ಮೈಸೂರು ನಗರದ ಶ್ರೀ ಸುತ್ತೂರು ಮಠದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ, ವಚನ ಚಿತ್ರಪಿತಾಮಹ ಎಂ. ವೀರಪ್ಪ ದತ್ತಿ ಪ್ರಶಸ್ತಿ ಹಾಗೂ ಕಲಾಗುರು ಡಿ.ವಿ. ಹಾಲಭಾವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ಬಿ.ಎಸ್. ಮಂಜುನಾಥ ಸ್ವಾಮಿ, ಡಾ.ಎಂ.ಎಸ್. ಮೂರ್ತಿ, ಡಾ. ಶ್ವೇತಾ ಮಡಪ್ಪಾಡಿ ಹಾಗೂ ಇತರರು ಇದ್ದರು.
ಮೈಸೂರು: ನಗರದ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಮಠದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರದ 10 ಸಾಧಕರಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ, ವಚನ ಚಿತ್ರಪಿತಾಮಹ ಎಂ. ವೀರಪ್ಪ ದತ್ತಿ ಪ್ರಶಸ್ತಿ ಹಾಗೂ ಕಲಾಗುರು ಡಿ.ವಿ. ಹಾಲಭಾವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುತ್ತೂರು ಶ್ರೀ ಕ್ಷೇತ್ರದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಓ.ಎಲ್. ನಾಗಭೂಷಣ ಸ್ವಾಮಿ, ಎಚ್.ಎಸ್. ಸಿದ್ಧಗಂಗಪ್ಪ ಹಾಗೂ ಡಾ.ಎಸ್. ಶಿವಾನಂದ ಬ್ಯಾಲಹುಣಸಿ ಅವರಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ. ಪ್ರೊ. ಬಾಲಚಂದ್ರ ಜಯಶೆಟ್ಟಿ ಅವರ ಪರವಾಗಿ ಪತ್ನಿ ಪುಷ್ಪಾ ಪ್ರಶಸ್ತಿ ಸ್ವೀಕರಿಸಿದರು.
ಸಂಗಪ್ಪ ನಿಂಗಪ್ಪ ಮಲಗೊಂಡ , ಶಿವಪುತ್ರಪ್ಪ ಎಂ. ಬಡಿಗೇರ, ಚಂದ್ರಶೇಖರ್ ಭೀಮಣಪ್ಪ ಸೋಮಶೆಟ್ಟಿ ಅವರಿಗೆ ವಚನ ಚಿತ್ರರಚನಾ ಪಿತಾಮಹ ಎಂ. ವೀರಪ್ಪ ದತ್ತಿ ಪ್ರಶಸ್ತಿ, ಪ್ರೊ.ಕೆ.ಎಸ್. ಅಪ್ಪಾಜಯ್ಯ, ವಿಜಯ ರಾವ್, ಕಿಶೋರ್ ಎಸ್. ಹಿರೇಮಠ ಅವರಿಗೆ ಕಲಾಗುರು ಡಿ.ವಿ. ಹಾಲಭಾವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್. ಮೂರ್ತಿ ಮಾತನಾಡಿ, ಅಕ್ಷರದ ತಾಯಿ ದೃಶ್ಯಕಲೆ. ಇಂತಹ ದೃಶ್ಯಕಲೆಗೂ ಒಂದು ಸ್ಥಾನಮಾನ, ಗೌರವ, ಪ್ರೀತಿ ವಿಶ್ವಾಸ ಸಮಾಜದಲ್ಲಿ ದೊರೆಯುತ್ತದೆ ಎಂಬುದು ಬಹಳ ಹೆಮ್ಮೆಯ ವಿಚಾರ. ದೃಶ್ಯಕಲೆಗೆ ನಿಜಕ್ಕೂ ಭವಿಷ್ಯ ಇದೆ. ನಾವು ಬಹಳ ಜವಾಬ್ದಾರಿಯಿಂದ ಕಲೆ, ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಧ್ವನಿ ಫೌಂಡೇಷನ್ ಅಧ್ಯಕ್ಷೆ ಡಾ. ಶ್ವೇತಾ ಮಡಪ್ಪಾಡಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಬಹು ವಿಶೇಷವಾದ ನೆಲೆಯ ಸಾಹಿತ್ಯ ಕೃಷಿ ಮಾಡಿಕೊಟ್ಟವರು ವಚನಕಾರರು. ಪರಂಪರೆ ಹೆಸರಿನಲ್ಲಿ ನಡೆಯುತ್ತಿದ ಶೋಷಣೆಯನ್ನು ಪ್ರಶ್ನಿಸಿ ಅದರ ವಿರುದ್ಧ ಚಳವಳಿಯನ್ನೇ ವಚನಕಾರರು ನಡೆಸಿದ್ದರು. ಆ ಮೂಲಕ ಸಾಮಾಜಿಕವಾದ ಬಹುದೊಡ್ಡ ಬದಲಾವಣೆಯನ್ನು ವಚನಕಾರರು ತಂದರು. ಜನಪದರು ಹಾಗೂ ಶಿವಶರಣರು ಬೇರೆ ಬೇರೆಯಲ್ಲ ಎಂಬುದು ನನ್ನ ಅಭಿಪ್ರಾಯ. ಹಲವಾರು ಜನಪದರು ಶಿವಶರಣರಾಗಿ ಕಾರ್ಯನಿರ್ವಹಿಸಿದ್ದನ್ನು ಚರಿತ್ರೆಯಲ್ಲಿ ನೋಡಿದ್ದೇವೆ ಎಂದು ಹೇಳಿದರು.
ಸಾಹಿತಿ ಡಾ.ಓ.ಎಲ್. ನಾಗಭೂಷಣಸ್ವಾಮಿ ಮಾತನಾಡಿ, ಅನ್ನದ ಅಗತ್ಯ ಇರುವವರೆಗೆ ಅನ್ನವನ್ನು, ಅಕ್ಷರದ ಅಗತ್ಯತೆ ಇರುವವರಿಗೆ ಅಕ್ಷರವನ್ನು ಮಠಗಳು ನೀಡಿತು. ಅನ್ನ ಹಾಗೂ ಅಕ್ಷರ ದಾಸೋಹವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮಠಗಳು ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಚನಗಳನ್ನು ಓದಿದಷ್ಟು ನಮಗೆ ಹೊಸ ವಿಚಾರಗಳು ತಿಳಿಯುತ್ತಾ ಹೋಗುತ್ತದೆ. 12ನೇ ಶತಮಾನದಲ್ಲಿ ವಚನಕಾರರು ಹೇಳಿದ ಮಾತುಗಳು ಪ್ರಸ್ತುತ ಹೊಸ ಅರ್ಥದಲ್ಲಿ ಕಾಣುತ್ತದೆ. ವಚನಕಾರರು ತಮ್ಮ ಅನುಭವವನ್ನೇ ಇಟ್ಟುಕೊಂಡು ಹೇಳಿದ ವಚನಗಳು ಅತ್ಯಂತ ಮುಖ್ಯವಾದದ್ದು ಎಂದು ಹೇಳಿದರು.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ಬಿ.ಎಸ್. ಮಂಜುನಾಥ ಸ್ವಾಮಿ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಸುದರ್ಶನ್, ಉದ್ಯಮಿ ಸತೀಶ್ ಪ್ರಫುಲ್ಲಚಂದ್ರ ಹಾಗೂ ಇದ್ದರು