ಅಂಬೇಡ್ಕರ್ ನೀಡಿದ ಸಂವಿಧಾನ ನೂರಾರು ವರ್ಷಗಳಿಗೆ ದಾರಿದೀಪ :ಮಾನವ ಹಕ್ಕುಗಳ ಆಯೋಗದ ಡಿಐಜಿ ಹನುಮಂತರಾಯ
ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಹನುಮಂತರಾಯ, ಪ್ರೊ. ಶರಣಪ್ಪ ವಿ. ಹಲಸೆ, ರಾಮನಾಥ ನಾಯ್ಡು, ನಿರಂಜನ್ ರಾಜ್ ಅರಸ್, ಆನಂದ್, ಮೂಡ್ನಾಕೂಡು ಚಿನ್ನಸ್ವಾಮಿ ಇದ್ದರು.
Published on:
Copied
Follow Us
ಮೈಸೂರು: ನೂರಾರು ವರ್ಷಗಳಿಗೆ ದಾರಿ ದೀಪವಾಗುವ ರೀತಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಎಂದು ರಾಜ್ಯ ಮಾನವಹಕ್ಕುಗಳ ಆಯೋಗದ ಡಿಐಜಿ ಹನುಮಂತರಾಯ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ‘ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಮಕಾಲಿನ ಭಾರತ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಒಳಗೊಳ್ಳುವಿಕೆ ಅಭಿವೃದ್ಧಿ’ ವಿಷಯದ ಕುರಿತು ಆಯೋಜಿಸಿದ್ದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಎಲ್ಲ ದೇಶದ ಎಲ್ಲ ಅತ್ಯುತ್ತಮ ತತ್ವಗಳನ್ನು ಒಳಗೊಂಡ ಸಂವಿಧಾನವನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ನಮ್ಮದು ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ ಎಂದರು.
ಸಂವಿಧಾನದಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ, ಅದು ಪರಿಣಾಮಕಾರಿಯಾಗಿ ಜಾರಿಯಾಗುವ ಅವಶ್ಯಕತೆ ಇದೆ. ಅದೇ ರೀತಿ ದೇಶದಲ್ಲಿ ರೂಪಿಸುವ ಅಭಿವೃದ್ಧಿ ಯೋಜನೆಗಳು ಉತ್ತಮವಾಗಿರುತ್ತದೆ. ಆದರೆ, ಅದು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಎಲ್ಲರು ಬ್ಯಾಂಕ್‌ಗಳಲ್ಲಿ ಖಾತೆ ತೆರೆದ ಮಾತ್ರಕ್ಕೆ ಅಭಿವೃದ್ಧಿ ಹೊಂದುವುದಿಲ್ಲ. ಸರ್ಕಾರಗಳು ರೂಪಿಸುವ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿ ಎಲ್ಲರಿಗೂ ತಲುಪಿದರೆ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಶಿವಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ಸಂವಿಧಾನ ಜಾರಿಯಾಗಿ 76 ವರ್ಷಗಳು ಕಳೆದಿದೆ. ಈ ಅವಧಿಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಲವು ಬದಲಾವಣೆಗಳು ಆಗಿವೆ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಾಗೂ ಅವರು ಕಂಡ ಅಭಿವೃದ್ಧಿ ನಿಜವಾಗಿಯೂ ಆಗಿದೆಯೇ ಎಂದು ಅವಲೋಕನ ಮಾಡುವ ಅವಶ್ಯಕತೆ ಇದೆ ಎಂದರು.
ದೇಶದಲ್ಲಿ ರಾಜಕೀಯ ಸಮಾನತೆ ದೊರೆತ್ತಿದೆ. ಆದರೆ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ಇನ್ನೂ ಮುಂದುವರೆದಿದೆ. ಈ ಕುರಿತು ಗಂಭೀರ ಚಿಂತನೆಗಳು, ಚರ್ಚೆಗಳು ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಶೈಕ್ಷಣಿಕ ಡೀನ್ ರಾಮನಾಥ ನಾಯ್ಡು, ಹಣಕಾಸು ಅಧಿಕಾರಿ ನಿರಂಜನ್ ರಾಜ್ ಅರಸ್, ಪರೀಕ್ಷಾಂಗ ಕುಲಸಚಿವ ಆನಂದ್, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಇದ್ದರು.