ಮನೆಗೊಂದು ಉತ್ತಮ ಗ್ರಂಥಾಲಯಕ್ಕೆ ಪ್ರಶಸ್ತಿ: ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ಘೋಷಣೆ
ಚಿನ್ನಸ್ವಾಮಿ ವಡ್ಡಗೆರೆ ಅವರ ಮನೆಯಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಉದ್ಘಾಟನೆಯಲ್ಲಿ ಮಾನಸ, ಅಂಶಿ ಪ್ರಸನ್ನ ಕುಮಾರ್, ಚಿನ್ನ ಸ್ವಾಮಿ ವಡ್ಡಗೆರೆ, ಎಂ.ಚಂದ್ರಸೇಖರ್ ಸಾಲುಂಡಿ ದೊರೆಸ್ವಾಮಿ, ಸುಚಿತ್ರಾ ಹೆಗಡೆ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪುಸ್ತಕ ಓದುಗರ ಸಂಖ್ಯೆ ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ಪುಸ್ತಕ ಪ್ರಾಧಿಕಾರದ ಈ ಮಹತ್ವಾಕಾಂಕ್ಷ್ಷಿ ಯೋಜನೆ
ರಾಜ್ಯಾದ್ಯಂತ ಒಂದು ಲಕ್ಷ ರೂ. ಮನೆಗಳಲ್ಲಿ ಗ್ರಂಥಾಲಯ ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ
ಮೈಸೂರು:ಅತ್ಯುತ್ತಮ ಮನೆ ಗ್ರಂಥಾಲಯಕ್ಕೆ ಕಂದಾಯ ವಿಭಾಗಗಳಿಂದ ಒಂದರಂತೆ ನಾಲ್ಕು ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ತಿಳಿಸಿದರು.
ಆರ್.ಟಿ. ನಗರ ಪತ್ರಕರ್ತರ ಬಡಾವಣೆಯ ಪ್ರಗತಿಪರ ಕೃಷಿಕ ಚಿನ್ನಸ್ವಾಮಿ ವಡ್ಡಗೆರೆ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮನೆಗೊಂದು ಗ್ರಂಥಾಲಯ’ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರು.
ಪುಸ್ತಕ ಓದುಗರ ಸಂಖ್ಯೆ ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ಪುಸ್ತಕ ಪ್ರಾಧಿಕಾರದ ಈ ಮಹತ್ವಾಕಾಂಕ್ಷ್ಷಿ ಯೋಜನೆಯನ್ನು ಹಮ್ಮಿಕೊಂಡಿದ್ದು, ಯಾವುದೇ ಹಣಕಾಸು ನೆರವಿಲ್ಲದಂತೆ ರಾಜ್ಯಾದ್ಯಂತ ಒಂದು ಲಕ್ಷ ರೂ. ಮನೆಗಳಲ್ಲಿ ಗ್ರಂಥಾಲಯ ಆರಂಭಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ರಾಜ್ಯಾದ್ಯಂತ ದಿನಕ್ಕೆ 10ರಿಂದ 20ರ ಮನೆಗಳಲ್ಲಿ ಗ್ರಂಥಾಲಯ ಉದ್ಘಾಟನೆಗೊಳ್ಳುತ್ತಿವೆ. ಮುಂದೆ ಮನೆಗಳ ಉತ್ತಮ ಗ್ರಂಥಾಲಯವನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ತಲಾ 25 ಸಾವಿರ ರೂ. ನಗದು ಒಳಗೊಂಡ ನಾಲ್ಕು ಪ್ರಶಸ್ತಿ ಇರಲಿವೆ. ಮೈಸೂರು ವಿಭಾಗಕ್ಕೆ ನಂಜನಗೂಡು ತಿರುಮಲಾಂಬ, ಬೆಂಗಳೂರಿಗೆ ಹಾ.ಮಾ.ನಾಯಕ, ಕಲಬುರ್ಗಿಗೆ ಪಿ.ಆರ್.ತಿಪ್ಪೇಸ್ವಾಮಿ, ಬೆಳಗಾವಿಗೆ ಗಳಗನಾಥ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಹೇಳಿದರು.
ಈ ಯೋಜನೆಗಳಿಗಾಗಿ ಪ್ರಾಧಿಕಾರಯಿಂದ ಪ್ರತಿ ಜಿಲ್ಲೆಯಲ್ಲಿಯೂ ಓರ್ವ ಸಂಚಾಲಕ ಹಾಗೂ 9 ಸದಸ್ಯರಿರುವ ಜಾಗೃತ ಸಮಿತಿಗಳನ್ನು ರಚಿಸಲಾಗಿದೆ. ಕಳೆದ ನಾಲ್ಕು ದಶಕಗಳಿಂದಲೂ ಪುಸ್ತಕ ಪ್ರಕಾಶನ, ಸಾಹಿತ್ಯ- ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಏನಾದರೂ ಹೊಸತು ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾನಸ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವಂತೆ ಓದುವ ಅಭಿರುಚಿ ಬೆಳೆಸಿಕೊಂಡಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು. ಬಸವಣ್ಣನವರು ಕೂಡ ದೇವರನ್ನು ಕಾಣಲು ದೇವಾಲಯಗಳಿಗೆ ಹೋಗಬೇಕಿಲ್ಲ ಎಂಬ ಉದ್ದೇಶದಿಂದ ಲಿಂಗವನ್ನಿಟ್ಟು, ವಚನ ಸಂಹಿತೆಯನ್ನು ಕೆಗಿತ್ತರು. ಅದೇ ರೀತಿ ಪ್ರತಿಯೊಬ್ಬರ ಮನೆಯಲ್ಲಿಯೂ ಪಾಲಕರು ಓದುವ ಜತೆಗೆ ಮಕ್ಕಳಿಗೂ ಓದುವ ಅಭಿರುಚಿ ಬೆಳೆಸಬೇಕು ಎಂದು ಅವರು ಕರೆ ನೀಡಿದರು.
ಚಿನ್ನಸ್ವಾಮಿ ವಡ್ಡಗೆರೆ ಅವರು ಮಾತನಾಡಿ, ಪುಸ್ತಕ ಪ್ರೀತಿ ಬೆಳೆಸಬೇಕು ಎನ್ನುವ ಪ್ರಾಧಿಕಾರದ ಕಾರ್ಯ ಶ್ಲಾಘನೀಯ. ಒಂದೊಂದು ಪುಸ್ತಕಗಳು ಒಂದೊಂದು ರೀತಿಯಲ್ಲಿ ತಿಳಿಸುವ ಪ್ರಯತ್ನ ಮಾಡುವುದರಿಂದ ಜ್ಞಾನ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಯಾವ ಟಿವಿ ಧಾರವಾಹಿಗಳು, ಸಿನಿಮಾಗಳು ನೀಡದಂತಹ ಜ್ಞಾನವನ್ನು ಪುಸ್ತಕಗಳು ನೀಡುತ್ತದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಟಿವಿ, ಮೊಬೈಲ್ ಗೀಳಿನಿಂದ ಹೊರ ತರಲು ಪುಸ್ತಕ ಓದುವ ಮೂಲಕ ನಿಜವಾದ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದರು.
ಜಾಗೃತ ಸಮಿತಿ ಸಂಚಾಲಕ ಎಂ. ಚಂದ್ರಶೇಖರ್, ಉದ್ಯಮಿ ಜೀಮಾರಹಳ್ಳಿ ಜಯಶಂಕರ್, ಸಮಿತಿಯ ಸದಸ್ಯರಾದ ಸುಚಿತ್ರಾ ಹೆಗಡೆ, ಸದಸ್ಯ ಸಾಲುಂಡಿ ದೊರೆಸ್ವಾಮಿ, ಕೆ.ಎಸ್.ಗಿರಿಕನ್ಯೆ ಚಿನ್ನಸ್ವಾಮಿ, ಮಾನ್ಯಾ ಇತರರು ಇದ್ದರು.