ಅಂಬೇಡ್ಕರ್ ವಿಚಾರಗಳು ಅಕ್ಷರಕ್ಕೆ ಬಳಕೆಯಾಗಲಿ: ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿಕೆ

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಾ ಪುರಸ್ಕಾರ
ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡದ, ಅವರ ವಿಚಾರವನ್ನು ತಿಳಿದುಕೊಳ್ಳದ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಹೇಗೆ ಮುಂದೆ ಬರುತ್ತದೆ? ಎಂದು ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.
ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಕರ್ನಾಟಕದ ದಲಿತ ವೇದಿಕೆ ಹಾಗೂ ಬುದ್ಧ ಬಳಗದ ಸಹಯೋಗದಲ್ಲಿ ನಗರದ ಮಾನಸಗಂಗೋತ್ರಿಯ ರಾಣಿಬಹದ್ದೂರು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು
.
ಅಂಬೇಡ್ಕರ್ ಅವರನ್ನು ಅನ್ನಕ್ಕೋಸ್ಕರ ಬಳಸಿಕೊಳ್ಳುತ್ತಿರುವ ಸಮುದಾಯಗಳಾಗಿದ್ದೇವೆ. ಅಕ್ಷರಕ್ಕಾಗಿ ಅವರನ್ನು ಬಳಸಿಕೊಳ್ಳುತ್ತಿಲ್ಲ. ಕೇವಲ ಅನ್ನಕ್ಕಾಗಿ ಅವರನ್ನು ಬಳಸಿಕೊಳ್ಳುತ್ತಿದ್ದರೆ ಅದು ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ದ್ರೋಹ. ಅಕ್ಷರಕ್ಕಾಗಿ, ಜ್ಞಾನಕ್ಕಾಗಿ ಅವರನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಅವರು 18 ಗಂಟೆಗಳ ಕಾಲ ಓದುತ್ತಿದ್ದರು. ಅವರು ತಮ್ಮ ಜೀವನದಲ್ಲಿ 50 ಸಾವಿರ ಪುಸ್ತಕ ಓದಿದ್ದಾರೆ. ನಾವು ಅವರ ಋಣ ತೀರಿಸಲು ಹಾಗೂ ಅವರ ಕನಸನ್ನು ನನಸು ಮಾಡಲು ಕನಿಷ್ಠ 1 ಸಾವಿರ ಪುಸ್ತಕಗಳನ್ನಾದರೂ ನಾವು ಓದಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳ ಎತ್ತರಗಳು ಮಾತ್ರ ಹೆಚ್ಚಾಗುತ್ತಿವೆ. ಆದರೆ, ಅವರ ಕನಸುಗಳು, ತತ್ವಗಳು ಕುಸಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು
ಪ್ರತಿಮೆಗಳ ಕಡೆ ಮುಖ ಮಾಡುವುದರ ಜತೆಗೆ ಪ್ರತಿಭೆಗಳ ಕಡೆಯೂ ನೋಡಬೇಕು. ಪ್ರತಿಮೆಗಳು ಪ್ರತಿಭೆಗಳ ಕಾರಣದಿಂದ ಹುಟ್ಟಿಕೊಳ್ಳುತ್ತದೆ. ಪ್ರತಿಭೆ ಯಾರಲ್ಲಿ ಇರುತ್ತದೆಯೋ ಅವರು ಪ್ರತಿಮೆಗಳಾಗುತ್ತಾರೆ ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಶೋಷಿತರ, ಧಮನಿತರ ವರ್ಗಗಳಿಗೆ ಸಮಾನತೆ, ಸಾಮಾಜಿಕ ನ್ಯಾಯ ಸರ್ವರಿಗೂ ಸಿಗಬೇಕೆಂದು ಮತ್ತು ಸರ್ವರಿಗೂ ಸಮಪಾಲು ಸಿಗಬೇಕೆಂಬುದೇ ಸಂವಿಧಾನದ ಉದ್ದೇಶ. ಜೀವನದಲ್ಲಿ ಒಂದು ಗುರಿ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವ ಶಿಕ್ಷಣ ಬೇಕು. ವಿದ್ಯಾವಂತರಾದ ಮೇಲೆ ತಂದೆ-ತಾಯಿಗಳಿಗೆ ಬಾರವಾಗಬಾರದು. ಅಂಬೇಡ್ಕರ್ ಅವರು ಅನುಭವಿಸಿರುವ ಕಷ್ಟದ ಮುಂದೆ ನಮ್ಮ ಕಷ್ಟ ಏನು ಅಲ್ಲ. 
ಇಂದು ಇಡೀ ವಿಶ್ವವೇ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುತ್ತದೆ. ಸಾಮಾಜಿಕ ನ್ಯಾಯದ ತೇರನ್ನು ಮುಂದೆ ಸಾಗಿಸಬೇಕೇ ಹೊರುತು ಹಿಂದೆ ತಳ್ಳಬೇಡಿ ಎಂದು ಸ್ವತಃ ಅಂಬೇಡ್ಕರ್ ಅವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾವು ಹಿಂದೆ ತಳ್ಳುವವರ ಜತೆ ಸೇರಬಾರದು ಎಂದು ತಿಳಿಸಿದರು.
ಸಮಾಜ ಸೇವಕ ಅಹಿಂದ ಜವರಪ್ಪ ಮಾತನಾಡಿ, ಅಂಬೇಡ್ಕರ್ ಅವರ ಹೋರಾಟದ ಫಲವನ್ನು ಪಡೆಯುತ್ತಿರುವ ನಾವು ಇಂದು ಯಾವ ಸ್ಥಿತಿಯಲ್ಲಿ ಇದ್ದೇವೆ ಎಂಬುದರ ಬಗ್ಗೆ ಯೋಚಿಸಬೇಕಿದೆ. ನಾವು ಪ್ರಶ್ನೆ ಮಾಡುತ್ತಿಲ್ಲ. ಹೀಗಾಗಿ ನಮ್ಮ ಪರಿಸ್ಥಿತಿ ಹೀಗೆ ಇದೆ. ಶಿಕ್ಷಣ ಇಂದು ದುಬಾರಿಯಾಗಿದೆ. ಪರಿಶಿಷ್ಟ ಜಾತಿ, ವರ್ಗಗಳು ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಿಶ್ವಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣಸಿರಿ ಭಂತೇಜಿ, ಬಿಜೆಪಿ ಮುಖಂಡ ಕವೀಶ್ ಗೌಡ, ಮಾಜಿ ಮೇಯರ್ ಪುರುಷೋತ್ತಮ್, ಕರ್ನಾಟಕ ದಲಿತ ವೇದಿಕೆಯ ಅಧ್ಯಕ್ಷ ಎಂ.ರೇವಣ್ಣ, ಜಿಲ್ಲಾಧ್ಯಕ್ಷ ಮಾರಶೆಟ್ಟಳ್ಳಿ ರಂಗಪ್ಪ, ತಾಲೂಕಾಧ್ಯಕ್ಷ ಚಿಕ್ಕಕಾನ್ಯ ಮಹೇಶ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎನ್.ಭಾಸ್ಕರ್ ಸೇರಿದಂತೆ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net