ಸಾಮಾಜಿಕ ಸಮಾನತೆಗೆ ಅಂಬೇಡ್ಕರ್ ಕೊಡುಗೆ ಅಪಾರ: ಎ.ಆರ್.ಕೃಷ್ಣಮೂರ್ತಿ

ಸಾವಿತ್ರಿ ಬಾಯಿಫುಲೆ 195ನೇ ಜಯಂತಿ, ಕುವೆಂಪು 121ನೇ ಜಯಂತಿ ಕಾರ್ಯಕ್ರಮ
ಸಾವಿತ್ರಿ ಬಾಯಿಫುಲೆ 195ನೇ ಜಯಂತಿ, ಕುವೆಂಪು 121ನೇ ಜಯಂತಿ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಸಾವಿತ್ರಿ ಬಾಯಿಫುಲೆ 195ನೇ ಜಯಂತಿ, ಕುವೆಂಪು 121ನೇ ಜಯಂತಿ ಕಾರ್ಯಕ್ರಮ
  • ಅಂಬೇಡ್ಕರ್ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಲ್ಪಿಸಿಕೊಟ್ಟರು.
  • ಸಮರ್ಥ ಸಂವಿಧಾನ ಇದ್ದಾಗಿಯೂ ನ್ಯಾಯ ಸಿಗದ ಪರಿಸ್ಥಿತಿ ಈಗಲೂ ಇದೆ
ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆಯಿಂದ ಬಾಳುವ ಅವಕಾಶ ಮಾಡಿಕೊಟ್ಟವರು ಎಂದು  ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. 
ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ ಸಹಯೋಗದಲ್ಲಿ ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸಾವಿತ್ರಿ ಬಾಯಿಫುಲೆ 195ನೇ ಜಯಂತಿ, ಕುವೆಂಪು 121ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಅಂಬೇಡ್ಕರ್ ಅವರು ಸಂವಿಧಾನದ ಮುಖಾಂತರ ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಮಾತ್ರವಲ್ಲದೇ ಭಾರತದ ಪ್ರತಿಯೊಬ್ಬನಿಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸ್ವಾವಲಂಬಿ ಬದುಕು ಕಲ್ಪಿಸಿಕೊಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರ ನೆರಳು ಬಿದ್ದರೆ ಅಪಮಾನವಾಗುತ್ತದೆ ಎಂಬ ಸಮಾಜದಿಂದ ವಿಮೋಚನೆಗೊಳಿಸಲು ಶಿಕ್ಷಣದ ಮೂಲಕ ಜ್ಯೋತಿಭಾಫುಲೆ ಮತ್ತು ಸಾವಿತ್ರ ಬಾಯಿಫುಲೆ ಕಾರಣರಾದರು ಎಂದು ಸ್ಮರಿಸಿದರು
ಅಂಬೇಡ್ಕರ್ ಅವರು ಈ ಸಂವಿಧಾನವನ್ನು ಕೊಡದಿದ್ದ ಪಕ್ಷದಲ್ಲಿ ದಲಿತರ ಜೀವನ ಯಾವ ರೀತಿ ಇರುತ್ತಿತ್ತು ಎಂದು ಕಲ್ಪಿಸಿಕೊಳ್ಳಲು ಅಸಾಧ್ಯವಾಗಿದೆ. ಈಗಲೂ ಮನುಷ್ಯ ದ್ವೇಷ ಹೆಚ್ಚಾಗಿದೆ. ಅತ್ಯಾಚಾರ, ಅಸ್ಪಶ್ಯತೆ ಆಚರಣೆ ಅಮಾನವೀಯವಾಗಿದೆ. ಸಮರ್ಥ ಸಂವಿಧಾನ ಇದ್ದಾಗಿಯೂ ನ್ಯಾಯ ಸಿಗದ ಪರಿಸ್ಥಿತಿ ಈಗಲೂ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ದೇಶದಲ್ಲಿ ಏನೇ ಸಮಸ್ಯೆಗಳಿದ್ದರೂ ದಲಿತ ಸಮುದಾಯ ಯುವಕರು  ಪ್ರತಿಭಟಿಸುತ್ತಾರೆ. ಈ ಎಚ್ಚರಿಕೆ ಈ ಸಂವೇದನೆ ಎಲ್ಲ ಸಮುದಾಯಗಳಿಗೂ ಬರಬೇಕಾಗಿದೆ ಎಂದರು.
ಸಂಘ ಪರಿವಾರದ ವಿರುದ್ಧ ಹೋರಾಟ ನಡೆಯಬೇಕಿದೆ. ಇದು ಸೃಷ್ಟಿಸುತ್ತಿರುವ ಸುಳ್ಳುಗಳ ವಿರುದ್ಧ ವಿದ್ಯಾರ್ಥಿ ಸಂಘಗಳು ಸೆಟೆದುನಿಲ್ಲಬೇಕಿದೆ. ಮನುವಾದಿಗಳಿಗೆ ನಿಜವಾಗಿಯೂ ಪ್ರತಿರೋಧ ಒಡ್ಡುವಂತಹ ಶಕ್ತಿ ದಲಿತ ಸಮುದಾಯಕ್ಕೆ ಇದೆ. ಬೀದಿಗಿಳಿದು ಹೋರಾಡುವ ಸಮುದಾಯವೂ ಆಗಿದೆ ಎಂದರು.
ಚಿಂತಕ ಕೃಷ್ಣಮೂರ್ತಿ ಚಮರಂ ಮಾತನಾಡಿ, ಕುವೆಂಪು ದಾರ್ಶನಿಕತೆಯೇ ಅನನ್ಯವಾದದ್ದು. ನಾವು ಎಂಬ ಪ್ರಜ್ಞೆಯೇ ಕುವೆಂಪು ಅವರ ವೈಚಾರಿಕತೆಯೂ ಆಗಿದೆ. ನಾಡಗೀತೆಯಲ್ಲಿ ಮೂಲ ಪದ್ಯದಂತೆ ‘ಬೌದ್ದರುದ್ಯಾನ’ ಪದ ಮತ್ತೆ ಸೇರಿಸಿಬೇಕಿದೆ. ಕುವೆಂಪು, ಸ್ವಾಮಿ ವಿವೇಕಾನಂದರ ಅಶಯಗಳಲ್ಲಿ ಕೋಮುವಾದಕ್ಕೆ ಉತ್ತರವಿದೆ ಎಂದು ಹೇಳಿದರು.
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಆತ್ಮವಿಶ್ವಾಸ ಜ್ಞಾನ ಪ್ರತಿಬಿಂಬ. ಪ್ರಕೃತಿ ಹಿನ್ನೆಲೆ ಸಹಜವಾಗಿ ಮೂಡಿ ಬಂದಿದೆ. ಕಾನೂರು ಹೆಗ್ಗಡತಿಯಲ್ಲಿ ಹೂವಯ್ಯನ ಮೂಲಕ ಬುದ್ಧತ್ವವನ್ನು ಹೇಳುತ್ತಾರೆ ಎಂದರು.
ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರಾಧ್ಯಾಪಕಿ ಪ್ರೊ ವಿಜಯಲಕ್ಷ್ಮೀ ಮನಾಪುರ, ಸಂಶೋಧಕರ ಸಂಘದ ಪುಷ್ಪಾ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗಜೇಂದ್ರ ಶಿವಣ್ಣ, ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ಗೌರವಾಧ್ಯಕ್ಷ ಕಲ್ಲಹಳ್ಳಿ ಕುಮಾರ್, ನವೀನ್ ಬೂದಿತಿಟ್ಟು, ಕೆ.ಆರ್.ರಂಗಸ್ವಾಮಿ, ರವಿ ಲಮಾನಿ, ರಾಮರೆಡ್ಡಿ, ರತ್ನಮ್ಮ, ಮಾದೇಶ್, ಕೆ.ಎಂ.ಶೇಷಣ್ಣಸ್ವಾಮಿ, ಅಭಿಷೇಕ್ ಪಾಳ್ಯಾಗಾರ್, ಮಲ್ಲೇಶ್ ಬಾಚಹಳ್ಳಿ ಪಾಲ್ಗೊಂಡಿದ್ದರು.
=======
*26
ಮಾನಸಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿತ್ರಿ ಬಾಯಿಫುಲೆ, ಕುವೆಂಪು ಭಾವಚಿತ್ರಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪುಷ್ಪ ನಮನ ಸಲ್ಲಿಸಿದರು. ಕೃಷ್ಣಮೂರ್ತಿ ಚಮರಂ, ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರೊ. ವಿಜಯಲಕ್ಷ್ಮೀ ಮನಾಪುರ,  ಪುಷ್ಪಾ,  ಗಜೇಂದ್ರ ಶಿವಣ್ಣ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net