ಪ್ರೊಸ್ಟೇಟ್ ಆರೋಗ್ಯ ಮತ್ತು ಮೂತ್ರಪಿಂಡದ ಕಲ್ಲುಗಳ (ಕಿಡ್ನಿ ಸ್ಟೋನ್) ನಿರ್ವಹಣೆ ಕುರಿತು ಜಾಗೃತಿ

ಪ್ರೊಸ್ಟೇಟ್ ಆರೋಗ್ಯ ಮತ್ತು ಮೂತ್ರಪಿಂಡದ ಕಲ್ಲುಗಳ (ಕಿಡ್ನಿ ಸ್ಟೋನ್) ನಿರ್ವಹಣೆ ಕುರಿತು ಜಾಗೃತಿ
ಪ್ರೊಸ್ಟೇಟ್ ಆರೋಗ್ಯ ಮತ್ತು ಮೂತ್ರಪಿಂಡದ ಕಲ್ಲುಗಳ (ಕಿಡ್ನಿ ಸ್ಟೋನ್) ನಿರ್ವಹಣೆ ಕುರಿತು ಜಾಗೃತಿ
Published on

ಪ್ರಮುಖ ಮುಖ್ಯಾಂಶಗಳು

  • ಮಣಿಪಾಲ್ ಆಸ್ಪತ್ರೆ ಮೈಸೂರು ವತಿಯಿಂದ ಕಾರ್ಯಕ್ರಮ
ಮೈಸೂರು: ಪ್ರೊಸ್ಟೇಟ್ ಸಮಸ್ಯೆಗಳು ಮತ್ತು ಕಿಡ್ನಿ ಸ್ಟೋನ್‌ಗಳಂತಹ ಸಾಮಾನ್ಯ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಆದರೆ, ಈ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು, ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ಮತ್ತು ವೈದ್ಯರನ್ನು ಸಂಪರ್ಕಿಸಲು ಹಿಂಜರಿಯುವುದರಿಂದ ಅನೇಕ ಸಂದರ್ಭಗಳಲ್ಲಿ ಕಾಯಿಲೆ ತಡವಾಗಿ ಪತ್ತೆಯಾಗುತ್ತಿದೆ. ಸರಿಯಾದ ಸಮಯದಲ್ಲಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಈ ಸಮಸ್ಯೆಗಳನ್ನು ಗುಣಪಡಿಸಬಹುದು. ಆದ್ದರಿಂದ ಸಾರ್ವಜನಿಕರಲ್ಲಿ ಮೂತ್ರಾಂಗದ ಆರೋಗ್ಯ, ಕಾಯಿಲೆಯ ಅಪಾಯಗಳು, ತಡೆಗಟ್ಟುವ ಕ್ರಮಗಳು ಮತ್ತು ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ.
ಈ ಉದ್ದೇಶದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆ ವತಿಯಿಂದ ‘ನೋ ಯುವರ್ ಡಾಕ್ಟರ್’ (ನಿಮ್ಮ ವೈದ್ಯರನ್ನು ತಿಳಿಯಿರಿ – ಮೂತ್ರಶಾಸ್ತ್ರ ಆರೋಗ್ಯ ಸಭೆ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಮೂತ್ರಶಾಸ್ತ್ರದ ಸಾಮಾನ್ಯ ಕಾಯಿಲೆಗಳು, ಅವುಗಳ ಆರಂಭಿಕ ಲಕ್ಷಣಗಳು, ತಡೆಗಟ್ಟುವ ವಿಧಾನಗಳು ಮತ್ತು ಅತ್ಯಾಧುನಿಕ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮದಲ್ಲಿ ಒಟ್ಟು 120ಕ್ಕೂ ಹೆಚ್ಚು ಆಸಕ್ತ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸೀನಿಯರ್ ಕನ್ಸಲ್ಟೆಂಟ್ - ಯುರಾಲಜಿ, ಆಂಡ್ರಾಲಜಿ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಆದ ಡಾ. ಟಿ. ಪಿ. ದಿನೇಶ್‌ಕುಮಾರ್ ಅವರು ‘ಪ್ರೊಸ್ಟೇಟ್ ಸಮಸ್ಯೆಗಳು ಮತ್ತು ಅದರ ನಿರ್ವಹಣೆ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಮತ್ತೊಬ್ಬ ಕನ್ಸಲ್ಟೆಂಟ್ - ಯುರಾಲಜಿ, ಆಂಡ್ರಾಲಜಿ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಆದ ಡಾ. ಕೆ. ಎ. ತಿಮ್ಮಯ್ಯ ಅವರು ‘ಕಿಡ್ನಿ ಸ್ಟೋನ್ ಮತ್ತು ಅದರ ನಿರ್ವಹಣೆ’ ಕುರಿತು ಮಾಹಿತಿ ನೀಡಿದರು. ಮಣಿಪಾಲ್ ಆಸ್ಪತ್ರೆ ಮೈಸೂರಿನ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. ಅವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಸಾರ್ವಜನಿಕರಿಗೆ ಈ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡುವುದು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಪ್ರೇರೇಪಿಸುವುದಾಗಿತ್ತು.
ಡಾ. ದಿನೇಶ್ ಕುಮಾರ್ ಟಿ. ಪಿ. ಅವರು ಮಾತನಾಡಿ, “ಪುರುಷರಲ್ಲಿ, ವಿಶೇಷವಾಗಿ ವಯಸ್ಸಾಗುತ್ತಿದ್ದಂತೆ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಪ್ರೊಸ್ಟೇಟ್ ಕಾಯಿಲೆಗಳು ಪ್ರಮುಖವಾದವು. ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ತಡೆ ಹಿಡಿಯಲು ಕಷ್ಟವಾಗುವುದು, ಮೂತ್ರದ ನಿಧಾನಗತಿಯ ಹರಿವು ಅಥವಾ ಮೂತ್ರದಲ್ಲಿ ರಕ್ತದ ಅಂಶ ಕಾಣಿಸಿಕೊಳ್ಳುವ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಹೆಚ್ಚಿನ ಪ್ರೊಸ್ಟೇಟ್ ಸಮಸ್ಯೆಗಳು ಕ್ಯಾನ್ಸರ್ ರಹಿತವಾಗಿದ್ದು, ಸುಲಭವಾಗಿ ಗುಣಪಡಿಸಬಹುದಾಗಿವೆ. ಆದರೆ ಆರಂಭಿಕ ಹಂತದಲ್ಲೇ ತಪಾಸಣೆ ಮಾಡಿಸಿಕೊಳ್ಳುವುದರಿಂದ ಪ್ರೊಸ್ಟೇಟ್ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ಮೊದಲೇ ಪತ್ತೆಹಚ್ಚಬಹುದು. ನಿಯಮಿತ ಆರೋಗ್ಯ ತಪಾಸಣೆ ಮತ್ತು ತಜ್ಞರ ಸಲಹೆ ಪಡೆಯುವುದರಿಂದ ಪುರುಷರು ಉತ್ತಮ ಜೀವನಶೈಲಿಯನ್ನು ಹೊಂದಬಹುದು,” ಎಂದರು.
ಕಿಡ್ನಿ ಸ್ಟೋನ್ ಬಗ್ಗೆ ಮಾತನಾಡಿದ ಡಾ. ತಿಮ್ಮಯ್ಯ ಕೆ. ಎ. ಅವರು, “ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲುಗಳು) ಸಾಮಾನ್ಯ ಸಮಸ್ಯೆಯಾಗಿದ್ದು, ಇದನ್ನು ತಡೆಗಟ್ಟಬಹುದು. ಆದರೆ ಚಿಕಿತ್ಸೆ ನೀಡದೆ ಹಾಗೇ ಬಿಟ್ಟರೆ ಇದು ತೀವ್ರ ನೋವು ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಕಷ್ಟು ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಮತ್ತು ಮೂತ್ರದ ಸಮಸ್ಯೆಗಳಿದ್ದಾಗ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಮುಖ್ಯ. ಈಗಿನ ಅತ್ಯಾಧುನಿಕ ಲೇಸರ್ ಮತ್ತು ಸಣ್ಣ ಶಸ್ತ್ರಚಿಕಿತ್ಸೆಗಳ (ಮಿನಿಮಲಿ ಇನ್ವೇಸಿವ್) ನೆರವಿನಿಂದ ಕಿಡ್ನಿ ಸ್ಟೋನ್‌ಗಳಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಇದರಿಂದ ರೋಗಿಗಳು ಬೇಗನೆ ಚೇತರಿಸಿಕೊಂಡು ತಮ್ಮ ದೈನಂದಿನ ಕೆಲಸಗಳಿಗೆ ಮರಳಬಹುದು.” ಎಂದು ತಿಳಿಸಿದರು.
ವೈದ್ಯರ ಅಭಿಪ್ರಾಯಗಳನ್ನು ಬೆಂಬಲಿಸಿ ಮಾತನಾಡಿದ ಮಣಿಪಾಲ್ ಆಸ್ಪತ್ರೆ ಮೈಸೂರಿನ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. ಅವರು, “‘ನೋ ಯುವರ್ ಡಾಕ್ಟರ್’ ನಂತಹ ಕಾರ್ಯಕ್ರಮಗಳ ಮೂಲಕ ಮಣಿಪಾಲ್ ಆಸ್ಪತ್ರೆಯು ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಸದಾ ಶ್ರಮಿಸುತ್ತಿದೆ. ಜನರಿಗೆ ನಂಬಿಕಸ್ಥ ಮಾಹಿತಿಯನ್ನು ನೀಡಿ, ಅವರು ಸರಿಯಾದ ಸಮಯದಲ್ಲಿ ಸೂಕ್ತ ಆರೋಗ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಬಲಪಡಿಸುವುದು ನಮ್ಮ ಗುರಿಯಾಗಿದೆ.” ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ನಡೆದ ಪ್ರಶ್ನೋತ್ತರ ಸಂವಾದದಲ್ಲಿ ಸಾರ್ವಜನಿಕರು ತಜ್ಞ ವೈದ್ಯರೊಂದಿಗೆ ನೇರವಾಗಿ ಮಾತನಾಡಿ ತಮ್ಮ ಆರೋಗ್ಯದ ಸಂಶಯಗಳನ್ನು ಪರಿಹರಿಸಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net