ಮಹಾರಾಜ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಭ್ರಮ

 ‘ನೆಬೆ 40 ಸಮ್ಮಿಲನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರದ ಮಹಾರಾಜ ಕಾಲೇಜಿನಲ್ಲಿ 1986ರ ಹಳೇ ವಿದ್ಯಾರ್ಥಿಗಳು.
‘ನೆಬೆ 40 ಸಮ್ಮಿಲನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರದ ಮಹಾರಾಜ ಕಾಲೇಜಿನಲ್ಲಿ 1986ರ ಹಳೇ ವಿದ್ಯಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ನೆಬೆ-40 ಸಮ್ಮಿಲನ ಕಾರ್ಯಕ್ರಮ
  • ಸುಮಧುರ ನೆನಪುಗಳನ್ನು ಹಂಚಿಕೊಂಡ ವಿವಿಧ ರಂಗದ ಸಾಧಕರು
ಮೈಸೂರು: ನಗರದ ಮಹಾರಾಜ ಕಾಲೇಜಿನಲ್ಲಿ 1986ರಲ್ಲಿ ಅಧ್ಯಯನ ಮಾಡಿದ  ವಿದ್ಯಾರ್ಥಿಗಳು ರಚಿಸಿಕೊಂಡ ‘ನೆಳಲು ಬೆಳಕು’ ತಂಡದ ಸದಸ್ಯರು ಕಾಲೇಜಿನ ಜೂನಿಯರ್ ಬಿಎ ಹಾಲ್‌ನಲ್ಲಿ ‘ನೆಬೆ 40 ಸಮ್ಮಿಲನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಸುಮಾರು 50 ಹಿರಿಯ ವಿದ್ಯಾರ್ಥಿಗಳು ಅಂದಿನ ದಿನಗಳಲ್ಲಿ ತಾವು ಕಂಡ ಮಹಾರಾಜ ಕಾಲೇಜು, ನಾಟಕ, ಸಾಹಿತ್ಯ, ಕಲೆ, ಜಾನಪದ ಮೊದಲಾದ ಕ್ಷೇತ್ರಗಳಲ್ಲಿ ವಿವಿಧ ಚಟುವಟಕೆಗಳಲ್ಲಿ ತೊಡಗಿಕೊಂಡಿದ್ದು, ವ್ಯಕ್ತಿತ್ವ ವಿಕಸನ ಮಾಡಿಕೊಂಡಿದ್ದು,  ಉದ್ಯಾನದಲ್ಲಿ  ಇದಕ್ಕಾಗಿಯೇ ಕುಳಿತು ಚರ್ಚಿಸುತ್ತಿದ್ದ ಸುಮಧುರ ನೆನಪುಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮವನ್ನು ತಮ್ಮ ಸಡಗರ, ಸಂಭ್ರಮಕ್ಕೆ ಮಾತ್ರ ಮೀಸಲಿಡಲಿಲ್ಲ. ಕಾಲೇಜಿನಲ್ಲಿ ಸಾಂಸ್ಕೃತಿಕ, ಸಾಹಿತ್ಯಕ, ರಂಗಭೂಮಿ ಮೊದಲಾದ ಚಟುವಟಿಕೆಗಳಿಗೆ ಮಾರ್ಗದರ್ಶನ, ತರಬೇತಿ ನೀಡುವ ಮೂಲಕ ಕಾಲೇಜು ಈ ಕ್ಷೇತ್ರಗಳಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರುವಂತೆ ಮಾಡಲು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ. ವಿಜಯಲಕ್ಷ್ಮೀ,  ಆಡಳಿತಾಧಿಕಾರಿ ಡಾ.ಎಚ್.ಟಿ. ರಾಮಚಂದ್ರು ಹಾಗೂ ಈ ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಹಲವು ವಿದ್ಯಾರ್ಥಿಗಳನ್ನೂ ಆಹ್ವಾನಿಸಿ ಸಲಹೆ ಪಡೆಯಲಾಯಿತು.
ತಂಡದ ಹಿರಿಯ ಸದಸ್ಯ ಡಾ.ಎನ್.ವಿ. ವಾಸುದೇವಶರ್ಮ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಜತೆಗೂಡಿ ಕಲೆಗಳ ಕುರಿತು ವಿವಿಧ ಕಾರ್ಯಕ್ರಮ ಆಯೋಜನೆ, ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ನಿರ್ದಿಷ್ಟ ವಿಷಯ, ವಿಚಾರಗಳ ಕುರಿತು ಕಾರ್ಯಾಗಾರ, ಸ್ಪರ್ಧೆಗಳ ಆಯೋಜನೆಗೆ ವಿದ್ಯಾರ್ಥಿಗಳು ಆಸಕ್ತಿ ತೋರಿಸಿರುವುದು ಸಂತಸ ತಂದಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು

ಉತ್ಸಾಹ ತೋರಿದರೆ ಮಾರ್ಗದರ್ಶನಕ್ಕೆ ಸಿದ್ಧ 

ಹಿರಿಯ ಸದಸ್ಯ, ರಂಗಕರ್ಮಿ ಶಶಿಧರ ಭಾರಿಘಾಟ್ ಮಾತನಾಡಿ, ವಿದ್ಯಾರ್ಥಿಗಳು ಉತ್ಸಾಹ ತೋರಿದರೆ ಮಾರ್ಗದರ್ಶನಕ್ಕೆ ನಾವು ಸಿದ್ಧ ಎಂದರು.  ನೆಬೆ ತಂಡದ ಅನೇಕರು ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇವರು ವಿದ್ಯಾರ್ಥಿಗಳಿಗೆ ಸೂಕ್ತವಾದ ದಿನದಂದು ಆಗಮಿಸಿ ತರಬೇತಿ ನೀಡಲಿದ್ದಾರೆ ಎಂದರು.


ರಂಗಭೂಮಿ ಚಟುವಟಿಕೆ ಅತ್ಯಗತ್ಯ: 

ಹಿರಿಯ ರಂಗಕಮಿ ಎಚ್.ಎಸ್. ಉಮೇಶ್ ಮಾತನಾಡಿ, ನಮ್ಮನ್ನು ಹೊಸ ಹುರುಪಿಗೆ ಒಡ್ಡಿಕೊಳ್ಳಲು ರಂಗಭೂಮಿ ಚಟುವಟಿಕೆ ಅತ್ಯಗತ್ಯ, ಈ ರೀತಿಯ ಚಟುವಟಿಕೆಯಲ್ಲಿ ಒಂದೊಮ್ಮೆ ತೊಡಗಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಅಂದಿನ ತಲೆಮಾರಿನೊಡನೆ ಅನುಭವ ಹಂಚಿಕೊಂಡು ನೆರವಾಗಬಹುದಾಗಿದೆ. ನಂತರವೂ ಸಿಹಿ ಅನುಭವ ಮೆಲುಕು ಹಾಕುವುದು ಜೀವನೋತ್ಸಾಹ ಹೆಚ್ಚಿಸುತ್ತದೆ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ಎಂ.ಶಿವಸ್ವಾಮಿ, ಎಂ.ಟಿ. ಮಹಾದೇವ್, ಆನಂದರಾಜೇ ಅರಸ್, ಡಿ.ಜಿ. ಸುಮತಿ, ಬಿಂದು ಪಟೇಲ್, ಅಶ್ವತನಾರಾಯಣ, ಡಾ. ಸುಜಾತಾ ಭಾಸ್ಕರ್, ಹನ್ಸಾ ಜೈನ್, ಬಿ. ಮಹೇಶ್ ಹರವೆ ಸೇರಿದಂತೆ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net