ಎಂಎಸ್‌ಪಿ ಖಾತ್ರಿಗೆ ಜಾಗೃತಿ ಜಾಥಾ: ಫೆ.7ರಿಂದ ಕನ್ಯಾಕುಮಾರಿಯಿಂದ ಆರಂಭ

ಕುರುಬೂರು ಶಾಂತಕುಮಾರ್
ಕುರುಬೂರು ಶಾಂತಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಮಾ.19ರಂದು ದೆಹಲಿy ರಾಮ್‌ಲೀಲಾ ಮೈದಾನದಲ್ಲಿ ರೈತರ ಬೃಹತ್ ಸಮಾವೇಶ
  • ಎಂಎಸ್‌ಪಿ ಖಾತ್ರಿ ಕಾನೂನು ಇಲ್ಲದ ಕಾರಣ ದೇಶದ ರೈತರ ವರ್ಷಕ್ಕೆ 15 ಲಕ್ಷ ಕೋಟಿ ರೂ. ನಷ್ಟ
ಮೈಸೂರು: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ರಾಜಕೀಯೇತರ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಜಾಥಾ ಆಯೋಜಿಸಲಾಗಿದೆ. 
ಫೆ.7ರಂದು ಕನ್ಯಾಕುಮಾರಿಯಿಂದ ಜಾಥಾ ಶುರುವಾಗಲಿದ್ದು, ಸುಮಾರು 40 ದಿನ ಪ್ರಯಾಣಿಸಿ ಕಾಶ್ಮೀರ ತಲುಪಿದ ನಂತರ ಮಾ.19ರಂದು ದೆಹಲಿ ತಲುಪಿಲಿದ್ದು, ಅಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ದೇಶದ ಎಲ್ಲ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು. 
ಜಾಥಾ ವೇಳೆ ದೇಶದ ರೈತರಿಂದ ಸಂಗ್ರಹಿಸಿರುವ ಸಹಿ ಸಂಗ್ರಹದ ಮನವಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಲಾಗುವುದು ಎಂದು ಮೋರ್ಚಾದ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೆ ದೆಹಲಿ ಗಡಿಯಲ್ಲಿ ವರ್ಷಾನುಕಾಲ ರೈತರು ಚಳವಳಿ ನಡೆಸಿ ಸರ್ಕಾರವನ್ನು ಎಚ್ಚರಿಸಿದ್ದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ಬಂದಿಲ್ಲ. 
ಈ ಕಾರಣಕ್ಕೆ ಕಳೆದ ವರ್ಷ ರಾಷ್ಟ್ರೀಯ ಸಂಚಾಲಕ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾ 131 ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದರು. ನಂತರ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ನಿವೃತ್ತ ನ್ಯಾಯಾಧೀಶ ನವಾಬ್ ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸಮಸ್ಯೆ ಪರಿಹಾರಕ್ಕೆ ವರದಿ ನೀಡುವಂತೆ ಸೂಚಿಸಿದ್ದರು ಎಂದು ತಿಳಿಸಿದರು. 
ಈ ಸಮಿತಿ ರೈತರ ಪರವಾಗಿ ವರದಿ ನೀಡಿದೆ. ಅದೇ ರೀತಿ ಕೇಂದ್ರ ಸರ್ಕಾರದ 31 ಜನರ ಸಂಸದೀಯ ಸಮಿತಿ ಸಹ ರೈತರ ಪರವಾದ ವರದಿ ನೀಡಿ ಎಂಎಸ್‌ಪಿ ಖಾತ್ರಿ ಕಾನೂನು ಜಾರಿಗೆ ಬೆಂಬಲಿಸಿದೆ.
 ಇದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ಹೋರಾಟದ ಫಲವಾಗಿ ಆಗಿರುವ ಸಾಧನೆ. ಆದರೆ, ಕೇಂದ್ರ ಸರ್ಕಾರ ಇದರ ಬಗ್ಗೆ ಇನ್ನೂ ಯಾವುದೇ ಚಕಾರ ಎತ್ತುತ್ತಿಲ್ಲ. ಆದ್ದರಿಂದ ರೈತರಲ್ಲಿ ಜಾಗೃತಿ ಮೂಡಿಸಲು ಸರ್ಕಾರವನ್ನು ಎಚ್ಚರಿಸಬೇಕಾಗಿರುವ ನಿಟ್ಟಿನಲ್ಲಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಎಂಎಸ್‌ಪಿ ಖಾತ್ರಿ ಕಾನೂನು ಇಲ್ಲದ ಕಾರಣ ದೇಶದ ರೈತರ ವರ್ಷಕ್ಕೆ 15 ಲಕ್ಷ ಕೋಟಿ ರೂ. ನಷ್ಟ ಅನುಭವಿಸುತ್ತಿದ್ದಾರೆ. ಜಾಥಾ ವೇಳೆ ಆಯಾ ರಾಜ್ಯದ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ.
 ಇದು ಹಾದು ಹೋಗುವ ಪ್ರತಿಯೊಂದೂ ರಾಜ್ಯಗಳ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಎಂಎಸ್‌ಪಿ ಕುರಿತು ಮನವರಿಕೆ ಮಾಡಿಕೊಡಲಾಗುವುದು. ರೈತರಿಂದ ಸಹಿ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.
ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ವರಕುಡ ನಾಗೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net