ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ದೊರೆಯದ ಸ್ವಾಯತ್ತ ಸ್ಥಾನ : ಡಾ. ಪುರುಷೋತ್ತಮ ಬಿಳಿಮಲೆ ಬೇಸರ

ಮೈಸೂರು ನಗರದ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ವಿವಿಧ ಐದು ಕೃತಿಗಳನ್ನು ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಬಿಡುಗಡೆ ಮಾಡಿದರು. ಡಾ. ಪುರುಷೋತ್ತಮ ಬಿಳಿಮಲೆ, ಪ್ರೊ.ಆರ್.ವಿ.ಎಸ್. ಸುಂದರಂ, ಡಾ.ಹಂಪ ನಾಗರಾಜಯ್ಯ, ಡಾ.ಗೀತಾ ನಾವಲ್, ಡಾ. ಅಕ್ಕಮಹಾದೇವಿ, ಡಾ.ನಾಗರತ್ನಮ್ಮ, ಅಭಿರುಚಿ ಗಣೇಶ್ ಹಾಗೂ ಇತರರು ಇದ್ದರು.
ಮೈಸೂರು ನಗರದ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ವಿವಿಧ ಐದು ಕೃತಿಗಳನ್ನು ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಬಿಡುಗಡೆ ಮಾಡಿದರು. ಡಾ. ಪುರುಷೋತ್ತಮ ಬಿಳಿಮಲೆ, ಪ್ರೊ.ಆರ್.ವಿ.ಎಸ್. ಸುಂದರಂ, ಡಾ.ಹಂಪ ನಾಗರಾಜಯ್ಯ, ಡಾ.ಗೀತಾ ನಾವಲ್, ಡಾ. ಅಕ್ಕಮಹಾದೇವಿ, ಡಾ.ನಾಗರತ್ನಮ್ಮ, ಅಭಿರುಚಿ ಗಣೇಶ್ ಹಾಗೂ ಇತರರು ಇದ್ದರು.
Published on
ಮೈಸೂರು: ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ಕೇಂದ್ರ ಸರ್ಕಾರ ಸ್ವಾಯತ್ತ ಸ್ಥಾನ ನೀಡಲು ಆಸಕ್ತಿ ತೋರುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.
ನಗರದ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಕರ್ಣಾಟ ಅಭಿಜಾತ ಕನ್ನಡ ಕೇಂದ್ರ ಹಾಗೂ ಅಭಿರುಚಿ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ನಾನು ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತ ಸ್ಥಾನ ನೀಡುವ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದೆ. ಆದರೆ, ಅವರು ಸ್ವಾಯತ್ತ ಸ್ಥಾನ ನೀಡಲು ಆಸಕ್ತಿ ತೋರಲಿಲ್ಲ ಎಂದರು.
‘ತಮಿಳಿಗೆ ಅಂದಿನ ಯುಪಿಎ ಸರ್ಕಾರ ರಾಜಕೀಯ ಕಾರಣಕೋಸ್ಕರ ಸ್ವಾಯತ್ತ ಸ್ಥಾನ ನೀಡಿತ್ತು. ಆದರೆ, ದೇಶದ ಉಳಿದ ಯಾವುದೇ ಭಾಷೆಗಳಿಗೆ ಇದುವರೆಗೆ ಸ್ವಾಯತ್ತ ಸ್ಥಾನ ನೀಡಿಲ್ಲ. ಅದೇ ರೀತಿ ಕನ್ನಡಕ್ಕೂ ಸ್ವಾಯತ್ತ ಸ್ಥಾನ ನೀಡಲು ಸಾಧ್ಯವಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
‘ಸ್ವಾಯತ್ತ ಸ್ಥಾನ ನೀಡಿದರೆ ನೀವು ಏನು ಮಾಡುತ್ತೀರಿ? ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಾಪಕರ ಹುದ್ದೆಗಳು ಖಾಲಿ ಉಳಿದಿದ್ದು, ಹೊಸ ನೇಮಕಾತಿಗಳೂ ನಡೆದಿಲ್ಲ. ಹೀಗಿರುವಾಗ ಕನ್ನಡಕ್ಕೆ ಸ್ವಾಯತ್ತ ಸ್ಥಾನ ನೀಡಿ ಏನು ಪ್ರಯೋಜನ. ದೇಶದ ಎಲ್ಲ ಭಾಷೆಗಳ ಶಾಸ್ತ್ರೀಯ ಅಧ್ಯಯನ ಕೇಂದ್ರವನ್ನು ಕೇಂದ್ರ ಸರ್ಕಾರವೇ ನಿರ್ವಹಿಸಲಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಬೆಂಬಲ ನೀಡಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ ಎಂದು ವಿವರಿಸಿದರು.
ಶಾಸ್ತ್ರೀಯ ಅಧ್ಯಯನ ಕೇಂದ್ರದಲ್ಲಿ ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿದರೆ ಅಗತ್ಯ ಅನುದಾನ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ. ಹೀಗಾಗಿ ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.
ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಂತಹ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಆದರೆ ಅಲ್ಲಿನ ಮಾಹಿತಿ ಫಲಕಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಮಾತ್ರ ಆದ್ಯತೆ ನೀಡಲಾಗಿದ್ದು, ಕನ್ನಡದಲ್ಲಿ ಮಾಹಿತಿ ಇಲ್ಲದಿರುವುದು ವಿಷಾದನೀಯ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಪಂಡಿತ ಪರಂಪರೆ, ನಳಚರಿತ್ರೆ-ವ್ಯಾಖ್ಯಾನ, ಚೂಡಾರತ್ನ-ಶತಕವ್ಯಾಖ್ಯಾನ, ರಾಮಧಾನ್ಯ ಚರಿತ್ರೆ-ವ್ಯಾಖ್ಯಾನ ಹಾಗೂ ಶೈವ ಮೂವ್ಮೆಂಟ್ಸ್ ಅಟ್ ಪಟ್ಟದಕಲ್ಲು ಕೃತಿಗಳನ್ನು ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಬಿಡುಗಡೆ ಮಾಡಿದರು.
ಕರ್ಣಾಟ ಅಭಿಜಾತ ಕನ್ನಡ ಕೇಂದ್ರದ ಸಂಸ್ಥಾಪಕ ಪ್ರೊ.ಆರ್.ವಿ.ಎಸ್. ಸುಂದರಂ, ವಿದ್ವಾಂಸರಾದ ಡಾ.ಹಂಪ ನಾಗರಾಜಯ್ಯ, ಲೇಖಕರಾದ ಡಾ.ಗೀತಾ ನಾವಲ್, ಡಾ. ಅಕ್ಕಮಹಾದೇವಿ, ಡಾ.ನಾಗರತ್ನಮ್ಮ, ಪ್ರಕಾಶಕ ಅಭಿರುಚಿ ಗಣೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net