ಪರ್ಯಾಯ ಇಂಧನಗಳು ಇಂದಿನಿ ಪರಿಸ್ಥಿತಿಗೆ ಅನಿವಾರ್ಯ: ಡಾ.ಟಿ.ಆರ್.ಅರುಣ್ ಹೇಳಿಕೆ
ಶ್ರೀರಾಂಪುರದ ವೆಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಅಳವಡಿಸಿರುವ ಸೌರ ವಿದ್ಯುತ್ ಘಟಕಕ್ಕೆ ಡಾ.ಟಿ.ಆರ್.ಅರುಣ್ ಚಾಲನೆ ನೀಡಿದರು. ಹೇಮಂತ ಆಚಾರ್ಯ ಗುಡಿ, ಬದರಿ ಪ್ರಸಾದ್, ಗಣೇಶ ಭಟ್, ಗೋವರ್ಧನ, ಎ.ಎನ್.ರಮೇಶ್ ಇದ್ದರು.
ಧ್ಯಾನ ಕೇಂದ್ರವೂ ಈ ನಿಟ್ಟಿನಲ್ಲಿ ಪರಿಸರ ಕಾಳಜಿಯನ್ನು ಕಾರ್ಯರೂಪಕ್ಕೆ ತಂದಿರುವುದು ಶ್ಲಾಘನೀಯ
ಮೈಸೂರು:ಪರ್ಯಾಯ ಇಂಧನ ಮೂಲಗಳತ್ತ ಗಮನ ಹರಿಸುವುದು ಇಂದು ಅನಿವಾರ್ಯವಾಗಿದೆ ಎಂದು ಕರ್ಣಾಟಕ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಡಾ.ಟಿ.ಆರ್.ಅರುಣ್ ಹೇಳಿದರು.
ಶ್ರೀಮನ್ ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀರಾಮಪುರ ಶಾಖೆಯಾದ ಶ್ರೀವೆಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಸೌರ ಶಕ್ತಿ ವಿದ್ಯುತ್ ಘಟಕ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಕೇಂದ್ರಗಳು ಸಂಪ್ರದಾಯ, ಭಕ್ತಿ ಮತ್ತು ಶ್ರದ್ಧೆಯನ್ನು ಜಾಗೃತಗೊಳಿಸುವುದರೊಂದಿಗೆ ಪರಿಸರಾತ್ಮಕ ಕಾಳಜಿಯನ್ನೂ ಮೂಡಿಸಬೇಕು. ಈ ನಿಟ್ಟಿನಲ್ಲಿ ವೆಂಕಟೇಶ್ವರ ಧ್ಯಾನ ಕೇಂದ್ರವು 30 ಕೆವಿ ಸಾಮರ್ಥ್ಯದ 46 ಪ್ಯಾನಲ್ ಸಹಿತ ಸೌರ ಶಕ್ತಿ ಘಟಕವನ್ನು ಅಳವಡಿಸಿಕೊಂಡು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಿರುವುದು ಮಾದರಿ ಎಂದರು.
ಸೌರ ವಿದ್ಯುತ್ ಘಟಕವು ನವೀಕರಿಸಬಹುದಾದ ಮತ್ತು ಪರಿಸರಸ್ನೇಹಿ ಇಂಧನ ಮೂಲ. ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸುವ ರಾಜ್ಯವಾಗಿದ್ದು. ಧ್ಯಾನ ಕೇಂದ್ರವೂ ಈ ನಿಟ್ಟಿನಲ್ಲಿ ಪರಿಸರ ಕಾಳಜಿಯನ್ನು ಕಾರ್ಯರೂಪಕ್ಕೆ ತಂದಿರುವುದು ಶ್ಲಾಘನೀಯ ಎಂದರು.
ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಖ್ಯ ಪ್ರಬಂಧಕ ಬದರಿ ಪ್ರಸಾದ್ ಮಾತನಾಡಿ, ಘಟಕ ಸ್ಥಾಪನೆಗೆ ಬ್ಯಾಂಕ್ ಸಿಎಸ್‌ಆರ್ ನಿಧಿಯಿಂದ 10 ಲಕ್ಷ ರೂ. ದೇಣಿಗೆ ನೀಡಿದೆ. ಶತಮಾನ ಪೂರ್ಣಗೊಳಿಸಿದ ಬ್ಯಾಂಕ್ ಆರ್ಥಿಕ ವ್ಯವಹಾರದದೊಂದಿಗೆ ಪರಿಸರಾತ್ಮಕ ಸೇವಾ ಕಾರ್ಯಗಳಿಗೂ ಬೆಂಬಲ ನೀಡುತ್ತಿದೆ ಎಂದರು.
ಧ್ಯಾನ ಕೇಂದ್ರದ ವ್ಯವಸ್ಥಾಪಕ ಪಂಡಿತ ಹೇಮಂತ ಆಚಾರ್ಯ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಸತ್ಯಾತ್ಮ ತೀರ್ಥ ಸ್ವಾಮೀಜಿ ಅನುಗ್ರಹ ಮತ್ತು ಆದೇಶದಂತೆ ಧ್ಯಾನ ಕೇಂದ್ರವು ದಶಕಗಳಿಂದ ಧರ್ಮ ಜಾಗೃತಿಗಾಗಿ ಹಲವು ಚಟುವಟಿಕೆ ನಡೆಸುತ್ತಿದೆ. ಸೌರ ವಿದ್ಯುತ್ ಘಟಕ ಸ್ಥಾಪನೆ ಒಂದು ಹೊಸ ಹೆಜ್ಜೆ ಎಂದರು.
ಬ್ಯಾಂಕಿನ ವಿವೇಕಾನಂದನಗರ ಶಾಖಾ ಅಧಿಕಾರಿ ಗಣೇಶ ಭಟ್, ನಿವೃತ್ತ ಹಿರಿಯ ವ್ಯವಸ್ಥಾಪಕ ಗೋವರ್ಧನ, ಮಠದ ಹಿರಿಯ ಕಾರ್ಯಕರ್ತ ಎ.ಎನ್.ರಮೇಶ್ ಇತರರು ಇದ್ದರು.