ದೊಡ್ಡ ಹೂನ್ನೂರು ಗ್ರಾಮದಲ್ಲಿ ಜೈ ಭೀಮ್ ಯುವಕ ಸಂಘದ ವತಿಯಿಂದ 135ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ಎಂ.ಲಿಂಗರಾಜ್, ಎನ್.ಕುಮಾರ್, ಪಿ.ಸಿ.ನಾಗರಾಜ್, ವೈರಮುಡಿ, ಸುನಿಲ್, ಹರೀಶ್, ರಾಜಯ್ಯ, ಮಹೇಶ್, ಚಂದ್ರೇಶ್, ಅಣ್ಣೇಗೌಡ ಇದ್ದರು.
ಬೈಲುಕುಪ್ಪೆ: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶದ ಅಸ್ಮಿತೆಯಾಗಿದ್ದಾರೆ ಎಂದು ಮೈಸೂರು ಭಾರತೀಯ ಭಾಷಾ ಸಂಸ್ಥಾನದ ಬಿ.ಎಂ.ಲಿಂಗರಾಜ್ ಬಣ್ಣಿಸಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದಲ್ಲಿ ಜೈ ಭೀಮ್ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ತಮ್ಮ ಜ್ಞಾನಾರ್ಜನೆ, ಪ್ರತಿಭೆಯ ಮೂಲಕ ದೇಶಕ್ಕೆ ಉನ್ನತ ಸಂವಿಧಾನವನ್ನು ನೀಡಿ ಈ ದೇಶದ ಅಸ್ಮಿತೆಯಾಗಿ ಉಳಿದುಕೊಂಡಿದ್ದಾರೆ. ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರಿಗೂ ಕೂಡ ಸಮಾನತೆ ಹಕ್ಕು, ಸ್ವಾತಂತ್ರೃಗಳನ್ನು ಸಮಾನವಾಗಿ ನೀಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪಕರಾಗಿದ್ದಾರೆ. ಆದರೆ ಅಂಬೇಡ್ಕರ್ ಸಿದ್ಧಾಂತಗಳನ್ನು ಒಪ್ಪದ ಮನುವಾದಿಗಳು ಸಂವಿಧಾನ ಆಶಯಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಿದೆ ಎಂದರು.
ಪಿಡಬ್ಲುೃಡಿ ಸಹಾಯಕ ಇಂಜಿನಿಯರ್ ಎನ್.ಜೆ.ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಬಾಲ್ಯದಿಂದಲೂ ಸಾಕಷ್ಟು ಅವಮಾನ ಮತ್ತು ಸಂಕಷ್ಟವನ್ನು ಎದುರಿಸಿದರು. ಆದರೆ ಅವರ ತತ್ವ, ಸಿದ್ಧಾಂತಗಳನ್ನು ಒಪ್ಪಿದ ವಿಶ್ವಸಂಸ್ಥೆ ಇಂದು ಅಂಬೇಡ್ಕರ್ ಅವರನ್ನು ವಿಶ್ವ ಜ್ಞಾನಿ ಎಂದು ಗುರುತಿಸಿದೆ. ವಿದೇಶದ ವಿವಿಧಡೆಗಳಲ್ಲಿ ಅವರ ಜ್ಞಾಪಕಾರ್ಥವಾಗಿ ಗ್ರಂಥಾಲಯ ಮತ್ತು ಪ್ರತಿಮೆಗಳನ್ನು ನಿರ್ಮಾಣ ಮಾಡಿ ಅವರ ಸಾಧನೆಯ ಹಾದಿಯನ್ನು ನೆನೆಯುತ್ತಿದ್ದಾರೆ. ಭಾರತದಲ್ಲಿ ಅವರ ಹೆಸರನ್ನು ಹೇಳಿಕೊಂಡು ರಾಜಕೀಯ, ಸಂಘಟನೆ ಮಾಡುವ ವ್ಯಕ್ತಿಗಳು ಕೇವಲ ಅಧಿಕಾರ, ಸವಲತ್ತುಗಳಿಗೆ ಸೀಮಿತವಾಗಿದ್ದಾರೆ. ಇದು ಬೇಸರದ ಸಂಗತಿಯಾಗಿದೆ. ಅಂಬೇಡ್ಕರ್ ಅವರ ನಿಜವಾದ ಸಾಮಾಜಿಕ ಹೋರಾಟಗಳು ಸಾರ್ಥಕಗೊಳಿಸಲು ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಇಲವಾಲ ಮುಖ್ಯಶಿಕ್ಷಕ ಪಿ.ಸಿ.ನಾಗರಾಜ್, ವೈರಮುಡಿ, ಸುನೀಲ್ ಮಾತನಾಡಿದರು.
ಜಯಂತಿ ಅಂಗವಾಗಿ ಗ್ರಾಮದ ಮನೆಗಳಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿದವರಿಗೆ ಮತ್ತು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ನಿಕಿತಾ, ದೀಕ್ಷಿತಾ ಹಾಗೂ ಕಲಾ ವಿಭಾಗದ ವಿದ್ಯಾರ್ಥಿ ಸಮರ್ಥ್‌ಗೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಕ್ಷಿತಾ, ದೀಕ್ಷಿತಾ, ದೀಕ್ಷಾ, ಪ್ರಾರ್ಥನಾ ಅವರನ್ನು ಇಂಜಿನಿಯರ್ ಎನ್.ಜೆ.ಕುಮಾರ್ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿದರು.
ಗ್ರಾಪಂ ಮಾಜಿ ಸದಸ್ಯ ಹರೀಶ್, ಯಜಮಾನರಾದ ಮಹೇಶ್, ರಾಜಯ್ಯ, ಪಾಪಯ್ಯ, ಚಂದ್ರಯ್ಯ, ಚನ್ನವಿರಯ್ಯ, ಕರಿಸ್ವಾಮಿ, ಮಹೇಶ್ ಕುಮಾರ್, ಅಣ್ಣೇಗೌಡ, ಚಂದ್ರೇಶ್, ಜೈ ಭೀಮ್ ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.