ಕೃತಕ ಬುದ್ಧಿಮತ್ತೆ (ಎಐ) ಮಾನವ ತೀರ್ಪಿನ ಪರ್ಯಾಯವಾಗಬಾರದು: ನ್ಯಾಯಮೂರ್ತಿ ಇ.ಎಸ್.ಇಂದಿರೇಶ್

ಮಹಾಜನ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಇ.ಎಸ್.ಇಂದಿರೇಶ್, ಪ್ರೊ.ಸಿ.ಬಸವರಾಜು, ಎಸ್.ಕೆ.ಸಂಜಯ್, ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಪ್ರೊ.ಪಿ.ಸರೋಜಮ್ಮ, ಕೆ.ಸೌಮ್ಯಾ ಇದ್ದರು.
ಮಹಾಜನ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಇ.ಎಸ್.ಇಂದಿರೇಶ್, ಪ್ರೊ.ಸಿ.ಬಸವರಾಜು, ಎಸ್.ಕೆ.ಸಂಜಯ್, ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಪ್ರೊ.ಪಿ.ಸರೋಜಮ್ಮ, ಕೆ.ಸೌಮ್ಯಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶರ ಜ್ಞಾನ, ಬುದ್ಧಿವಂತಿಕೆ ಹಾಗೂ ವಿವೇಚನೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪರ್ಯಾಯವಲ್ಲ
  • ಎಐ ತಂತ್ರಜ್ಞಾನವನ್ನು ನ್ಯಾಯಾಧೀಶರಿಗೆ ಸಹಾಯ ಮಾಡಲು ಬಳಸಬೇಕೇ ಹೊರತು, ನ್ಯಾಯಾಧೀಶರನ್ನು ಬದಲಾಯಿಸಲು ಅಲ್ಲ
ಮೈಸೂರು:ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯೂ ಮಾನವ ತೀರ್ಪಿನ ಪರ್ಯಾಯವಾಗಬಾರದು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅಭಿಪ್ರಾಯಪಟ್ಟರು.
ಜಯಲಕ್ಷ್ಮೀಪುರಂನ ಎಸ್‌ಬಿಆರ್‌ಆರ್ ಮಹಾಜನ ಕಾನೂನು ಕಾಲೇಜಿನಿಂದ ಸುಬ್ಬಲಕ್ಷ್ಮೀ ಸಭಾಂಗಣದಲ್ಲಿ ಆಯೋಜಿಸಿದ್ದ ‘ತಂತ್ರಜ್ಞಾನದ ಯುಗದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಾನವ ಹಕ್ಕುಗಳ ಹೊಸ ಸವಾಲುಗಳು’ ವಿಷಯ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಧೀಶರ ಜ್ಞಾನ, ಬುದ್ಧಿವಂತಿಕೆ ಹಾಗೂ ವಿವೇಚನೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪರ್ಯಾಯವಲ್ಲ. ಹಾಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯೂ ಮಾನವ ತೀರ್ಪಿನ ಬದಲಿಯಾಗಿ ಕಾರ್ಯನಿರ್ವಹಿಸುವ ಬದಲು ಮೇಲ್ವಿಚಾರಣ ಸಹಾಯಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಎಐ ತಂತ್ರಜ್ಞಾನವನ್ನು ನ್ಯಾಯಾಧೀಶರಿಗೆ ಸಹಾಯ ಮಾಡಲು ಬಳಸಬೇಕೇ ಹೊರತು, ನ್ಯಾಯಾಧೀಶರನ್ನು ಬದಲಾಯಿಸಲು ಅಲ್ಲ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯ ವೇಗದ ಬೆಳವಣಿಗೆಯು ಮಾನವ ಹಕ್ಕುಗಳ ಸಂರಕ್ಷಣೆ, ಗೌಪ್ಯತೆ, ಮಾಹಿತಿಯ ಸುರಕ್ಷತೆ ಮತ್ತು ನೈತಿಕ ಮೌಲ್ಯಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತಿದ್ದು, ಈ ಕ್ಷೇತ್ರದಲ್ಲಿ ಕಾನೂನು ವಿದ್ಯಾರ್ಥಿಗಳು ಮತ್ತು ಕಾನೂನು ತಜ್ಞರು ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಸಿ.ಬಸವರಾಜು ಮಾತನಾಡಿ, ನಮ್ಮಲ್ಲಿ ಕಾನೂನು ಶ್ರೇಷ್ಠವಾಗಬೇಕೇ ಹೊರತು ಕೃತಕ ಬುದ್ಧಿಮತ್ತೆ ಆ ಜಾಗಕ್ಕೆ ಬರಬಾರದು. ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಎಐ ತಂತ್ರಜ್ಞಾನವು ತಂತ್ರಾಂಶಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ. ಇದು ಮಾನವನ ಅರ್ಥೈಸುವಿಕೆಯಲ್ಲಿ ತೀರ್ಪು ಹೊಂದಿಲ್ಲ ಅಥವಾ ನ್ಯಾಯಾಂಗ ನಿರ್ಧಾರ ತೆಗೆದುಕೊಳ್ಳುವಿಕೆಯ ಕೇಂದ್ರವಾಗಿರುವ ನೈತಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳೊಂದಿಗೆ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಮಹಾಜನ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್.ಕೆ.ಸಂಜಯ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಕಾಲೇಜು ಆಡಳಿತಾಧಿಕಾರಿ ಪ್ರೊ.ಪಿ.ಸರೋಜಮ್ಮ, ಪ್ರಾಂಶುಪಾಲೆ ಕೆ.ಸೌಮ್ಯಾ ಇದ್ದರು.
ತಾಂತ್ರಿಕ ಅಧಿವೇಶನದಲ್ಲಿ ಕೋಲ್ಕತಾದ ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾನಿಲಯ ಕಾನೂನು ಪ್ರಾಧ್ಯಾಪಕ ಪ್ರೊ.ಎನ್.ಎಸ್.ಶ್ರೀನಿವಾಸಲು ಅವರು ಕೃತಕ ಬುದ್ಧಿಮತ್ತೆ ಮತ್ತು ಮಾನವ ಹಕ್ಕುಗಳ ಕಾನೂನು ಸವಾಲುಗಳು ಕುರಿತು, ಬೆಂಗಳೂರು ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಡೀನ್ ಪ್ರೊ.ಎನ್.ಸತೀಶ್‌ಗೌಡ ಅವರು ಕೃತಕ ಬುದ್ಧಿಮತ್ತೆಯ ಸಾಮಾಜಿಕ ಮತ್ತು ಕಾನೂನು ಪರಿಣಾಮಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net