ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಸಂಪನ್ನ

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2026’
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2026’
Published on

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್ ಚಿಂತನೆಗೆ ವೇದಿಕೆಯಾಗುವ ಮೂಲಕ ರಂಗಾಸಕ್ತರು, ಸಾರ್ವಜನಿಕರಲ್ಲಿ ಅರಿವು ಜ್ಯೋತಿ
  • ಎಚ್ಚರಿಕೆಯ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿ
ಪ್ರತಿಷ್ಠಿತ ಮೈಸೂರು ರಂಗಾಯಣದ ವತಿಯಿಂದ ‘ಬಾಬಾ ಸಾಹೇಬ್ ಸಮತೆಯೆಡೆಗೆ ನಡಿಗೆ’ ಆಶಯದೊಂದಿಗೆ ನಡೆದ ಈ ರಂಗೋತ್ಸವ ಭೀಮಯಾನವನ್ನೇ ವಿಹರಿಸಿತು. ಅಂಬೇಡ್ಕರ್ ಚಿಂತನೆಗೆ ವೇದಿಕೆಯಾಗುವ ಮೂಲಕ ರಂಗಾಸಕ್ತರು, ಸಾರ್ವಜನಿಕರಲ್ಲಿ ಅರಿವು ಜ್ಯೋತಿಯೊಂದಿಗೆ ಎಚ್ಚರಿಕೆಯ ಪ್ರಜ್ಞೆಯನ್ನೂ ಮೂಡಿಸುವಲ್ಲಿ ಯಶಸ್ಸಿಯಾಯಿತು.
ಅಂಬೇಡ್ಕರ್ ವಿಚಾರಧಾರೆಯಲ್ಲಿ ಬಹುಮುಖಿ ಸಂಸ್ಕೃತಿಯ ಒಳಹುಗಳ ಹುಡುಕಾಟ ನಡೆಸಲಾಯಿತು. ನಾಟಕೋತ್ಸವದಲ್ಲಿ ರಂಗಭೂಮಿಗೆ ಸಂಬಂಧಿಸಿದ ಎಲ್ಲ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ತರಲಾಯಿತು. ಹಲವು ಭಾಷೆ ಮತ್ತು ವಿಭಿನ್ನ ಸಂಸ್ಕೃತಿಯ ಕಲಾ ವೈಶಿಷ್ಟೃಗಳನ್ನು ಪರಿಚಯಿಸುವ ಪ್ರಕ್ರಿಯೆಗೆ ರಂಗಾಸಕ್ತರಿಂದ ಉತ್ತಮ ಸ್ಪಂದನೆಯೂ ದೊರೆಯಿತು.
ರಜಾ ದಿನವಾದ ಭಾನುವಾರ ಸಂಜೆ ಹೊತ್ತಿಗೆ ಸಾಂಸ್ಕೃತಿಕ ಚಟುವಟಿಕೆಗಳ ವೀಕ್ಷಣೆಯೊಂದಿಗೆ ವಿಭಿನ್ನ ರುಚಿ ಸವಿಯಲು ಬಹುತೇಕರು ಕುಟುಂಬ ಸಮೇತರಾಗಿ ಇಲ್ಲಿಗೆ ದೌಡಾಯಿಸಿದ್ದರು. ಹೀಗಾಗಿ ಸಂಜೆ ನಡೆದ ನಾಟಕ, ಜಾನಪದೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಭೂಮಿಗೀತದಲ್ಲಿ ಭೂಮಿಗೀತದಲ್ಲಿ ಪ್ರದರ್ಶನ ಕಂಡ ‘ಕವನ್ ಆನ್ ಅಂಬೇಡ್ಕರ್ ಒಪೆರಾ’ ಹಿಂದಿ ನಾಟಕವು ಚಿಂತನೆಯೊಂದಿಗೆ ನಾಟಕಾಭಿಮಾನಿಗಳನ್ನು ರಂಜಿಸಿತು. ಸುದೇಶ್ ಜಾದವ್ ಅವರ ರಚನೆ ಮಾಡಿರುವ ಅಭಿಷೇಕ ಮಜೂಂದಾರ್ ನಿರ್ದೇಶನದಲ್ಲಿ ಮುಂಬೈನ ಯಲ್ಗಾರ್ ಸಾಂಸ್ಕೃತಿಕ ಮಂಚ್‌ನ ಕಲಾವಿದರು ಉತ್ತಮವಾಗಿ ಅಭಿನಯಿಸಿದರು.
ವನರಂಗದಲ್ಲಿ ಪ್ರದರ್ಶನ ಕಂಡ ನಾಟಕಕಾರ ಶ್ರದ್ಧಾರಾಜ್, ನರಸಿಂಹರಾಜು ರಚನೆ, ನಿರ್ದೇಶನದಲ್ಲಿ ‘ರುಮು ರುಮು ರುಮು’ ನಾಟಕವು ಗಮನ ಸೆಳೆಯಿತು. ತುಮಕೂರಿನ ಚಿಗುರು ಅಕಾಡೆಮಿ ಆಫ್ ಪರ್ಫಾಮಿಂಗ್ ಆಟ್ಸ್‌ನ ಕಲಾವಿದರು ಸೊಗಸಾಗಿ ನಟಿಸಿದರು.
ಬಹುರೂಪಿ ಚಲನಚಿತ್ರೋತ್ಸವದಲ್ಲಿ ಕೊನೆ ದಿನವಾದ ಇಂದು, ‘ಗಾಂಧಿ ಜಯಂತಿ’ ಚಿತ್ರದ ಪ್ರದರ್ಶನದೊಂದಿಗೆ ಬಾಪುಜಿ ಚಿಂತನೆ ಹರಿಯಿತು. ರವೀಂದ್ರನಾಥ ಸಿರಿವರ ನಿರ್ದೇಶನದ ಕನ್ನಡ ಭಾಷೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೃಷ್ಣಮೂರ್ತಿ ಚಮರಂ ನಿರ್ದೇಶನದ ‘ಭಾರತದ ಪ್ರಜೆಗಳಾದ ನಾವು’ ಚಿತ್ರವು ಪ್ರೇಕ್ಷಕರಿಗೆ ಇಷ್ಟವಾಯಿತು. ಸಿದ್ದಲಿಂಗಯ್ಯ ಹೇಮಾವತಿ ಚಿತ್ರದೊಂದಿಗೆ ಸಿನಿಉತ್ಸವಕ್ಕೆ ತೆರೆಬಿದ್ದಿತು. ಕೊನೆ ದಿನ ಮೂರು ಕನ್ನಡ ಚಿತ್ರಗಳು ಪ್ರದರ್ಶನಗೊಂಡವು.

ಪಂಜಾಬಿ ಗಾಯಕಿಯ ಚಿಂತನೆ ಗಾನಮೋಡಿ:

‘ಬಾಬಾ ಸಾಹೇಬ್ ಸಂಗೀತ ಸ್ಮತಿ’ ಕಾರ್ಯಕ್ರಮದಲ್ಲಿ ಪಂಜಾಬಿ ಜಾನಪದ, ರಾಪ್ ಮತ್ತು ಹಿಪ್‌ಹಾಪ್ ಗಾಯಕಿ ಗಿನ್ನಿ ಮಾಹಿ ಅವರು ತಮ್ಮ ಗೀತಗಾಯನದ ಮೂಲಕ ಅಂಬೇಡ್ಕರ್ ವಿಚಾರಧಾರೆ ಮಿಂಚು ಹರಿಸಿದರು.
ಕಲಾಮಂದಿರದಲ್ಲಿ ಸಂಜೆ ಆಯೋಜಿಸಿದ್ದ ಅವರ ಕಾರ್ಯಕ್ರಮದಲ್ಲಿ ಅವರ ಸಾಮಾಜಿಕ ನ್ಯಾಯ, ಸಮಾನತೆ ಗೀತಗಾಯನಕ್ಕೆ ಸಭಿಕರು ಮಂತ್ರಮುಗ್ಧರಾದರು. ವಿವಿಧ ಗೀತೆಗಳ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂದೇಶಗಳನ್ನು ಪ್ರಸ್ತುತ ಪಡಿಸಲಾಯಿತು.
ಜರ್ಮನಿಯಲ್ಲಿ ಗ್ಲೋಬಲ್ ಮೀಡಿಯಾ ಫೋರಂನಲ್ಲಿ ಭಾಗವಹಿಸಿ ಯುವ ಧ್ವನಿ ಎಂದು ಗುರುತಿಸಿಕೊಂಡಿರುವ ಇವರು ತಮ್ಮ ಜನಪ್ರಿಯ ಹಾಡುಗಳಾದ ‘ಡೇಂಜರ್ ಚಮರ್’ ಮತ್ತು ‘ಫ್ಯಾನ್ ಬಾಬಾ ಸಾಹಿಬ್ ದಿ’ಯೊಂದಿಗೆ ಸಭಿಕರು ತಲೆದೂಗುವಂತೆ ಮಾಡಿದರು. ಇವರ ಗೀತಗಾಯನ ಚಿಂತನೆಯೊಂದಿಗೆ ರಂಜನೆಯನ್ನೂ ಉಣಬಡಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net