ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಸರ್ಕಾರಿ ಶಾಲೆ ಮುಚ್ಚಲು ಯತ್ನ : ಎಐಡಿಎಸ್‌ಒ ಪ್ರತಿಭಟನೆ

ಚಟ್ನಹಳ್ಳಿ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್'ಒ ವತಿಯಿಂದ ಪ್ರತಿಭಟನೆ ನಡೆಯಿತು
ಚಟ್ನಹಳ್ಳಿ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್'ಒ ವತಿಯಿಂದ ಪ್ರತಿಭಟನೆ ನಡೆಯಿತು
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ
  • ಮೈಸೂರು ಜಿಲ್ಲೆಯಲ್ಲಿ 1662 ಸರ್ಕಾರಿ ಶಾಲೆಗಳು ಮುಚ್ಚುವ ಸಾಧ್ಯತೆ
ಮೈಸೂರು: ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಉದ್ದೇಶಿಸಿರು ವರುಣ ಹೋಬಳಿಯ ಚಟ್ನಹಳ್ಳಿ (ಪುಟ್ಟೇಗೌಡನ ಹುಂಡಿ) ಹಾಗೂ ಹೊಸಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉಳಿಸಲು ಆಗ್ರಹಿಸಿ ಎಐಡಿಎಸ್‌ಒ ವತಿಯಿಂದ ಶನಿವಾರ ಚಟ್ನಹಳ್ಳಿಯಲ್ಲಿ ಪ್ರತಿಭಟನೆ ನಡೆಯಿತು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, ಗ್ರಾಮ ಪಂಚಾಯಿತಿಗೆ ಒಂದು ಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರೆಯುತ್ತೇವೆ ಎಂದು ಹೇಳಿ ರಾಜ್ಯದಲ್ಲಿ 40,000ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಯೋಜನೆಯ ಭಾಗವಾಗಿ ವರಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಶಾಲೆಯನ್ನಾಗಿ ಮಾಡಿ, ಚಟ್ನಹಳ್ಳಿ ಹಾಗೂ ಹೊಸಹುಂಡಿ ಗ್ರಾಮದ ಸರ್ಕಾರಿ ಶಾಲೆಗಳನ್ನು ಮುಚ್ಚಿ ವರಕೊಡು ಶಾಲೆಗೆ ವಿಲೀನಗೊಳಿಸಲು ಉದ್ದೇಶಿಸಲಾಗಿದೆ. 91 ದಾಖಲಾತಿ ಹೊಂದಿರುವ ಈ ಶಾಲೆಯನ್ನು ಮುಚ್ಚುತ್ತಿರುವ ಸರ್ಕಾರವು ಬಡ ರೈತ, ಕಾರ್ಮಿಕರ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ. ಜಿಲ್ಲೆಯಲ್ಲಿ 1662 ಸರ್ಕಾರಿ ಶಾಲೆಗಳು ಈ ಯೋಜನೆಯ ಅಡಿಯಲ್ಲಿ ಮುಚ್ಚಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥರು ಮಾತನಾಡಿ, ಇತ್ತೀಚೆಗೆ ಚಟ್ನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಶಾಲೆಯಲ್ಲಿ ಉತ್ತಮ ವ್ಯವಸ್ಥೆ ಇದೆ. ಹೀಗಿರುವಾಗ ನಮ್ಮ ಮಕ್ಕಳನನು 6 ಕಿ.ಮೀ ದೂರವಿರುವ ವರಕೊಡು ಶಾಲೆಗೆ ಕಳುಹಿಸಲು ತಯಾರಿಲ್ಲ. ಈ ಊರಿನ ಸರ್ಕಾರಿ ಶಾಲೆಯನ್ನು ಕಟ್ಟಲು ಊರಿನ ದಾನಿಗಳು ಜಾಗ ನೀಡಿದ್ದಾರೆ. ಈ ಶಾಲೆ ಜತೆಗೆ ನಮಗೆ ಭಾವನಾತ್ಮಕ ಸಂಬಂಧ ಇದೆ. ಹಾಗಾಗಿ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಪದಾಧಿಕಾರಿಗಳಾದ ಚಂದ್ರಕಲಾ, ಸ್ವಾತಿ, ಚಂದನ, ಚಂದ್ರಿಕಾ ,ಹೇಮಲತಾ, ಅಭಿಷೇಕ್ ,ನಂದೀಶ್, ರವಿಚಂದ್ರ, ಗ್ರಾಮಸ್ಥರಾದ ಚಂದ್ರಶೇಖರ್ ,ನಾಗರಾಜು ,ಮಹದೇವಸ್ವಾಮಿ, ಸುನೀತಾ ,ಅನುರಾಧ, ನಂದಿನಿ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net