ಅಂಬೇಡ್ಕರ್ ಒಂದು ಸಮುದಾಯಕ್ಕೂ ಸೀಮಿತರಲ್ಲ

ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜೀವಂತೋತ್ಸವದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಜ್ಞಾನಪ್ರಕಾಶ ಸ್ವಾಮೀಜಿ, ಡಾ. ಕೆ.ಶಿವಕುಮಾರ್, ಎಸ್. ಮೋಹನ್ ರಾಜ್, ಸೋಸಲೆ ಮಹೇಶ್, ಮಹದೇವಸ್ವಾಮಿ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜೀವಂತೋತ್ಸವದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಜ್ಞಾನಪ್ರಕಾಶ ಸ್ವಾಮೀಜಿ, ಡಾ. ಕೆ.ಶಿವಕುಮಾರ್, ಎಸ್. ಮೋಹನ್ ರಾಜ್, ಸೋಸಲೆ ಮಹೇಶ್, ಮಹದೇವಸ್ವಾಮಿ ಇತರರು ಇದ್ದರು.
Published on
ತಿ.ನರಸೀಪುರ: ಅಗಾಧವಾದ ಜ್ಞಾನವನ್ನು ಗಳಿಸಿ, ದೇಶದಲ್ಲಿ ಪ್ರಜಾಪ್ರಭುತ್ವ ಆಡಳಿತ, ಎಲ್ಲರ ಹಕ್ಕುಗಳ ರಕ್ಷಣೆಗೆ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಯಾವೊಂದು ಸಮುದಾಯಕ್ಕೂ ಸೀಮಿತಗೊಳಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಕೆ.ಶಿವಕುಮಾರ್ ಹೇಳಿದರು.
ತಾಲೂಕಿನ ಸೋಸಲೆ ಗ್ರಾಮದ ಅಂಬೇಡ್ಕರ್ ಪುತ್ಥಳಿ ಹಾಗೂ ಸಮುದಾಯ ಭವನ ಆವರಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಹಾಗೂ ಬೋಧಿಸತ್ವ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಉದ್ಘಾಟಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿ, ಪ್ರಬುದ್ಧ ಭಾರತಕ್ಕೆ ಭದ್ರ ಬುನಾದಿ ಹಾಕಿದ ಅಂಬೇಡ್ಕರ್ ಅವರಿಗೆ ವಿಶ್ವ ಮಾನ್ಯತೆ ಇದ್ದರೂ ದೇಶದಲ್ಲಿ ಜಾತಿಯ ಸಂಕೋಲೆಯೊಳಗೆ ಸಿಲುಕಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ 32ಕ್ಕೂ ಹೆಚ್ಚು ಪದವಿಗಳನ್ನು ಪಡೆದ ಅಂಬೇಡ್ಕರ್ ಅವರು ಸಾಮಾಜಿಕ ಅಸಮಾನತೆ ದೇಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಮುನ್ನಡೆಸಲು ಪೂರಕ ಕಾನೂನುಗಳನ್ನು ರೂಪಿಸಿದರು. ಎಲ್ಲ ವರ್ಗದ ಜನರು ಆಡಳಿತ ಮತ್ತು ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕು. ರಕ್ಷಣೆ ಪಡೆಯಬೇಕೆಂದು ಸಂವಿಧಾನದಲ್ಲಿ ಮಹತ್ವದ ನಿರ್ಣಯವನ್ನು ಮಂಡಿಸಿದರು. ಹಾಗಾಗಿ ದಲಿತರಲ್ಲದೆ ದಲಿತರೇತರರು ಕೂಡ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಅರಿಯಬೇಕು ಎಂದು ಡಾ.ಕೆ.ಶಿವಕುಮಾರ್ ಸಲಹೆ ನೀಡಿದರು.
ಸಾನ್ನಿಧ್ಯವನ್ನು ವಹಿಸಿದ್ದ ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಡಿಜೆ, ನೃತ್ಯ ಹಾಗೂ ಕುಡಿತ ಹೊರತಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಪರಿಪಾಠವನ್ನು ರೂಢಿಸಿಕೊಳ್ಳಬೇಕು. ಉನ್ನತ ಉದ್ಯೋಗ ಪಡೆದವರು ಸಮುದಾಯದ ಜನರ ಋಣ ತೀರಿಸುವ ಕಾರ್ಯಗಳನ್ನು ಮಾಡಿದಾಗ ಅಂಬೇಡ್ಕರ್ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರ ಮದ್ದೂರಿನ ಸಹಾಯಕ ಪ್ರಾಧ್ಯಾಪಕ ಡಾ.ಸಂದೀಪ್ ಎಸ್.ರವಣಿಕರ್ ಅಂಬೇಡ್ಕರ್ ಅವರ ಹೋರಾಟದ ಬದುಕು, ತ್ಯಾಗ ಹಾಗೂ ಜೀವನ ಚರಿತ್ರೆ ತಿಳಿಸಿಕೊಟ್ಟರು.
ಛಲವಾದಿ ಗುರುಪೀಠದ ಶ್ರೀಗಳು ಉಪನ್ಯಾಸ ನೀಡಿದರು. ದ್ವಿತೀಯ ಪಿಯುವಿನಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾದ ಗ್ರಾಮದ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವಕ ಯುವತಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಬಳಿಕ ಅಂಬೇಡ್ಕರ್ ಕ್ರಾಂತಿ ಗೀತೆಗಳ ಗಾಯನ ನಡೆಯಿತು.
ಜ್ಞಾನೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಮೋಹನ್ ರಾಜ್, ಮೈಸೂರು ವಿವಿ ಸಂಶೋಧಕ ವಿದ್ಯಾರ್ಥಿಗಳ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಮಹೇಶ್, ಜಯಂತೋತ್ಸವ ಆಚರಣೆ ಸಮಿತಿಯ ಗೂಳಿ ದೇವರಾಜ್, ಮಹೇಶ್ ಸಾಮ್ರಾಟ್, ಅಭಿಷೇಕ್, ರಕ್ಷಿತ್, ಪುನೀತ್, ಮಹದೇವಸ್ವಾಮಿ, ನಿವೃತ್ತ ಶಿಕ್ಷಕ ವೆಂಕಟ್ರಮಣ ಸ್ವಾಮಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಬಿ.ಎಸ್.ಮಹೇಶ, ಎಂ.ಮಹೇಶ, ಮಾಜಿ ಉಪಾಧ್ಯಕ್ಷ ಎಸ್.ಎಂ. ಚಿನ್ನಸ್ವಾಮಿ, ಮಾಜಿ ಸದಸ್ಯರಾದ ಎನ್.ನಿಂಗಯ್ಯ, ಮಲ್ಲು ರಾಜಣ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net