ಲಕ್ಷ್ಮಣತೀರ್ಥ ಸಂರಕ್ಷಣೆಗೆ ಅಗತ್ಯ ನೆರವು

ಹುಣಸೂರು ನಗರದ ತ್ಯಾಜ್ಯ ನೀರು ನಿರ್ವಹಣಾ ಘಟಕಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಪರಿಶೀಲಿಸಿದರು. ಗಣೇಶ್ ಕುಮಾರಸ್ವಾಮಿ, ವಿವೇಕಾನಂದ, ಬಿಳಿಕೆರೆ ಪ್ರಸನ್ನ, ದಿವ್ಯಶ್ರೀ, ದೇವರಹಳ್ಳಿ ಸೋಮಶೇಖರ್ ಇತರರಿದ್ದರು.
ಹುಣಸೂರು ನಗರದ ತ್ಯಾಜ್ಯ ನೀರು ನಿರ್ವಹಣಾ ಘಟಕಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಪರಿಶೀಲಿಸಿದರು. ಗಣೇಶ್ ಕುಮಾರಸ್ವಾಮಿ, ವಿವೇಕಾನಂದ, ಬಿಳಿಕೆರೆ ಪ್ರಸನ್ನ, ದಿವ್ಯಶ್ರೀ, ದೇವರಹಳ್ಳಿ ಸೋಮಶೇಖರ್ ಇತರರಿದ್ದರು.
Published on

ಹುಣಸೂರು:

ಲಕ್ಷ್ಮಣತೀರ್ಥ ನದಿಗೆ ಕಲುಷಿತ ನೀರು ಸೇರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸಿ ಮನವಿ ಸಲ್ಲಿಸಿದರೆ ಕೇಂದ್ರ ಸರ್ಕಾರದ ಅಗತ್ಯ ನೆರವು ಕೊಡಿಸಲು ಸಿದ್ಧನಿದ್ದೇನೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು.

ನಗರದ ಕೆ.ಆರ್.ನಗರ ರಸ್ತೆಯಲ್ಲಿರುವ ತ್ಯಾಜ್ಯ ನೀರು ನಿರ್ವಹಣಾ ಘಟಕ(ಎಸ್‌ಟಿಪಿ)ಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಹುಣಸೂರು ನಗರ ವ್ಯಾಪ್ತಿಯಲ್ಲಿ ಮೂರು ತ್ಯಾಜ್ಯ ನಿರ್ವಹಣಾ ಘಟಕಗಳಿದ್ದು ಎರಡು ಘಟಕಗಳನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಿಸುತ್ತಿದ್ದರೆ, ಮತ್ತೊಂದನ್ನು ನಗರಸಭೆ ನಿರ್ವಹಿಸುತ್ತಿದೆ. ನಗರಸಭೆ ನಿರ್ವಹಿಸುತ್ತಿರುವ ಘಟಕ 2000ರಲ್ಲಿ ನಿರ್ಮಾಣವಾಗಿದ್ದು ತಾಂತ್ರಿಕ ತೊಂದರೆಯಾಗಿದೆ. ಹಾಗಾಗಿ ನೀರು ಬಡಾವಣೆಗಳ ಮನೆಯೊಳಗೆ ಮತ್ತು ಲಕ್ಷ್ಮಣತೀರ್ಥ ನದಿಗೆ ಸೇರಿ ಕಲುಷಿತವಾಗುತ್ತಿದೆ ಎಂದರು.
ನದಿಗಳ ಶುದ್ಧೀಕರಣಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರ ಈ ಕುರಿತು ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಆರ್ಥಿಕ ನೆರವು ಕೊಡಿಸಲು ನಾನು ಸಿದ್ಧನಿದ್ದೇನೆ. ನಗರ ನಿವಾಸಿಗಳ ಬವಣೆ ತಪ್ಪಿಸುವಲ್ಲಿ ಮತ್ತು ನದಿ ಉಳಿಸುವಲ್ಲಿ ಎಲ್ಲರ ಜವಾಬ್ದಾರಿ ಇದೆ ಎಂದರು.
ಈ ವೇಳೆ ಒಳಚರಂಡಿ ಮಂಡಳಿಯ ಎಇಇ ದಿವ್ಯಶ್ರೀ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಮತ್ತೊಂದು ತ್ಯಾಜ್ಯ ನೀರು ನಿರ್ವಹಣಾ ಘಟಕ ಸ್ಥಾಪನೆಗೆ 72 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಪ್ರಸ್ತಾವನೆ ಸಲ್ಲಿಸಲಿ
ರಾಜ್ಯ ಸರ್ಕಾರಗಳು ಯೋಜನೆ ಜಾರಿಗೆ ಕೋರಿದಾಗಿ ಕೇಂದ್ರ ತನ್ನ ಪಾಲನ್ನು ನೀಡಲು ಸಿದ್ಧವಿದೆ. ಆದರೆ, ನಮ್ಮ ರಾಜ್ಯ ಸರ್ಕಾರೆ ಯಾವುದೇ ಪ್ರಸ್ತಾವನೆಯನ್ನೇ ಸಲ್ಲಿಸುತ್ತಿಲ್ಲ. ವನ್ಯಜೀವಿ ಮಾನವ ಸಂಘರ್ಷ ತಡೆಗೆ ಕೇಂದ್ರ ಹಲವು ಯೋಜನೆಗಳನ್ನು ರೂಪಿಸಿದ್ದರೂ ರಾಜ್ಯ ಸರ್ಕಾರ ತನಗೆ ಅಗತ್ಯವಿರುವ ಪ್ರಸ್ತಾವನೆಗಳನ್ನು ಸಲ್ಲಿಸುವಲ್ಲಿ ವಿಫಲವಾಗುತ್ತಿದೆ. ಇತ್ತೀಚೆಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದ ಸಭೆಯಲ್ಲಿ ಕೂಡ ಈ ಕುರಿತು ಕೇಂದ್ರದ ಉದ್ದೇಶ ತಿಳಿಸಿದ್ದೇನೆ. ಹುಲಿ ಮತ್ತು ಆನೆ ಸಂರಕ್ಷಿತ ಪ್ರದೇಶಗಳಲ್ಲಿ ಟೆಲಿಮೆಟ್ರಿ ಮುಂತಾದ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗಿದೆ. 350 ಕೋಟಿ ರೂ.ಗಳ 5 ವರ್ಷಗಳ ಯೋಜನೆ ಟೆಲಿಮೆಟ್ರಿ(ಸಮಸ್ಯೆ ಹೊಂದಿರುವ ಆನೆಗಳಿಗೆ ಕಾಲರ್ ಐಡಿ ಅಳವಡಿಸುವ ಇನ್ನಿತರ ಯೋಜನೆ)ಯೋಜನೆ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಯಾವ ಉದ್ದೇಶಕ್ಕೆ ಹಣ ನೀಡಲಾಗಿದೆಯೋ ಅದಕ್ಕೆ ಬಳಸಬೇಕು ಎಂಬ ಕೇಂದ್ರದ ನಿರ್ಧಾರವನ್ನು ರಾಜ್ಯ ಸರ್ಕಾರಗಳು ಒಪ್ಪದಿರುವುದು ಬೇಸರದ ಸಂಗತಿ ಎಂದರು.
ಹುಣಸೂರು ನಗರಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಎಸ್.ಶರವಣ, ಮಾಜಿ ಸದಸ್ಯ ವಿವೇಕಾನಂದ, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ನಾರಾಯಣ್, ರೈತಮೋರ್ಚಾ ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ಮುಖಂಡರಾದ ನಾಗರಾಜ ಮಲ್ಲಾಡಿ, ದೇವರಹಳ್ಳಿ ಸೋಮಶೇಖರ್, ಮಲ್ನಾಡ್ ರವಿ, ಮುದ್ದುರಾಮು, ಕಮಲಮ್ಮ, ಯಶೋದಮ್ಮ, ಪೌರಾಯುಕ್ತೆ ಎಂ.ಮಾನಸಾ, ಪರಿಸರ ಇಂಜಿನಿಯರ್ ಸೌಮ್ಯಾ ಇತರರು ಇದ್ದರು.
3730 ಕೋಟಿ ರೂ.ಅನುದಾನ
ಪ್ರಸ್ತುತ ಸಾಲಿನಲ್ಲಿ ನೀತಿ ಆಯೋಗ ಸಭೆಯ ನಿರ್ಣಯದಂತೆ ರಾಜ್ಯ ಸರ್ಕಾರಕ್ಕೆ ವನ್ಯಜೀವಿ ಮಾನವ ಸಂಘರ್ಷ ತಡೆ ಮತ್ತು ಪರಿಸರ ಸಮತೋಲನ ಯೋಜನೆಗಳಿಗೆ ಒಟ್ಟು 3,730 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಈವರೆಗೆ ರಾಜ್ಯ ಸರ್ಕಾರ ಕೇವಲ 1,700 ಕೋಟಿ ರೂ.ಗಳನ್ನು ಮಾತ್ರ ಬಳಸಿದೆ. ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅನುದಾನ ಸಿಕ್ಕಿದ್ದರೂ ಉಪಯೋಗಿಸಿಲ್ಲ ಎಂದು ಸಂಸದ ಯದುವೀರ್ ದೂರಿದರು.
ಕಸ್ತೂರಿ ರಂಗನ್ ಕರಡು ವರದಿ ತಿಳಿಯಲಿ
ಹುಣಸೂರು ತಾಲೂಕು ಕಾಡಂಚಿನ ಗ್ರಾಮಗಳ ರೈತರನ್ನು ಒಕ್ಕಲೆಬ್ಬಿಸುವ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ. ಕಸ್ತೂರಿ ರಂಗನ್ ಕರಡು ವರದಿ ಕುರಿತು ಎಲ್ಲರೂ ಸರಿಯಾಗಿ ತಿಳಿದುಕೊಳ್ಳಬೇಕಿದೆ. ವರದಿಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ(ಸೂಕ್ಷ್ಮವಲಯವ್ಯಾಪ್ತಿ)ನಡೆಯುವ ಕೃಷಿ ಚಟುವಟಿಕೆಗಳು, ಪಾರಂಪರಿಕ, ಸಾಂಸ್ಕೃತಿಕ ಪರಂಪರೆಗಳು ನಡೆಸಲು ಯಾವುದೇ ನಿರ್ಭಂಧವಿಲ್ಲ. ಪರಿಸರಕ್ಕೆ ಹಾನಿಯಾಗುವ ದೊಡ್ಡಮಟ್ಟದ ಮೈನಿಂಗ್, ಕೈಗಾರಿಕೆ ಸ್ಥಾಪನೆಯಂತಹ ಕ್ರಮಗಳನ್ನು ಮಾತ್ರ ನಿರ್ಬಂಧಿಸಲಾಗಿದೆ. ಇಷ್ಟಕ್ಕೂ ಇದು ಕರಡು ಅಧಿಸೂಚನೆಯಾಗಿದೆ. ಸ್ಥಳೀಯ ಆಡಳಿತ ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ತಿಳಿಸಿ ವರದಿ ನೀಡಿ ಚೌಕಟ್ಟು ರೂಪಿಸಿ ಸರ್ಕಾರಕ್ಕೆ ನೀಡಬೇಕು. ಅದನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಆದರೆ, ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಸಂಸದ ಯದುವೀರ್ ಟೀಕಿಸಿದರು.
ಕಂಪನಿಗಳೊಂದಿಗೆ ಪೂರ್ವಭಾವಿ ಸಭೆ
ಆಂಧ್ರಪ್ರದೇಶದಲ್ಲಿ ತಂಬಾಕು ಬೆಲೆ ಕುಸಿತದಿಂದಾಗಿ ರಾಜ್ಯದ ತಂಬಾಕು ಬೆಳೆಗಾರರು ಆತಂಕಗೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಕುರಿತು ಮಂಡಳಿ, ರೈತರು ಮತ್ತು ಖರೀದಿ ಕಂಪನಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದೇವೆ. ಈ ಬಾರಿ ತಂಬಾಕು ಬೆಳೆ ನಿಗದಿತ ಪ್ರಮಾಣ ಕೂಡ 60 ಮಿಲಿಯನ್ ಕೆಜಿಗೆ ಇಳಿಸಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ವಿದೇಶಿ ನೇರ ಹೂಡಿಕೆಯ ಮೂಲಕ ಕಂಪನಿಗಳನ್ನು ಕರೆತರಬೇಕಿದೆ. ಹೀಗಾದಲ್ಲಿ ಪೈಪೋಟಿ ಹೆಚ್ಚಾಗಿ ತಂಬಾಕಿಗೆ ಬೆಲೆ ಸಿಗಲಿದೆ ಎಂದು ಯದುವೀರ್ ಹೇಳಿದರು.

ಕಂಬಳ ಬೇಕಿಲ್ಲ

ದಸರ ಉತ್ಸವದಲ್ಲಿ ಕಂಬಳ ಬೇಕಿಲ್ಲ ಎಂದು ನಾನು ಈಗಾಗಲೇ ತಿಳಿಸಿದ್ದೇನೆ. ಆದರೆ, ರಾಜ್ಯ ಸರ್ಕಾರ ನಡಸಿಯೇ ಸಿದ್ಧ ಎನ್ನುತ್ತಿದೆ. ಕಂಬಳ ಕ್ರೀಡೆ ಬಗ್ಗೆ ನನಗೆ ಗೌರವವಿದೆ. ನಾನೇ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕ್ರೀಡೆ ಉದ್ಘಾಟನೆ ಮಾಡಿದ್ದೇನೆ. ಆದರೆ, ದಸರಾ ಉತ್ಸವದಲ್ಲಿ ಇದು ಬೇಕಿಲ್ಲ. ದಸರಾ ಪರಂಪರೆ ಅದರಂತೆ ಮುಂದುವರಿಯಬೇಕು. ನಾಗರಿಕರದ್ದೂ ಇದೇ ಅಭಿಪ್ರಾಯವಾಗಿದೆ. ಆದರೆ, ಸರ್ಕಾರ ಕೇಳಲು ಸಿದ್ಧವಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೇಸರ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net