ನಗರದ ಹೆರಿಟೇಜ್ ಹೌಸ್‌ನಲ್ಲಿ ಚಿತ್ರಕಲೆಗಳ ಅನುಸಂಧಾನ

ಹೆರಿಟೇಜ್ ಹೌಸ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ್ದ ಚಿತ್ರಕಲೆಯನ್ನು ಗಣ್ಯರು ವೀಕ್ಷಿಸಿದರು. ಭಾಗ್ಯಾಅಜಯ್ ಕುಮಾರ್, ರಾಘವೇಂದ್ರ, ಗುರುರಾಜ್ ನಾಯಕ್, ಕೆ.ರಾಘವೇಂದ್ರ, ಯೋಗಾನಂದ ಇತರರಿದ್ದರು.
ಹೆರಿಟೇಜ್ ಹೌಸ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ್ದ ಚಿತ್ರಕಲೆಯನ್ನು ಗಣ್ಯರು ವೀಕ್ಷಿಸಿದರು. ಭಾಗ್ಯಾಅಜಯ್ ಕುಮಾರ್, ರಾಘವೇಂದ್ರ, ಗುರುರಾಜ್ ನಾಯಕ್, ಕೆ.ರಾಘವೇಂದ್ರ, ಯೋಗಾನಂದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 27 ಚಿತ್ರಕಲಾವಿದರಿಂದ ಚಿತ್ರಕಲೆ ಪ್ರದರ್ಶನ
  • ವೀಕ್ಷಕರನ್ನು ಮೋಡಿ ಮಾಡಿದ ಪ್ರದರ್ಶನ
ಮೈಸೂರು: ನಗರದ ಕುಕ್ಕರಹಳ್ಳಿ ಕೆರೆ ಬಳಿ ಇರುವ ಹೆರಿಟೇಜ್ ಹೌಸ್‌ನಲ್ಲಿ ಭಾನುವಾರ ವೈವಿಧ್ಯಮ ಚಿತ್ರಕಲೆಗಳ ಅನುಸಂಧಾನ ಕಣ್ಮನ ಸೆಳೆಯಿತು. ಜತೆಗೆ, ಚಿತ್ರಕಲಾವಿದರೊಂದಿಗೆ ಚಿತ್ರರಸಿಕರ ಸಮಾಗಮಕ್ಕೂ ಕಾರಣವಾಯಿತು.
ಬೆಂಗಳೂರಿನ ದಿ ಆರ್ಟ್ ಪಾರ್ಕ್ ಸಂಸ್ಥೆಯು ಭಾರತದ ಕ್ಯಾನ್ಸರ್ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ ಸಹಯೋಗದಲ್ಲಿ ನಗರದಲ್ಲಿ ಪ್ರಥಮ ಬಾರಿಗೆ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿ ಚಿತ್ರಕಲೆಯ ಸಾಂಸ್ಕೃತಿಕ ಅನುಭವ ಉಣಬಡಿಸಿತು.
ಅಂದಾಜು 27 ಚಿತ್ರಕಲಾವಿದರು ತಮ್ಮ ಚಿತ್ರಕಲೆಯನ್ನು ಸ್ಥಳದಲ್ಲೇ ಬಿಡಿಸಿ ನೆರೆದವರಿಗೆ ಮೋಡಿ ಮಾಡಿದರು. ಇನ್ನೂ ಕೆಲ ಕಲಾವಿದರು ತಮ್ಮ ಅತ್ಯುತ್ತಮ ಕಲಾಕೃತಿಗಳನ್ನು ಪ್ರದರ್ಶಿಸಿ ನೋಡಗರನ್ನು ಬೆರುಗುಗೊಳಿಸಿದರು.
ಈ ಪ್ರಯತ್ನವು ಕಲಾ ಪ್ರತಿಭೆಯನ್ನು ಸಡಗರಿಸುವುದರೊಂದಿಗೆ ಸಮಕಾಲೀನ ಕಲೆಯ ಪ್ರದರ್ಶನಕ್ಕೂ ವೇದಿಕೆಯಾಯಿತು. ಇರಾನ್ ಮೇಲೆ ಅಮೆರಿಕ, ಇಸ್ರೇಲ್ ಜಂಟಿಯಾಗಿ ಸಾರಿರುವ ಯುದ್ಧದ ಹಿಂದಿನ ಕಾರಣವಾಗಿರುವ ತೈಲದ ಮೇಲಿನ ಹಿಡಿತ ಸಾಧಿಸುವ ಕುತಂತ್ರವನ್ನು ಕಲಾವಿದರೊಬ್ಬರು ಚಿತ್ರಕಲೆಯ ಮೂಲಕ ತೆರೆದಿಟ್ಟಿದ್ದು ಗಮನ ಸೆಳೆಯಿತು. 
ತೈಲ ಟ್ಯಾಂಕ್ ಮೇಲೆ ಕುಳಿತ ಮಂಗವೊಂದು ಬಲಾಢ್ಯರ ಸಂಚಿನ ಭಾಗವನ್ನು ಸಾಂಕೇತಿಸಿತು. ಹೀಗೆ ರಾಘವೇಂದ್ರ, ಗುರುರಾಜ್ ನಾಯಕ್, ಕೆ.ರಾಘವೇಂದ್ರ, ಯೋಗಾನಂದ್, ವಿಜಯಾರಾವ್, ವಿಚಾರಣ್, ಮಂಜುನಾಥ್, ಸೂರ್ಯ, ಎಸ್.ಎನ್.ಸಿದ್ದರಾಮ್ ಮತ್ತು ವೇಣುಗೋಪಾಲ್ ಸೇರಿದಂತೆ ವಿವಿಧ ಕಲಾವಿದರು ತಮ್ಮ ಕುಂಚದ ಅರಳಿದ ಕಲೆಯನ್ನು ಪ್ರದರ್ಶಿಸಿ ನೆರೆದವರ ಮನಸೊರೆಗೊಳಿಸಿದರು.
2014ರಲ್ಲಿ ಖ್ಯಾತ ಕಲಾವಿದ ಎಸ್.ಜಿ.ವಾಸುದೇವ್ ಅವರ ಪ್ರೇರಣೆಯಿಂದ ಬೆಂಗಳೂರಿನಲ್ಲಿ ಆರಂಭವಾದ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮವು ಕಲೆಯು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಿತು. ಕಲಾವಿದರು ಮತ್ತು ಪ್ರೇಕ್ಷಕರ ನಡುವಿನ ಅಂತರವನ್ನೂ ಕಡಿಮೆ ಮಾಡಿತು.
ಕಲಾವಿದರು ತಮ್ಮದೇ ಚಿತ್ರಕಲೆಗಳನ್ನು ಪ್ರದರ್ಶಿಸಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿ ತಮ್ಮ ಸೃಜನಶೀಲ ಪ್ರಕ್ರಿಯೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಕಲಾ ಪ್ರೇಮಿಗಳಿಗೆ ನೇರವಾಗಿ ಕಲಾವಿದರ ವೈಯಕ್ತಿಕ ಶೈಲಿ ಮತ್ತು ಸೃಜನಶೀಲತೆ ಕಾಣುವ ಅವಕಾಶವೂ ದೊರೆಯಿತು.
ಪ್ರಶಸ್ತಿ ವಿಜೇತ ಖ್ಯಾತ ಕಲಾವಿದರು ಮತ್ತು ಉದಯೋನ್ಮುಖ ಕಲಾವಿದರನ್ನು ಒಂದೇ ವೇದಿಕೆಯ ಮೇಲೆ ಸೇರಿಸಿ, ಯುವ ಕಲಾವಿದರಿಗೆ ಹಿರಿಯ ಕಲಾವಿದರೊಂದಿಗೆ ಸಂವಹನ ನಡೆಸುವ ಅಮೂಲ್ಯ ಅವಕಾಶ ಕಲ್ಪಿಸಿಕೊಡಲಾಯಿತು. ಪ್ರತಿಯೊಬ್ಬ ಕಲಾವಿದರೂ ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗದೆ ಸ್ವತಂತ್ರವಾಗಿ ನೇರ ಚಿತ್ರಕಲೆ ರಚಿಸಿದರು. ಇದು ವೈಯಕ್ತಿಕ ಶೈಲಿ ಮತ್ತು ಸೃಜನಶೀಲತೆಯ ಅಭಿವ್ಯಕ್ತಿಗೆ ದಾರಿ ಮಾಡಿಕೊಟ್ಟಿತು.
ಬೆಂಗಳೂರಿನ ಸ್ವಸ್ತಿ ಕಾಂಟೆಂಪರರಿ ಆರ್ಟ್ ಗ್ಯಾಲರಿ ಸಂಸ್ಥಾಪಕಿ ಮತ್ತು ದಿ ಆರ್ಟ್ ಪಾರ್ಕ್ ಅಧ್ಯಕ್ಷೆ ಭಾಗ್ಯ ಅಜಯ್ ಕುಮಾರ್ ಮಾತನಾಡಿ,  ಮೈಸೂರಿನಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ಆಯೋಜನೆಯೊಂದಿಗೆ ಸಾಂಸ್ಕೃತಿಕ ವಿನಿಮಯ ಮತ್ತು ಕಲಾತ್ಮಕ ಸಹಯೋಗಕ್ಕೆ ಹೊಸ ವೇದಿಕೆ ಕಲ್ಪಿಸಿದಂತಾಗಿದೆ ಎಂದರು.
ಎಚ್‌ಸಿಜಿ ಆಸ್ಪತ್ರೆ, ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ ಅಧ್ಯಕ್ಷ ಬಿ.ಎಸ್. ಅಜಯ್ ಕುಮಾರ್ ಮಾತನಾಡಿ, ಎಲ್ಲ ಕಲಾ ಪ್ರಕಾರಗಳಿಗೆ ಬೆಂಬಲ ಕೊಡಬೇಕಾಗಿದೆ. ಅದರಲ್ಲೂ  ಗ್ರಾಮೀಣ ಮತ್ತು ಯುವ ಕಲಾವಿದರಿಗೆ ವಿದ್ಯಾರ್ಥಿವೇತನ, ಮಾರ್ಗದರ್ಶನ ಮತ್ತು ಅವಕಾಶ ಒದಗಿಸುವ ಉತ್ತೇಜನಕಾರಿ ಕೆಲಸವೂ ಆಗಬೇಕಿದೆ. ಇದಕ್ಕೆ ಪೂರಕವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಮೈಸೂರಿನ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಉಪಕ್ರಮ ಇನ್ನಷ್ಟು ವಿಸ್ತರಿಸಲಾಗುವುದು. ಸ್ಥಳೀಯ ಸಾಂಸ್ಕೃತಿಕ ಪರಿಸರವನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು ಎಂದರು. ಸಿಎಫ್‌ಟಿಆರ್‌ಐ ಮಾಜಿ ನಿರ್ದೇಶಕ ಪ್ರಕಾಶ್ ಸೇರಿದಂತೆ ಇನ್ನಿತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net