ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ವತ್ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಿದರು. ಸಿ. ನವೀನ್ ಚಂದರ್, ಡಾ.ಎಸ್.ಮರೀಗೌಡ, ಗುಂಡಪ್ಪಗೌಡ, ಶ್ರೀಶೈಲರಾಮಣ್ಣವರ್, ಟಿ.ನಾಗರಾಜು ಹಾಗೂ ಇತರರು ಇದ್ದರು.
ಮೈಸೂರು: ವಿದ್ಯಾರ್ಥಿಗಳಲ್ಲಿ ಜ್ಞಾನದ ಜತೆಗೆ ಕೌಶಲ ಇದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಭಿಪ್ರಾಯಪಟ್ಟರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ವತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತು ಅತ್ಯಂತ ವೇಗವಾಗಿ ಸಾಗುತ್ತಿದ್ದು, ಈ ವೇಗಕ್ಕೆ ಸ್ಪರ್ಧಿಸಲು ವಿದ್ಯಾರ್ಥಿಗಳು ಸಹ ಅಗತ್ಯ ಕೌಶಲಗಳನ್ನು ಕಲಿತು ಸಾಗಬೇಕು. ಅಪರಿಮಿತವಾದ ಅವಕಾಶಗಳಿದ್ದು ಅವುಗಳನ್ನು ಸಾಧ್ಯತೆಯ ಕಣ್ಣುಗಳಿಂದ ಗಮನಿಸಿ, ಪ್ರತಿದಿನವು ದೈನಂದಿನ ಆಗುಹೋಗುಗಳ ಬಗ್ಗೆ ಅಧ್ಯಯನ ಮಾಡುತ್ತಾ ಕಲಿಯುವವನೇ ನಿಜವಾದ ವಿದ್ಯಾರ್ಥಿ ಎಂದರು.
ಎಲ್ಲರೂ ಯೋಚಿಸಿ, ಯೋಜಿಸುತ್ತಾರೆ. ಆದರೆ ಎಲ್ಲರಿಗಿಂತಲೂ ವಿಭಿನ್ನವಾಗಿ ಯೋಚಿಸಿ, ಯೋಜಿಸಿ ಪ್ರದರ್ಶಿಸುವವನೇ ಯಶಸ್ವಿ ವಿದ್ಯಾರ್ಥಿ. ಕೃತಕ ಬುದ್ಧಿಮತ್ತೆ ಇಂದು ಜಗತ್ತನ್ನೇ ಆಳುತ್ತಿದೆ ಎಂಬ ಅಭಿಪ್ರಾಯ ಸಹಜವಾದರು ನಮ್ಮ ಅರ್ಥೈಸುವಿಕೆ ಮತ್ತು ಕಾರ್ಯಕ್ಷಮತೆಯಿಂದ ಕೃತಕ ಬುದ್ಧಿಮತ್ತೆಯ ಅಪಾಯದಿಂದ ಪಾರಾಗಬಹುದು ಎಂದು ಹೇಳಿದರು.
ಬೆಂಗಳೂರಿನ 3ಕ್ಯೂ ಸುತಂತ್ರ ಇಂಡಸ್ಟ್ರೀಯ ಸಂಸ್ಥಾಪಕ ಕಾರ್ಯನಿರ್ವಹಣಾ ಧಿಕಾರಿ ಸಿ. ನವೀನ್ ಚಂದರ್ ಮಾತನಾಡಿ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ, ಸ್ಟ್ರಾಟಪ್ ಸಂಸ್ಕೃತಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಅವುಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಕೌಶಲ ವಿದ್ಯಾರ್ಥಿಗಳಿಗಿರಬೇಕು. ದೃಢನಿಶ್ಚಯ, ಶಿಸ್ತು ಮತ್ತು ವಿಭಿನ್ನ ದೃಷ್ಟಿಕೋನಗಳಿದ್ದರೆ ಯಾವುದೇ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಿಕೊಂಡು ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇಂದಿನ ಯುವಜನತೆ ಉದ್ಯೋಗಕ್ಕಾಗಿ ಕಾಯದೇ ಉದ್ಯೋಗವನ್ನು ಸೃಷ್ಟಿಸುವತ್ತ ಗಮನಹರಿಸಬೇಕು. ನಮ್ಮಲ್ಲಿ ದೊರೆಯುವ ಅಪರಿಮಿತ ಅವಕಾಶಗಳನ್ನು ಉಪಯೋಗಿಸಿಕೊಂಡು ಯಶಸ್ವಿ ಉದ್ಯಮಿಗಳಾಗಬೇಕು. ನಿಮ್ಮ ಅಮೂಲ್ಯವಾದ ಸಮಯವನ್ನು ಮೊಬೈಲ್‌ನೊಂದಿಗೆ ಕಳೆಯಬೇಡಿ. ಏಕೆಂದರೆ ಗತಿಸಿಹೋದ ಸಮಯ ಮತ್ತೆಂದು ಮರಳಿಬರುವುದಿಲ್ಲ. ಕಾರಣಗಳು ವ್ಯಕ್ತಿಯನ್ನು ಬೆಳೆಸುವುದಿಲ್ಲ ಬದಲಿಗೆ ಅವುಗಳನ್ನು ಮೆಟ್ಟಿ ಬೆಳೆದಾಗ ಮಾತ್ರ ವಿದ್ಯಾರ್ಥಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಎಸ್.ಮರೀಗೌಡ ಮಾತನಾಡಿ, 18 ವರ್ಷಗಳಿಂದ ವಿದ್ವತ್ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿರುವ ದೈಹಿಕ, ಮಾನಸಿಕ, ಶೈಕ್ಷಣಿಕ ಕೌಶಲಕ್ಕೆ ಒತ್ತು ನೀಡಿ ಅವರಲ್ಲಿರುವ ಸಂಘಟನೆ, ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ವತ್ ನೆರವಾಗಲಿದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಗುಂಡಪ್ಪಗೌಡ, ಖಜಾಂಚಿ ಶ್ರೀಶೈಲರಾಮಣ್ಣವರ್, ಕಾಲೇಜು ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ.ನಾಗರಾಜು ಹಾಗೂ ಇತರರು ಇದ್ದರು.