ಹುಣಸೂರು ನಗರದ ಪೌರಕಾರ್ಮಿಕರ ಕಾಲನಿ ನಿವಾಸಿಗಳು ನಿವೇಶನ ಮಂಜೂರಿಗೆ ಆಗ್ರಹಿಸಿ ಶಾಸಕ ಜಿ.ಡಿ.ಹರೀಶ್‌ಗೌಡ ಅವರಿಗೆ ಮನವಿಪತ್ರ ಸಲ್ಲಿಸಿದರು. ನಾಗರಾಜ್, ಸಿ.ಎಚ್.ರಾಮು, ಪೆರುಮಾಳ್, ರಾಣಿ ಪೆರುಮಾಳ್, ಕಿಟ್ಟು, ವಿ.ಶ್ರೀನಿವಾಸ ಇತರರಿದ್ದರು.
ಹುಣಸೂರು: ವಸತಿ ಸೌಲಭ್ಯಕ್ಕಾಗಿ ನಿವೇಶನಗಳನ್ನು ಮಂಜೂರು ಮಾಡಿಕೊಡುವಂತೆ ಆಗ್ರಹಿಸಿ ನಗರದ ಪೌರಕಾರ್ಮಿಕ ಕಾಲನಿ ನಿವಾಸಿಗಳು ಶಾಸಕ ಜಿ.ಡಿ.ಹರೀಶ್‌ಗೌಡ ಅವರಿಗೆ ಮನವಿಪತ್ರ ಸಲ್ಲಿಸಿದರು.
ಕಾಲನಿಯ 50ಕ್ಕೂ ಹೆಚ್ಚು ಕುಟುಂಬದ ಸದಸ್ಯರು ಮಂಗಳವಾರ ಶಾಸಕರನ್ನು ಭೇಟಿ ಮಾಡಿದರು. ನಗರಸಭಾ ಮಾಜಿ ಸದಸ್ಯೆ ರಾಣಿ ಪೆರುಮಾಳ್ ಮಾತನಾಡಿ, ಕಳೆದ 50ವರ್ಷಗಳಿಂದ ನಗರದ ಪೌರಕಾರ್ಮಿಕರ ಕಾಲನಿಯಲ್ಲಿ ಪೌರಕಾರ್ಮಿಕರು ಅತ್ಯಂತ ಚಿಕ್ಕದಾದ ಶಿಥಿಲಾವಸ್ಥೆಯ ಮನೆಗಳಲ್ಲಿ 3-4 ಕುಟುಂಬಗಳು ವಾಸ ಮಾಡುತ್ತಿವೆ. ಪ್ರಾಣಿಗಳಿಗಿಂತಲೂ ಕೀಳಾಗಿ ಬದುಕು ನಡೆಸುತ್ತಿದ್ದೇವೆ. 5 ದಶಕಗಳೇ ಸಂದರೂ ನಮಗೆ ಸ್ವಂತ ಸೂರಿಲ್ಲ. ಇಡೀ ನಗರವನ್ನೇ ಸ್ವಚ್ಛವಾಗಿರಿಸುವ ನಮ್ಮ ಕುಟುಂಬಗಳು ಅನೈರ್ಮಲ್ಯದ ಬದುಕು ನಡೆಸುತ್ತಿವೆ. 25 ವರ್ಷಗಳ ಹಿಂದೆ ಅಂದಿನ ಶಾಸಕ ಕೋಡಿ ಪಾಪಣ್ಣ ಚಿಕ್ಕಹುಣಸೂರು ವ್ಯಾಪ್ತಿಯಲ್ಲಿ ನಿವೇಶನ ನೀಡಲು ಮುಂದಾಗಿದ್ದರು. ಆದರೆ ನಂತರ ನಿಂತುಹೋಯಿತು. ಚಿಕ್ಕಹುಣಸೂರು ಸರ್ವೇ ನಂ.73/1ಎ ರಲ್ಲಿ 13 ಎಕರೆ ಭೂಮಿಯಿದ್ದು, ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿಕೊಟ್ಟು ಸ್ವಂತ ಸೂರು ಹೊಂದಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್‌ಗೌಡ, ನಿವೇಶನ ಹಂಚಿಕೆ ಕುರಿತಾಗಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕಾನೂನಾತ್ಮಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಶೀಘ್ರ ನಿವೇಶನ ಹಂಚಿಕೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿ.ಎಚ್.ರಾಮು, ಮುರುಗ, ನಾಗರಾಜು, ಪೆರುಮಾಳ್, ಕಿಟ್ಟು, ಆರ್.ರವಿ, ನವೀನ, ಮಂಜುಳಾ, ವಿ.ಶ್ರೀನಿವಾಸ, ಮಂಜುನಾಥ, ಆರ‌್ಮುಗಂ, ಮಹದೇವ, ವಿ.ಕೃಷ್ಣ, ಎಚ್.ಎಸ್.ರಾಜ, ಲೋಕೇಶ, ರಾಜ ಇತರರು ಇದ್ದರು.