ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ

ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು. ಜೆ.ಮಂಜುನಾಥ್, ಎಂ.ಮಾನಸಾ, ಯತೀಶ್, ಎಸ್.ಪಿ.ಮಹದೇವ್, ಕೆ.ಹೊಂಗಯ್ಯ ಇದ್ದರು.
ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು. ಜೆ.ಮಂಜುನಾಥ್, ಎಂ.ಮಾನಸಾ, ಯತೀಶ್, ಎಸ್.ಪಿ.ಮಹದೇವ್, ಕೆ.ಹೊಂಗಯ್ಯ ಇದ್ದರು.
Published on
ಹುಣಸೂರು: ತಾಲೂಕಿನಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡರ ಅಭಿಪ್ರಾಯದಂತೆ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಯಿತು.
ಕಳೆದ ಬಾರಿ ಆನೆ ಅಂಬಾರಿಯಲ್ಲಿ ಅಂಬೇಡ್ಕರ್‌ರ ಭಾವಚಿತ್ರ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಅವರ ಸಹಕಾರದೊಂದಿಗೆ ಸಂಭ್ರಮದಿಂದ ನಡೆಸಲಾಗಿದೆ. ಈ ಬಾರಿಯೂ ಅದಕ್ಕಿಂತ ವಿಜೃಂಭಣೆಯಿಂದ ಆಯೋಜಿಸಬೇಕು. ಏ.14ರಂದು ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಗ್ರಾಮಸ್ಥರು ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ. ಹಾಗಾಗಿ ಅಂದು ತಾಲೂಕು ಮಟ್ಟದ ಕಾರ್ಯಕ್ರಮ ಸಾಧ್ಯವಾಗುವುದಿಲ್ಲ. ಬದಲಾಗಿ ಶಾಸಕರ ಅಭಿಪ್ರಾಯ ಪಡೆದು ಬೇರೊಂದು ದಿನ ಸಮುದಾಯ ಮತ್ತು ತಾಲೂಕು ಆಡಳಿತದ ಸಹಕಾರದೊಂದಿಗೆ ವಿಜೃಂಭಣೆಯಿಂದ ಆಚರಿಸೋಣ ಎಂಂದು ಮುಖಂಡರು ತಿಳಿಸಿದರು.
ಹಿರಿಯ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಅಂಬೇಡ್ಕರ್ ನಮಗೆ ಮಾತ್ರ ಅನಿವಾರ್ಯವಲ್ಲ, ಬದಲಾಗಿ ಎಲ್ಲರಿಗೂ ಅನಿವಾರ್ಯ ಎನ್ನುವುದನ್ನು ಎಲ್ಲ ಸಮುದಾಯದವರನ್ನೂ ಕರೆತಂದು ವೈಶಿಷ್ಟ್ಯಪೂರ್ಣವಾಗಿ ಆಚರಿಸೋಣ. ಆಡಂಬರಕ್ಕಿಂತ ಅಂಬೇಡ್ಕರ್ ಅವರ ಆಶಯಗಳನ್ನು ತಿಳಿಸುವ ಕಾರ್ಯ ಆಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ಏ.14ರಂದು ಸರ್ಕಾರದ ನಿರ್ದೇಶನದಂತೆ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾಗುವುದು. ಶಾಸಕ ಹರೀಶ್‌ಗೌಡ ಕಾರ್ಯನಿಮಿತ್ತ ಈ ಸಭೆಗೆ ಗೈರಾಗಿದ್ದು, ಸಭೆಯ ನಿರ್ಣಯಗಳನ್ನು ಅವರಿಗೆ ತಿಳಿಸಿ ಅಭಿಪ್ರಾಯ ಪಡೆಯಲಾಗುವುದು. ಸಭೆಯ ಮುಖಂಡರು ತಿಳಿಸಿದಂತೆ ಜಯಂತಿ ಆಚರಣೆಗೆ ತಾಲೂಕು ಆಡಳಿತ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಸಭೆಯಲ್ಲಿ ಮುಖಂಡರಾದ ನಿಂಗರಾಜ ಮಲ್ಲಾಡಿ, ರತ್ನಪುರಿ ಪುಟ್ಟಸ್ವಾಮಿ, ಪುಟ್ಟರಾಜು, ಚಿಕ್ಕಸ್ವಾಮಿ, ಕಿರಂಗೂರು ಸ್ವಾಮಿ, ಬಲ್ಲೇನಹಳ್ಳಿ ಕೆಂಪರಾಜು, ನಾಗರಾಜ ಮಲ್ಲಾಡಿ, ಮಹದೇವಮ್ಮ, ಅತ್ತಿಕುಪ್ಪೆ ರಾಮಕೃಷ್ಣ, ಕೊಳಗಟ್ಟ ಕೃಷ್ಣ, ಆಂಜನೇಯ, ಕಟ್ಟೆಮಳಲವಾಡಿ ಪುಟ್ಟರಾಜು, ಬಿಇಒ ಎಸ್.ಪಿ.ಮಹದೇವ್, ಇಒ ಕೆ.ಹೊಂಗಯ್ಯ, ಪೌರಾಯುಕ್ತೆ ಎಂ.ಮಾನಸಾ, ಸಮಾಜ ಕಲ್ಯಾಣಾಧಿಕಾರಿ ಭರತ್‌ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಯತೀಶ್, ಎಸ್ಸಿ ಎಸ್ಟಿ ಜಾಗೃತಿ ಸಮಿತಿ ಸದಸ್ಯ ಅಶೋಕ್‌ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net