ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಏರುಗತಿ

ಹುಣಸೂರು ನಗರದಲ್ಲಿ ಆಯೋಜಿಸಿದ್ದ ದಲಿತ ಮಹಿಳಾ ಸಮಾವೇಶದಲ್ಲಿ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ, ಮುಖಂಡರಾದ ಸಾಕಮ್ಮ, ಬಸಂತಿ, ಚೌಮಿ, ದೇವಾನಿ ಇತರರಿದ್ದರು.
ಹುಣಸೂರು ನಗರದಲ್ಲಿ ಆಯೋಜಿಸಿದ್ದ ದಲಿತ ಮಹಿಳಾ ಸಮಾವೇಶದಲ್ಲಿ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ, ಮುಖಂಡರಾದ ಸಾಕಮ್ಮ, ಬಸಂತಿ, ಚೌಮಿ, ದೇವಾನಿ ಇತರರಿದ್ದರು.
Published on

ಹುಣಸೂರು:

ಸರ್ಕಾರಗಳು ದಲಿತ ಸಮುದಾಯದ ಅಭಿವೃದ್ಧಿಯನ್ನು ಕಡೆಗಣಿಸಿರುವುದು ಮತ್ತು ದಲಿತ ಮಹಿಳೆಯರಿಗೆ ರಕ್ಷಣೆಯಲ್ಲಿನ ತಾತ್ಸಾರ ಮನೋಭಾವ ಬೇಸರ ತರಿಸಿದೆ ಎಂದು ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ್ ಬಣ) ಜಿಲ್ಲಾ ಸಂಘಟನಾ ಸಂಚಾಲಕ ಕೊಳಗಟ್ಟ ಕೃಷ್ಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ದಲಿತ ಮಹಿಳಾ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಪ್ರಸಕ್ತ ಸರ್ಕಾರಗಳು ದಲಿತರ ಅಭಿವೃದ್ಧಿಯನ್ನು ಕಡೆಗಣಿಸಿರುವುದಲ್ಲದೆ ರಕ್ಷಣೆಯಲ್ಲೂ ತಾತ್ಸಾರ ಮನೋಭಾವ ಹೊಂದಿರುವುದರಿಂದಲೇ ಇಂದು ರಾಜ್ಯದಲ್ಲಿ ದಲಿತರ ಹಾಗೂ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಏರುಗತಿಯಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ವರದಿಯಂತೆ ಪ್ರತಿ ದಿನ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ವರ್ಷಕ್ಕೆ ಕನಿಷ್ಠ 2000 ಪ್ರಕರಣಗಳು ನಡೆಯುತ್ತಿವೆ ಎನ್ನಲಾಗಿದೆ. ದಲಿತ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕಾನೂನುಗಳಿದ್ದರೂ ಪರಿಣಾಮಕಾರಿ ಜಾರಿ ಇಲ್ಲದ ಕಾರಣ ಇಳಿಕೆಯಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ಅಪರಾಧ ಪ್ರಕರಣಗಳ ವಿರುದ್ಧ ನಾವು ಗಂಭೀರ ಹೋರಾಟವನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಆತಂಕದ ಸಂದರ್ಭದಲ್ಲಿ ನಮಗೆ ಆದರ್ಶವೇ ನಮಗೆ ಸಂವಿಧಾನ ನೀಡಿದ ಡಾ.ಅಂಬೇಡ್ಕರ್. ಅವರ ಚಿಂತನೆಯ ಮಾರ್ಗದಲ್ಲಿ ನಾವೆಲ್ಲರೂ ಒಗ್ಗೂಡುವುದಾಗಿದೆ. ಡಾ.ಅಂಬೇಡ್ಕರ್ ಸ್ವಾತಂತ್ರ್ಯ ನಂತರದಲ್ಲಿ ಹಿಂದೂ ಕೋಡ್ ಬಿಲ್ ಮಂಡಿಸುವ ಮೂಲಕ ದೇಶದ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ತಂದುಕೊಡಲು ಮುಂದಾಗಿದ್ದರು. ಅಂಬೇಡ್ಕರ್ ವಿಮೋಚನೆಯ ಬೆಳಕಿನಲ್ಲಿ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟವನ್ನು ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಮಹಿಳಾ ಮುಖಂಡರಾದ ಅವ್ವಿ, ಸಾಕಮ್ಮ, ಬಸಂತಿ, ಚೌಮಿ, ವೈಜಯಂತಿ, ಸೀಮಾ, ಮಾಲಾ ದೇವಾನಿ, ಸಾಜಿನಿ, ಪ್ರಿಯಾಂಕಾ, ನಯನಾ ಹೇಮಾ, ವಿದ್ಯಾಶ್ರೀ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net