ಜೀಬ್ರಾ ಕ್ರಾಸಿಂಗ್ ರಚಿಸಿದ ಆರ್ಕಿಟೆಕ್ಚರ್ ವಿದ್ಯಾರ್ಥಿಗಳು

ಆಯಿಷ್ ಮುಂದೆ ವಿಶೇಷ ಮಕ್ಕಳು ರಸ್ತೆ ದಾಟಲು ಜೀಬ್ರಾ ಕ್ರಾಸ್ ಬರೆಯುತ್ತಿರುವುದು.
ಆಯಿಷ್ ಮುಂದೆ ವಿಶೇಷ ಮಕ್ಕಳು ರಸ್ತೆ ದಾಟಲು ಜೀಬ್ರಾ ಕ್ರಾಸ್ ಬರೆಯುತ್ತಿರುವುದು.
Published on
ಮೈಸೂರು: ಗ್ರೀನ್ ಪೀಸ್ ಇಂಡಿಯಾ ಸ್ವಯಂ ಸೇವಕರು, ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಸ್ಥೆಗಳ ನೆರವಿನೊಂದಿಗೆ ಭಾನುವಾರ ನಗರದ ಆಯಿಷ್ ಮುಂಭಾಗದ ರಸ್ತೆಯಲ್ಲಿ ವ್ಹೀಲ್‌ಚೇರ್ ಸಂಚರಿಸುವ ಮಾರ್ಗಸೂಚಿ ಹಾಗೂ ಜೀಬ್ರಾ ಕ್ರಾಸಿಂಗ್ ರಚಿಸಿದರು.
ಆ ಮೂಲಕ ಆಯಿಷ್ ಸಂಸ್ಥೆಗೆ ಚಿಕಿತ್ಸೆಗೆ ಬರುವ ವಿಶೇಷ ಮಕ್ಕಳ ಸುಗಮ ಸಂಚಾರಕ್ಕೆ ನೆರವಾದರು.
ಚಿಕಿತ್ಸೆಗಾಗಿ ಆಯಿಷ್ ಸಂಸ್ಥೆಗೆ ಪ್ರತಿದಿನ 400ರಿಂದ 500 ವಿಶೇಷ ಮಕ್ಕಳು ಪಾಲಕರೊಂದಿಗೆ ಆಗಮಿಸಲಿದ್ದಾರೆ. ಈ ಸಂಬಂಧ ಅವರ ಸುಗಮ ಸಂಚಾರ ಸಂಬಂಧ ಇತ್ತೀಚೆಗೆ ‘ಮೈಸೂರು ರೈಸಿಂಗ್ ಅಭಿಯಾನದ ಮೂಲಕ ಆಯಿಷ್ ಮುಂದೆ ಸರ್ವೇ ನಡೆಸಿ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಬಳಿಕ ಪೊಲೀಸ್, ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆಯಿಷ್ ಬಳಿ ವಿಶೇಷ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿತ್ತು. ಭಾನುವಾರ 50ಕ್ಕೂ ಹೆಚ್ಚು ಮಂದಿ ಸ್ವಯಂ ಸೇವಕರು ಮತ್ತು ವಿದ್ಯಾರ್ಥಿಗಳು ಆಯಿಷ್ ಮುಂಭಾಗ ಆಕರ್ಷಕ ವಿನ್ಯಾಸದಲ್ಲಿ ಜೀಬ್ರಾ ಕ್ರಾಸಿಂಗ್ ಬರೆದು, ಪಾದಚಾರಿ ಮತ್ತು ವ್ಹೀಲ್ ಚೇರ್ ಸಂಚರಿಸುವವರಿಗಾಗಿ ಪ್ರತ್ಯೇಕವಾಗಿ ಪಥ ಗುರುತಿಸಲು ಬಣ್ಣ ಬಳಿಯುವ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದರು.
ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ಡೀನ್ ಮತ್ತು ಡೈರೆಕ್ಟರ್ ಡಾ.ಎಚ್.ಎಸ್.ಚಂಪಾ ಮಾತನಾಡಿ, ಇಂದು ಆಯಿಷ್ ಗೇಟ್ ಬಳಿ ಎರಡೂ ಬದಿಯಲ್ಲೂ ವ್ಹೀಲ್ ಚೇರ್ ಚಿಹ್ನೆ, ಮಕ್ಕಳ ಚಿಹ್ನೆ ಇರುವ ಜೀಬ್ರಾ ಕ್ರಾಸ್ ಚಿತ್ರಿಸಲಾಗಿದೆ. ಅಲ್ಲದೇ ವ್ಹೀಲ್ ಚೇರ್‌ನಲ್ಲಿ ಬರುವ ಮಕ್ಕಳು ಆಯಿಷ್‌ನಿಂದ ಬೋಗಾದಿ ರಸ್ತೆ ದಾಟಲು ರಸ್ತೆ ಬದಿ ಪಿಂಕ್ ಬಣ್ಣದಲ್ಲಿ ಪಥ ಗುರುತಿಸಲಾಗಿದೆ. ಅಲ್ಲದೇ ಆಯಿಷ್ ಮುಂಭಾಗದ ಪಥದಲ್ಲಿ ಫಾಸ್ಟ್‌ಫುಡ್ ಮತ್ತು ಪೆಟ್ಟಿಗೆ ಅಂಗಡಿಗಳ ಮಾಲೀಕರು ಪೂರ್ಣ ಪ್ರಮಾಣದಲ್ಲಿ ಫುಟ್‌ಪಾತ್ ಅತಿಕ್ರಮಣ ತಡೆಗಟ್ಟಲು ಪಾದಚಾರಿಗಳು ಸಂಚರಿಸಲು ಆಕಾಶ ತಿಳಿನೀಲಿ ಬಣ್ಣ ಬಳಿಯಲಾಗಿದೆ. ಅಲ್ಲದೇ ಜೀಬ್ರಾ ಕ್ರಾಸ್‌ಗೂ ಮುನ್ನ ತುಸು ದೂರದಲ್ಲಿ ವೇಗವಾಗಿ ಬರುವ ವಾಹನಗಳ ಸವಾರರು ವೇಗ ತಗ್ಗಿಸಲು ಬಣ್ಣ ಬಳಿಯಲಾಗಿದೆ ಎಂದು ತಿಳಿಸಿದರು.
ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಯ ದೀಪಕ್ ಶ್ರೀನಿವಾಸನ್ ಮಾತನಾಡಿ, ಆಯಿಷ್ ಬಳಿ ವಿಶೇಷ ಮಕ್ಕಳು ರಸ್ತೆ ದಾಟಲು ಇದುವರೆಗೂ ಜೀಬ್ರಾ ಕ್ರಾಸ್ ಇರಲಿಲ್ಲ. ಗ್ರೀನ್ ಪೀಸ್ ಇಂಡಿಯಾ ಸಂಸ್ಥೆ ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ಹಾಗೂ ಇನ್ನಿತರ ಸಂಸ್ಥೆಗಳ ಸಹಕಾರದೊಂದಿಗೆ ಸ್ಟ್ರೀಟ್ ಆಡಿಟ್ ನಡೆಸಿ ಮೈಸೂರಿನ ಅಭಿವೃದ್ಧಿ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ವೇಳೆ ಬಹುತೇಕರು ಅಭಿವೃದ್ಧಿಗಿಂತ ಮೊದಲು ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅಲ್ಲದೇ ಆಯಿಷ್ ಬಳಿ ವಿಶೇಷ ಮಕ್ಕಳ ಸುಗಮ ಸಂಚಾರಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದರು.
ವಿಶೇಷ ಮಗುವಿನ ತಾಯಿ ರತ್ನಾ ಮಾತನಾಡಿ, ನನ್ನ ಮಗಳಿಗೆ ಆಯಿಷ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಯಿಷ್ ಸಿಗ್ನಲ್ ಬಳಿ ರಸ್ತೆ ದಾಟಲು ಜೀಬ್ರಾ ಕ್ರಾಸ್ ಇಲ್ಲ. ವಾಹನಗಳ ನಡುವೆ ವಿಶೇಷ ಮಕ್ಕಳನ್ನು ರಸ್ತೆ ದಾಟಿಸುವುದು ದುಸ್ಸಾಹಸವಾಗಿದೆ. ಈ ಹಿನ್ನೆಲೆಯಲ್ಲಿ ಆ ಸಿಗ್ನಲ್‌ನಲ್ಲಿ ಪೊಲೀಸರನ್ನು ನಿಯೋಜಿಸಬೇಕು. ವಿಶೇಷ ಮಕ್ಕಳನ್ನು ಕರೆತರುವ ಪಾಲಕರಿಗೆ ಸಾರಿಗೆ ಬಸ್‌ಗಳಲ್ಲಿ ಹತ್ತಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು. ಇಂದು ಆಯಿಷ್ ಬಳಿ ಜೀಬ್ರಾ ಕ್ರಾಸ್ ಹಾಗೂ ನಡೆದಾಡಲು ಪಾಥ್ ಗುರುತಿಸುವುದು ಸಂತೋಷ ತಂದಿದೆ ಎಂದರು.
ಎಂಜಿಪಿ ಅಧ್ಯಕ್ಷ ರಾಯ್ ಜೋಸೆಫ್ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net