ಕಲೆ ಮನುಷ್ಯನಲ್ಲಿ ಜೀವಂತಿಕೆಯನ್ನು ಉಳಿಸಲಿದೆ: ಟಿ.ಎಸ್.ನಾಗಾಭರಣ ಅಭಿಮತ
ವಿಜಯನಗರದಲ್ಲಿರುವ ಜೆಸಿಎಸಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉತ್ತರಾಯಣ’ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಪ್ರೊ.ಎಂ.ಕೃಷ್ಣೇಗೌಡ, ಟಿ.ಎಸ್.ನಾಗಾಭರಣ, ಆರ್.ಕೆ.ಪದ್ಮನಾಭ, ಜಗನ್ನಾಥ ಶಣೈ, ಕುಸುಮಾ ಶೆಣೈ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಲಾ ಪೋಷಣೆ ಈಗಿನ ಕಾಲದಲ್ಲಿ ಬಹಳ ಪ್ರಮುಖವಾಗಿ ಗಮನ ಕೊಡಬೇಕಾದ ಅಂಶ
ಉತ್ತರಾಯಣ ಕಲಾ ಮತ್ತು ಸಾಂಸ್ಕೃತಿಕ ಹಬ್ಬ ಸಂಪೂರ್ಣವಾಗಿ ಯಶಸ್ವಿಯಾಗಿದೆ
ಮೈಸೂರು: ಕಲೆ ಎಂಬುದು ಮನುಷ್ಯನಲ್ಲಿ ಜೀವಂತಿಕೆಯನ್ನು ಉಳಿಸಿ, ಬೆಳೆಸುವ ಜತೆಗೆ ಜಾಗೃತವಾಗಿರುವಂತೆ ನೋಡಿಕೊಳ್ಳುತ್ತದೆ ಎಂದು ನಿರ್ದೇಶಕ, ರಂಗಕರ್ಮಿ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.
ವಿಜಯನಗರದಲ್ಲಿರುವ ಜೆಸಿಎಸಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉತ್ತರಾಯಣ’ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಭಾಷಣ ಮಾಡಿದರು.
ಕಲಾ ಪೋಷಣೆ ಈಗಿನ ಕಾಲದಲ್ಲಿ ಬಹಳ ಪ್ರಮುಖವಾಗಿ ಗಮನ ಕೊಡಬೇಕಾದ ಅಂಶ. ಈ ನಿಟ್ಟಿನಲ್ಲಿ ಐದು ದಿನಗಳವರೆಗೆ ನಡೆದ ಉತ್ತರಾಯಣ ಕಲಾ ಮತ್ತು ಸಾಂಸ್ಕೃತಿಕ ಹಬ್ಬ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಹೇಳಿದರು.
ನಾನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸಾಂಸ್ಕೃತಿಕ ಕೇಂದ್ರಗಳನ್ನು ನೋಡಿದ್ದೇನೆ. ಆದರೆ ಇಲ್ಲಿ ಮಾತ್ರ ಒಂದು ರೀತಿಯ ಅದ್ಭುತ ಜೀವಂತಿಕೆ ಇದೆ. ಇಂತಹ ಕೇಂದ್ರವನ್ನು ಮೈಸೂರಿಗೆ ಕೊಡುಗೆಯಾಗಿ ನೀಡಿರುವ ಜಗನ್ನಾಥ ಶೆಣೈ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಈ ಹಬ್ಬ ಏಷ್ಯಾದಲ್ಲೇ ಬೃಹತ್ ಹಬ್ಬ ಎನಿಸಿಕೊಳ್ಳಲಿ ಎಂದು ಆಶಿಸಿದರು.
ಗಾನ ಕಲಾಭೂಷಣ ಆರ್.ಕೆ.ಪದ್ಮನಾಭ ಮಾತನಾಡಿ, ನಾನು ನೂರಾರು ಜಾಗಗಳಲ್ಲಿ ಈವರೆಗೂ ಕಾರ್ಯಕ್ರಮ ನೀಡಿದ್ದೇನೆ. ಆದರೆ ಇಲ್ಲಿ ಕೀರ್ತನೆಗಳನ್ನು ಹಾಡುವಾಗ, ಕಾರ್ಯಕ್ರಮ ನೀಡುವಾಗ ಬಹಳ ಭಾವನಾತ್ಮಕವಾದ ಅನುಭವವಾಯಿತು. ಇಂತಹ ಕೇಂದ್ರ ಮೈಸೂರಿನಂತಹ ನಗರಕ್ಕೆ ಅತ್ಯಗತ್ಯ ಎಂದರು.
ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ನಮ್ಮಲ್ಲಿರುವ ಕ್ಷುದ್ರತೆಯನ್ನು ತೊಡೆದುಹಾಕುವ ಶಕ್ತಿ ಇರುವುದು ಕಲೆಗೆ ಮಾತ್ರ. ಇಂತಹ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಕೇಂದ್ರ ಆರಂಭವಾಗಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಇಲ್ಲಿ ನೂರಾರು ಕಾರ್ಯಕ್ರಮಗಳು ನಡೆಯಬೇಕು. ಈ ಜಾಗ ಅಸಂಖ್ಯಾತ ನೆನಪುಗಳ ಆಗರವಾಗಬೇಕು. ನಮ್ಮ ವಾಣಿಜ್ಯಮಯ ಜೀವನದಲ್ಲಿ ಕಲೆ ಹಾಸುಹೊಕ್ಕಾಗಬೇಕು. ಮೈಸೂರು ಈ ಕೇಂದ್ರದ ಮೂಲಕ ತನ್ನನ್ನು ತಾನು ಗುರುತಿಸಿಕೊಳ್ಳಬೇಕು ಎಂದರು.
ಜೆಸಿಎಸಿ ಅಧ್ಯಕ್ಷ ಜಗನ್ನಾಥ ಶಣೈ, ಆಯೋಜಕರಾದ ಕುಸುಮಾ ಶೆಣೈ, ರವಿಕುಮಾರ್, ಅಮೃತಾ, ಡಾ.ಕೃಪಾ ಫಡ್ಕೆ, ವಿ.ಮಾನಸ ನಯನಾ, ಸಾಯಿ ಶಿವ್, ಡಾ.ರಮಾ ವಿ.ಬೆಣ್ಣೂರ್ ಇತರರು ಇದ್ದರು.