ಇಂದಿನಿಂದ ಆಂಜನೇಯ ಮಹಾಭಿಷೇಕ, ಗಂಧೋತ್ಸವ

 ಹುಣಸೂರು ತಾಲೂಕು ರತ್ನಪುರಿ ಜಾತ್ರಾ ಪೋಸ್ಟರ್ ಬಿಡುಗಡೆ ಮಾಡಿದ ಜಾತ್ರಾ ಸಮಿತಿ ಅಧ್ಯಕ್ಷ ಪ್ರಭು ಹಾಗೂ ಪದಾಧಿಕಾರಿಗಳು.
ಹುಣಸೂರು ತಾಲೂಕು ರತ್ನಪುರಿ ಜಾತ್ರಾ ಪೋಸ್ಟರ್ ಬಿಡುಗಡೆ ಮಾಡಿದ ಜಾತ್ರಾ ಸಮಿತಿ ಅಧ್ಯಕ್ಷ ಪ್ರಭು ಹಾಗೂ ಪದಾಧಿಕಾರಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಜಾತ್ರಾ ಸಮಿತಿ ಅಧ್ಯಕ್ಷ ಪ್ರಭು ಮಾಹಿತಿ
ಹುಣಸೂರು : ಹಿಂದೂ-ಮುಸ್ಲಿಮರ ಬಾವೈಕ್ಯತೆಯನ್ನು ಸಾರುವ ತಾಲೂಕಿನ  ರತ್ನಪುರಿ(ದರ್ಗ)ಯ ಶ್ರೀ ಆಂಜನೇಯಸ್ವಾಮಿಯ ಮಹಾಭಿಷೇಕ, ಪಲ್ಲಕಿಉತ್ಸವ ಹಾಗೂ ಜಮಾಲ್ ಬೀಬೀಮಾ ಸಾಹೇಬರ ಗಂಧೋತ್ಸವ(ಉರುಸ್)  ಫೆ.6 ರಿಂದ 8ರವರೆಗೆ ಜರುಗಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಪ್ರಭು ತಿಳಿಸಿದರು.
ರಾಜ್ಯದ ವಿವಿಧೆಡೆಯಿಂದ ಭಕ್ತರು ಭಾಗವಹಿಸಲಿರುವ ರಾಜ್ಯದ ಪ್ರಮುಖ ಜಾತ್ರೆಗಳಲ್ಲೊಂದು. ಆಂಜನೇಯಸ್ವಾಮಿ ದೇವಾಲಯ ಹಾಗೂ ಜಮಾಲ್ ಬೀಬಿಮಾ ಸಾಹೇಬರ ದರ್ಗಾವು ಜಾತ್ರೆಮಾಳದಲ್ಲಿರುವುದು ಭಾವೈಕ್ಯತೆಯ ಪ್ರತೀಕವೆಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆಂಜನೇಯ ಮಹಾಭಿಷೇಕ: ಶ್ರೀ ಆಂಜನೇಯಸ್ವಾಮಿ ದೇಗುಲ ಸಮಿತಿಯು ಮಹಾಭಿಷೇಕ, ಪಲ್ಲಕ್ಕಿ ಉತ್ಸವ ಹಾಗೂ ಕೊಂಡೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಲವಾರು ವರ್ಷಗಳಿಂದ ಉತ್ಸವದಂದು ಅನ್ನದಾನ ನಡೆಸಿಕೊಂಡು ಬರಲಾಗುತ್ತಿದೆ. ಜಾತ್ರೆಮಾಳ ಪಕ್ಕದಲ್ಲೇ ಇರುವ ಸಂತೆಕೆರೆಯ ದೊಡ್ಡಕೆರೆಯಲ್ಲಿ ಸ್ನಾನ ಮಾಡಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಸಾಂಸ್ಕೃತಿಕ ಕಲಾತಂಡಗಳ ವೈಭವ ಇಡೀ ಜಾತ್ರೆಗೆ ಕಳೆಕಟ್ಟಲಿದೆ ಎಂದರು. 
ಭಾನುವಾರ ಗಂಧೋತ್ಸವ: ಸಮಿತಿಯ ಅಜ್ಗರ್‌ಪಾಷ ಮಾತನಾಡಿ   ಜಮಾಲ್ ಬೀಬೀಮಾ ಸಾಹೇಬರ ದರ್ಗಾಕ್ಕೆ ಮುಸ್ಲಿಮರು ಹುಣಸೂರು, ಮುದ್ದನಹಳ್ಳಿಯಿಂದ ಗಂಧವನ್ನು ಮೆರವಣಿಗೆಯಲ್ಲಿ ತಂದು ಗೋರಿಗೆ ಪೂಜೆಸಲ್ಲಿಸಿ ಗಂಧೋತ್ಸವ ನೆರವೇರಿಸುವರು. ಮುಸ್ಲಿಂ-ಹಿಂದೂ ಎನ್ನದೆ ಗೋರಿ ಬಳಿ ದೂಪ ಹಾಕಿ, ದೀಪ ಹಚ್ಚಿ ಹರಕೆ ತೀರಿಸುವುದು ಇಲ್ಲಿನ ವಾಡಿಕೆ. ಇದೇ ವೇಳೆ ಜರಬ್ ಸಾಹಸ ಪ್ರದರ್ಶನವಿರಲಿದೆ ಎಂದರು. 
ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ: ಈ ಬಾರಿ ಫೆ.6 ಮತ್ತು 7ರಂದು ಪುರುಷರ ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಹಾಗೂ ಪುರುಷರ ಹಗ್ಗಜಗ್ಗಾಟ ಆಯೋಜಿಸಲಾಗಿದೆ. ಫೆ.7ರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸೂಪರ್ ಹಿಟ್ ಚಲನಚಿತ್ರ ತಂಡ ಭಾಗವಹಿಸಲಿದೆ. ಫೆ.9ರಂದು ಉತ್ತಮ ರಾಸುಗಳಿಗೆ ಎಪಿಎಂಸಿ ವತಿಯಿಂದ ಬಹುಮಾನ ವಿತರಣೆ ಹಾಗೂ ಗ್ರಾಮದ ಮಹಾಶೇಷ ಭಟ್ ಸಹೋದರರು 10 ಸಮಾಧಾನಕರ ಬಹುಮಾನ ನೀಡುವರು. 
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ನಗರ ಯೋಜನ ಪ್ರಾಧಿಕಾರದ  ಅಧ್ಯಕ್ಷ ಎಚ್.ಪಿ ಅಮರ್ ನಾಥ್ ಸೇರಿದಂತೆ ಅನೇಕ ಗಣ್ಯರು ಭಗವಹಿಸಲಿದ್ದಾರೆಂದು ಪ್ರಭು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಸುರೇಂದ್ರ, ಸಹ ಕಾರ್ಯದರ್ಶಿ ಸುದರ್ಶನ್‌ಸಿಂಗ್, ಖಜಾಂಚಿ ಸತೀಶ್ ಪಾಪಣ್ಣ,ಸದಸ್ಯ ರಾಜು ಇದ್ದರು.  
ಕಾರ್ಯಕ್ರಮ ವಿವರ: ಫೆ.6ರ ಮುಂಜಾನೆ 6ರಿಂದ ಆಂಜನೇಯಸ್ವಾಮಿ ದೇವಾಲಯದಲ್ಲಿ  ಹೋಮ, ಹವನ, ಮಹಾಭಿಷೇಕ, ಫೆ.7 ರಂದು ಬೆಳಗ್ಗೆ 7ಕ್ಕೆ ಧರ್ಮಾಪುರ ಗ್ರಾಮಸ್ಥರಿಂದ ಕೊಂಡೋತ್ಸವ, ಅಂಜನೇಯಸ್ವಾಮಿಗೆ ಮಹಾಮಂಗಳಾರತಿ, ಮದ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಮದ್ಯಾಹ್ನ 3ಕ್ಕೆ ಹೊನಲು ಬೆಳಕಿನ ಕಬ್ಬಡ್ಡಿ(ಮ್ಯಾಟ್) ಪಂದ್ಯಾವಳಿ, ಸಂಜೆ 6ಕ್ಕೆ ವಿವಿಧ ಕಲಾ ತಂಡದೊಂದಿಗೆ ಅಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವ, ಫೆ.8 ರಂದು ರಾತ್ರಿ7ಕ್ಕೆ ಜಮಾಲ್ ಬೀಬೀಮಾ ಸಾಹೇಬರ ಗಂಧೋತ್ಸವ ಹಾಗೂ ರಾತ್ರಿ 8ಕ್ಕೆ ಹಗ್ಗಜಗ್ಗಾಟದ ಸೆಮಿಫೈನಲ್ ಪಂದ್ಯಾಟ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net