ಭಾರತೀಯ ಸಂಯುಕ್ತ ವೈದ್ಯ ಪದ್ಧತಿಗಳ ಸಂಸ್ಥೆಯ ರಾಜ್ಯಾಧ್ಯಕ್ಷ ಸಿದ್ದಪ್ಪ ಮಾಗಾರಿ ಮಾಹಿತಿ
ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸುತ್ತಿರುವುದು ಸರಿಯಲ್ಲ
ಮೈಸೂರು: ಆಯುರ್ವೇದ, ಯುನಾನಿ ಮತ್ತು ಸಿದ್ಧ ವೈದ್ಯರ ಮೇಲೆ ದಂಡ ವಿಧಿಸುವುದಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ಭಾರತೀಯ ಸಂಯುಕ್ತ ವೈದ್ಯ ಪದ್ಧತಿಗಳ ಸಂಸ್ಥೆಯ ರಾಜ್ಯಾಧ್ಯಕ್ಷ ಸಿದ್ದಪ್ಪ ಮಾಗಾರಿ ತಿಳಿಸಿದರು.
ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸುವವರೆಗೂ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಬಾರದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಮಗ್ರ ವೈದ್ಯಕೀಯ ಪದ್ಧತಿ ಆಧಾರದ ಮೇಲೆ ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆ ನೀಡುತ್ತಿದ್ದು, ಇದು ಇವರ ವ್ಯಾಸಂಗದ ವೇಳೆಯ ಪಠ್ಯ ವಿಷಯವೂ ಆಗಿದೆ.
ಆದರೂ, ಯಾರೋ ನೀಡುವ ದೂರನ್ನಾಧರಿಸಿ ಅವರ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸುತ್ತಿರುವುದು ಸರಿಯಲ್ಲ ಎಂದರು.
ಭಾರತೀಯ ವೈದ್ಯ ಪದ್ಧತಿಗಳ ವೈದ್ಯರು ಅವರ ಪಠ್ಯಕ್ರಮ ಮತ್ತು ತರಬೇತಿ ಆಧರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಪಠ್ಯಕ್ರಮ ಸಂಯೋಜಿತ ಮಾದರಿಯಲ್ಲಿ ಇದೆ. ಶೇ.40ರಷ್ಟು ಆಧುನಿಕ ವೈದ್ಯ ವಿಜ್ಞಾನದ ವಿಷಯ ಹೊಂದಿದೆ.
ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಈ ವೈದ್ಯರಿಗೆ ಹಲವಾರು ಹಕ್ಕು ಮತ್ತು ಸವಲತ್ತು ನೀಡಿದೆ. ಇಂತಹ ಹಕ್ಕುಗಳನ್ನು ದಮನ ಮಾಡಿ ಅವರು ಅಧ್ಯಯನ ಮಾಡಿದ ಆಧುನಿಕ ವೈದ್ಯ ವಿಜ್ಞಾನದ ವಿಷಯವನ್ನು ಚಿಕಿತ್ಸೆಯಲ್ಲಿ ಅಳವಡಿಸಿದರೆ ಅದು ಅಪರಾಧ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಬೇಸರಿಸಿದರು.
ದಾಳಿ ಮಾಡಿದ ಬಳಿಕ ಅಂತಹವರನ್ನು ನಕಲಿ ವೈದ್ಯ ಎಂಬ ಶದ್ಧ ಬಳಸಿ ತೇಜೋವಧೆ ಮಾಡುವುದು ಶಿಕ್ಷಾರ್ಹವಾಗಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ನಾಯಕ ಮತ್ತು ಕಾರ್ಯದರ್ಶಿ ಮಧುದರ್ಶನ್ ಇದ್ದರು.