ಮೈಸೂರಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ಯದುವೀರ್ ಮನವಿ
  • ಕೊಡಗು, ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಚರ್ಚೆ
ಮೈಸೂರು ಮತ್ತು ಕೊಡಗು ಜಿಲ್ಲೆ ಪರಂಪರೆಯ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಮೈಸೂರು ಪ್ರವಾಸ ಹಮ್ಮಿಕೊಂಡಿದ್ದ ಕೇಂದ್ರ ಸಚಿವ ಶೇಖಾವತ್ ಅವರನ್ನು ಭೇಟಿಯಾದ ಸಂಸದರು, ಮೈಸೂರು ಹಾಗೂ ಕೊಡಗಿನ ಪ್ರಮುಖ ಪ್ರವಾಸೋದ್ಯಮ ಮತ್ತು ಪರಂಪರೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರಲ್ಲದೇ ಎರಡು ಪ್ರಮುಖ ಮನವಿ ಸಲ್ಲಿಸಿದರು.
ಅರ್ಜುನ ವೃತ್ತ ಅಭಿವೃದ್ಧಿಗೆ ಮನವಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಕ್ಯಾಪ್ಟನ್ ಅರ್ಜುನನ ಸ್ಮರಣಾರ್ಥ ಭವ್ಯ ಸ್ಮಾರಕ ನಿರ್ಮಿಸುವ ಉದ್ದೇಶ ಹೊಂದಿದ್ದು, ಮೈಸೂರಿನ ಎಲ್‌ಐಸಿ ಜಂಕ್ಷನ್‌ನಲ್ಲಿ ಅರ್ಜುನ ವೃತ್ತ ಅಭಿವೃದ್ಧಿ ಯೋಜನೆಗೆ ತಾಂತ್ರಿಕ ಅನುಮೋದನೆಗೆ ಯೋಜನಾ ನಿರ್ವಹಣಾ ಸಲಹೆಗಾರರನ್ನು (ಒಅ) ನೇಮಕ ಮಾಡುವಂತೆ ಸಚಿವರನ್ನು ಕೋರಿದರು.
ಈ ಯೋಜನೆಗೆ ಈಗಾಗಲೇ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ 20 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಸಂಸದರು ವಿವರಿಸಿದರು.
2012ರಿಂದ 2019ರವರೆಗೆ ದಸರಾ ಜಂಬೂಸವಾರಿಯಲ್ಲಿ ಮುಂಚೂಣಿ ಆನೆಯಾಗಿ ಭಾಗವಹಿಸಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ, ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿತ್ತು. ಅರ್ಜುನನಿಗೆ ಸಮರ್ಪಿತವಾದ ಸ್ಮಾರಕ ನಿರ್ಮಾಣವು ಅತ್ಯಂತ ಸೂಕ್ತವಾಗಿದ್ದು, ಈ ವೃತ್ತವು ಮೈಸೂರಿನ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಒಂದಾಗಿರುವುದರ ಜತೆಗೆ ಐತಿಹಾಸಿಕ ದಸರಾ ಮೆರವಣಿಗೆಯ ಅಂತಿಮ ತಾಣವಾಗಿರುವುದರಿಂದ ವಿಶೇಷ ಮಹತ್ವ ಪಡೆದುಕೊಂಡಿದೆ ಎಂದು ಈ ಸಂದರ್ಭದಲ್ಲಿ ಸಚಿವರಲ್ಲಿ ಮನವಿ ಮಾಡಿದರು.

ಮಡಿಕೇರಿ ಕೋಟೆ ಅಭಿವೃದ್ಧಿಗೆ ಮನವಿ:

ಕೊಡಗಿನ ಐತಿಹಾಸಿಕ ಮಡಿಕೇರಿ ಕೋಟೆಯ ಸಮಗ್ರ ನವೀಕರಣ, ಸಂರಕ್ಷಣೆ ಹಾಗೂ ತಾಂತ್ರಿಕ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದ ನೆರವು ನೀಡಬೇಕೆಂದು ಸಂಸದರು ಕೋರಿದರು.
ಕೊಡಗಿನ ಇತಿಹಾಸ, ಸಂಸ್ಕೃತಿ ಹಾಗೂ ವಾಸ್ತು ಶಿಲ್ಪದ ವೈಭವದ ಪ್ರತೀಕವಾಗಿರುವ ಈ ಕೋಟೆ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣವಾಗಿದೆ. ಐತಿಹಾಸಿಕ ಕಟ್ಟಡಗಳ ವೈಜ್ಞಾನಿಕ ರಕ್ಷಣೆ ಮತ್ತು ಪುನಶ್ಚೇತನ ಮಾಡುವುದು, ಆಧುನಿಕ ಪರಂಪರೆ ವಸ್ತುಸಂಗ್ರಹಾಲಯದ ಸ್ಥಾಪನೆ ಮಾಡುವುದು, ಡಿಜಿಟಲ್ ಮಾಹಿತಿ ವ್ಯವಸ್ಥೆಗಳು ಮತ್ತು ಬಹುಭಾಷಾ ಆಡಿಯೋ ಮಾರ್ಗದರ್ಶಿಗಳ ಅಳವಡಿಕೆ. ಸೌಂಡ್ ಆ್ಯಂಡ್ ಲೈಟ್ ಶೋ ಆರಂಭ, ಪರಿಸರ ಸ್ನೇಹಿ ಪಾದಚಾರಿ ಮಾರ್ಗಗಳು ಮತ್ತು ಸುಂದರೀಕರಣ. ವಾಹನ ನಿಲುಗಡೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿ ಪಡಿಸುವ ಬಗ್ಗೆಯೂ ಸಚಿವರ ಗಮನ ಸೆಳೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net