇ. 90 ರಷ್ಟು ಉಪಟಳ ಕಡಿಮೆಯಾಗಲಿದೆ ಎಂದರು.
ಆನೆ ಉಪಟಳ:
ರೈತ ಮುಖಂಡ ಉಡ ನಾಗರಾಜು ಮಾತನಾಡಿ ಬೂದನೂರು ಗ್ರಾಮದಲ್ಲಿ ಒಂಟಿ ಕಾಡಾನೆಯೊಂದರ ಉಪಟಳ ಹೆಚ್ಚಾಗಿದೆ, ಅದರಿಂದ ರೈತರು ಬೆಳೆದ ಬೆಳೆ ಸಂಪೂರ್ಣ ಹಾನಿ ಮಾಡುತ್ತಿದೆ, ಜೊತೆಗೆ ಜಮೀನಿನಲ್ಲಿರುವ ಗುಡಿಸಲು ಹಾಗೂ ಹುಲ್ಲಿನ ಬಣವೆ ಗಳನ್ನು ಹಾನಿ ಮಾಡುತ್ತಿರುವುದರಿಂದ ರೈತರು ಜಮೀನುಗಳಿಗೆ ಬರಲು
ಹೆದರುತ್ತಿದ್ದಾರೆ, ಆದ್ದರಿಂದ ಈ ಆನೆಯನ್ನು ಕಾರ್ಯಾಚರಣೆ ಮೂಲಕ ಸೆರೆಹಿಡಿಯುವಂತೆ
ಒತ್ತಾಯಿಸಿದರು. ವೀರನಹೊಸಹಳ್ಳಿ ಅರಣ್ಯ ವಲಯದ ಎಸಿಎಫ್ ಲಕ್ಷ್ಮೀಕಾಂತ್, ಕಾಂಗ್ರೆಸ್ ಮುಖಂಡರಾದ ಸೌಮ್ಯಾ, ಕಾಳೇಗೌಡ, ಸುರೇಶ್, ಚಂದ್ರಶೇಖರ್, ಅಜಾರ್, ನಾಗರಾಜು, ರವಿಕುಮಾರ್ ಇದ್ದರು.