ಬದ್ಧತೆ ಇದ್ದರೆ ಯಾವುದೇ ಕೆಲಸ ಅಚ್ಚುಕಟ್ಟು: ಹೇಮಾ ನಂದೀಶ್ ಅಭಿಮತ

ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್‌ನಿಂದ ನಿಧಿ ಸಂಗ್ರಹಕ್ಕಾಗಿ ಆಯೋಜಿಸಿದ್ದ ‘ಸ್ನೇಹ ಸಂತೆ’ ವಸ್ತು ಪ್ರದರ್ಶನ ಉದ್ಘಾಟನೆಯಲ್ಲಿ ಹೇಮಾ ನಂದೀಶ್, ಭಾಗ್ಯಾ ಮಾದೇಶ್, ಸವಿತಾ ರಂಗಾ, ಅನುಷ್ ಅಗರವಾಲ್, ಸ್ವಾತಿ ತಿಪ್ಪೇಸ್ವಾಮಿ ಇತರರು ಇದ್ದರು.
ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್‌ನಿಂದ ನಿಧಿ ಸಂಗ್ರಹಕ್ಕಾಗಿ ಆಯೋಜಿಸಿದ್ದ ‘ಸ್ನೇಹ ಸಂತೆ’ ವಸ್ತು ಪ್ರದರ್ಶನ ಉದ್ಘಾಟನೆಯಲ್ಲಿ ಹೇಮಾ ನಂದೀಶ್, ಭಾಗ್ಯಾ ಮಾದೇಶ್, ಸವಿತಾ ರಂಗಾ, ಅನುಷ್ ಅಗರವಾಲ್, ಸ್ವಾತಿ ತಿಪ್ಪೇಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಕುಟುಂಬಗಳು ವಿಘಟನೆಗೊಳ್ಳುತ್ತಿದ್ದು, ಒಬ್ಬರ ದುಡಿಮೆಯಿಂದ ಎಲ್ಲವನ್ನೂ ನಿಭಾಯಿಸುವ ಪರಿಸ್ಥಿತಿ ಉಂಟಾಗಿದೆ
  • ಕುಟುಂಬ ನಿರ್ವಹಣೆ ಜತೆಗೆ ಸಂಘಟನೆಗಳ ನೆರವು ಪಡೆದು ಆರ್ಥಿಕ ಬಲ ತುಂಬುವ ಕೆಲಸಗಳನ್ನು ಮಾಡಬೇಕು
ಮೈಸೂರು:ಮಹಿಳೆಯರು ಸಂಘಟಿತರಾಗಿ ಆರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳುವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಬಿಜೆಪಿ ನಗರ ಉಪಾಧ್ಯಕ್ಷೆ ಹೇಮಾ ನಂದೀಶ್ ಹೇಳಿದರು.
ನಗರದ ಮೂಕನಾಡು ಕಲ್ಯಾಣಮಂಟಪದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಗೋಲ್ಡ್‌ನಿಂದ ಅಸಹಾಯಕರಿಗೆ ನೆರವು ಕಲ್ಪಿಸಲು ಆಯೋಜಿಸಿದ್ದ ‘ಸ್ನೇಹ ಸಂತೆ’ ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕುಟುಂಬಗಳು ವಿಘಟನೆಗೊಳ್ಳುತ್ತಿದ್ದು, ಒಬ್ಬರ ದುಡಿಮೆಯಿಂದ ಎಲ್ಲವನ್ನೂ ನಿಭಾಯಿಸುವ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಕುಟುಂಬ ನಿರ್ವಹಣೆ ಜತೆಗೆ ಸಂಘಟನೆಗಳ ನೆರವು ಪಡೆದು ಆರ್ಥಿಕ ಬಲ ತುಂಬುವ ಕೆಲಸಗಳನ್ನು ಮಾಡಬೇಕು. ಇದರಿಂದ ಕುಟುಂಬಕ್ಕೆ ಶಕ್ತಿ ತುಂಬುವ ಜತೆಗೆ ತಮ್ಮ ಕೈಲಾದಷ್ಟು ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳಬಹುದು ಎಂದರು.
ಯಾವುದೇ ಕಾರ್ಯಗಳನ್ನು ಮಾಡಬೇಕಾದರೆ ಬದ್ಧತೆ ಇರಬೇಕು. ಬದ್ಧತೆ ಇದ್ದಾಗ ಯಾವುದೇ ಕೆಲಸಗಳು ಅಚ್ಚುಕಟ್ಟಾಗಿ ನಡೆಯುತ್ತವೆ. ಇನ್ನರ್ ವೀಲ್ ಸೇರಿದಂತೆ ಹಲವು ಸಂಘಟನೆಗಳು ನಿರಂತರವಾಗಿ ನಡೆದುಕೊಂಡು ಬರುತ್ತಿರುವುದಕ್ಕೆ ಅವುಗಳ ಬದ್ಧತೆ, ಸಾಮಾಜಿಕ ಕಾಳಜಿ ಕಾರಣ ಎಂದು ಹೇಳಿದರು.
ನಗರಪಾಲಿಕೆ ಮಾಜಿ ಸದಸ್ಯ ಭಾಗ್ಯಮಾದೇಶ್ ಮಾತನಾಡಿ, ಸಾಮಾಜಿಕ ಕಾಳಜಿ ಇಟ್ಟುಕೊಂಡು ನೊಂದವರ ನೆರವಿಗಾಗಿ ಈ ತರಹದ ಕಾರ್ಯಕ್ರಮ ಮೆಚ್ಚುವಂತಹ ಕೆಲಸ. ಇಂತಹ ಸಾಮಾಜಿಕ ಕಾರ್ಯಗಳಿಗೆ ನಮ್ಮಿಂದಲೂ ನೆರವು ನೀಡಲಾಗುವುದು ಎಂದು ತಿಳಿಸಿದರು.
ಉದ್ಯಮಿ ಸವಿತಾ ರಂಗಾ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿಯೂ ಮುಂದೆ ಬರುತ್ತಿದ್ದಾರೆ. ಅವರೂ ಕೂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಸಹಾಯಕರಿಗೆ ನೆರವಾಗಿ ನಿಲ್ಲುತ್ತಿದ್ದಾರೆ. ಇಂತಹ ಕಾರ್ಯಗಳು ಹೆಚ್ಚು ನಡೆಯಬೇಕು ಎಂದರು.
ಉದ್ಯಮಿ ಅಂಜಲಿ ಗುಪ್ತಾ ಮಾತನಾಡಿ, ಮಹಿಳೆಯರು ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತ, ಅವರಿಂದ ಸಾಮಾಜಿಕ ಕಾರ್ಯಗಳು ಅಗುವುದಿಲ್ಲ ಎನ್ನುವುದನ್ನು ಇನ್ನರ್ ವೀಲ್ ಸೇರಿದಂತೆ ಹಲವು ಮಹಿಳಾ ಸಂಘಟನೆಗಳು ಸುಳ್ಳು ಮಾಡಿ, ಸಾಮಾಜಿಕ ಸೇವಾ ಕಾರ್ಯ ನಡೆಸಿಕೊಂಡು ಬರುತ್ತಿವೆ ಎಂದು ಶ್ಲಾಘಿಸಿದರು.
ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಅನುಷ್ ಅಗರವಾಲ್ ಮಾತನಾಡಿ, ನೊಂದವರಿಗೆ ನೆರವಿನ ಉದ್ದೇಶದಿಂದ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ‘ಸ್ನೇಹಸಂತೆ’ ಯೋಜನೆ ಎಲ್ಲರ ಸಹಕಾರದಿಂದ ನಡೆದುಕೊಂಡು ಬರುತ್ತಿದೆ. ಮುಂದೆ ಇನ್ನಷ್ಟು ವಿಸ್ತಾರಗೊಂಡು ಹೆಚ್ಚು ಜನರಿಗೆ ಆರ್ಥಿಕ ನೆರವು ನೀಡುವಂತಾಗಬೇಕು ಎಂದರು. ದಿಶಾ ಸಮಿತಿ ಮಾಜಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ, ಸಂಸ್ಥೆಯ ರಶ್ಮಿ ಬಸವರಾಜು, ಶಾಲಿನಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net