ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಎಸ್.ನಾಗೇಶ್
ಕಬಿನಿ ಅತಿಥಿಗೃಹ
ತಿ.ನರಸೀಪುರ: ಆಪತ್ಕಾಲದಲ್ಲಿ ಛಾಯಾಗ್ರಾಹಕರ ಕುಟುಂಬಕ್ಕೆ ಕಿರು ಆರ್ಥಿಕ ಸಹಾಯ ನೀಡಲು ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ಆಸರೆ ಆಗಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಚ್.ಎಸ್.ನಾಗೇಶ್ ಹೇಳಿದರು.
ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಇತ್ತೀಚೆಗೆ ಕರ್ನಾಟಕ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಆಸರೆ ಯೋಜನೆ ಕುರಿತಾಗಿ ಆಯೋಜಿಸಿದ್ದ ತಾಲೂಕು ಛಾಯಾಗ್ರಾಹಕರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಅಸಂಘಟಿತ ಹಾಗೂ ದುಡಿಯುವ ವರ್ಗವಾಗಿರುವ ಛಾಯಾಗ್ರಾಹಕರನ್ನು ಸಂಘಟಿಸಲಾಗುತ್ತಿದೆ. ಸಂಘಕ್ಕೆ ಸದಸ್ಯರಾಗಬಯಸುವ ಛಾಯಾಗ್ರಾಹಕರು 110 ರೂ.ಕೊಟ್ಟು ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು.
ಸಂಘದ ತಾಲೂಕು ಅಧ್ಯಕ್ಷ ಎಸ್.ಕೆ.ಶಿವಕುಮಾರ್ ಮಾತನಾಡಿ, ಅಕಾಲಿಕ ಮರಣಕ್ಕೆ ತುತ್ತಾದ ಛಾಯಾಗ್ರಾಹಕ ಕುಟುಂಬಕ್ಕೆ ಅಸೋಸಿಯೇಷನ್ ವತಿಯಿಂದ 1 ಲಕ್ಷ ರೂ. ನೆರವು ನೀಡುವುದೇ ಆಸರೆ ಯೋಜನೆಯಾಗಿದೆ. ಹಾಗಾಗಿ ತಾಲೂಕಿನ ಎಲ್ಲ ಛಾಯಾಗ್ರಾಹಕರು ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳಬೇಕು. ಅಲ್ಲದೆ ಛಾಯಾಗ್ರಾಹಕರು ಅವರಿಗೆ ಗೊತ್ತಿರುವ ಸಹೋದ್ಯೋಗಿಗಳನ್ನು ಸಂಘಕ್ಕೆ ಸೇರ್ಪಡೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಆರ್.ನಟರಾಜು ಮಾಜಿ ಅಧ್ಯಕ್ಷ ರಘುನಂದನ್, ಕಾರ್ಯದರ್ಶಿ ಶಾಂತಕುಮಾರ, ಖಜಾಂಚಿ ನಂಜುಂಡಾರಾಧ್ಯ, ಪದಾಧಿಕಾರಿಗಳಾದ ಆರ್.ಪಿ.ಶಿವಕುಮಾರ್, ನವೀನ್‌ಕುಮಾರ್, ಶ್ಯಾಮ್, ಪೊಣ್ಣಪ್ಪ ಮಂಜುನಾಥ್, ನಂಜುಂಡಸ್ವಾಮಿ, ಪ್ರದೀಪ್, ಮಧುಸೂದನ್ ಇತರರು ಇದ್ದರು.