ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಬುಧವಾರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಡಿ.ಆರ್.ಸುನಂದಮ್ಮ ಅವರನ್ನು ಅಭಿನಂದಿಸಲಾಯಿತು. ಡಾ.ಎಂ.ಎಸ್.ವೇದಾ, ಮಡ್ಡೀಕೆರೆ ಗೋಪಾಲ್, ಮಂಜುಳಾ ಮಾನಸ, ಹೇಮಾ ನಂದೀಶ್, ಮೀನಾ ಮೈಸೂರು, ಉಷಾ ನರಸಿಂಹನ್, ಲಕ್ಷ್ಮಿ ಇತರರಿದ್ದರು.
ಮೈಸೂರು: ಮಹಿಳೆಯರು ರಚಿಸಿದ ಅನೇಕ ಕೃತಿಗಳು ಮರೆಯಾಗಿದೆ. ಇದರಿಂದ ಮಹಿಳಾ ಸಾಹಿತಿಗಳಿಗೆ ನೋವಾಗಿದೆ. ಮಹಿಳೆಯರ ಕೃತಿಗಳನ್ನು, ಸಾಹಿತ್ಯವನ್ನು ಅಡುಗೆ ಮನೆ ಸಾಹಿತ್ಯ ಎನ್ನಲಾಗಿತ್ತು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಡಿ.ಆರ್.ಸುನಂದಮ್ಮ ಬೇಸರ ವ್ಯಕ್ತಪಡಿಸಿದರು.
ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಕನ್ನಡ ಲೇಖಕಿಯರ ಟ್ರಸ್ಟ್, ಕರ್ನಾಟಕ ಲೇಖಕಿಯರ ಸಂಘ ಮೈಸೂರು ಶಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ಪೀಕರಿಸಿ ಮಾತನಾಡಿದರು.
70, 80ರ ದಶಕದಲ್ಲಿ ಹೆಣ್ಣು ಮಕ್ಕಳ ಕೃತಿಗಳನ್ನು ಮೂಲೆಗುಂಪು ಮಾಡಲಾಗಿತ್ತು. ಅವರ ಕೃತಿಗಳಲ್ಲಿ ಲೋಪವನ್ನು ನೋಡುವ, ವಿಮರ್ಶೆ ಮಾಡುವ ಮನಸ್ಥಿತಿ ಗಂಡಸರಿಗೆ ಇರಲಿಲ್ಲ. ಅನೇಕ ಹೆಣ್ಣು ಮಕ್ಕಳು ಗಂಡಸರ ಹೆಸರಿನಲ್ಲಿ ಕೃತಿಗಳನ್ನು ಬರೆಯುತ್ತಿದ್ದರೆ ಮಾತ್ರ ವಿಮರ್ಶೆ ಮಾಡಲಾಗುತ್ತಿತ್ತು ಎಂದರು.
ಒಂದು ಕಾಲದಲ್ಲಿ ದ.ರಾ.ಬೇಂದ್ರೆಯವರ ಅಂಬಿಕಾತನಯದತ್ತ ಎಂದು ಬರೆದಿದಕ್ಕೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಸಾಹಿತ್ಯ ಸಮಾರಂಭಗಳಲ್ಲಿಯೂ ಹೆಣ್ಣು ಮಕ್ಕಳು ಬರೆದ ಕೃತಿಗಳನ್ನು ಉಲ್ಲೇಖ ಮಾಡುತ್ತಿರಲಿಲ್ಲ. ಆದರೆ, ಇವತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ತಿಳಿಸಿದರು.
ಕನ್ನಡದಲ್ಲಿದ್ದ ಹೆಣ್ಣುಮಕ್ಕಳ ಕೃತಿಗಳನ್ನು, ಲೇಖಕರ ಹೆಸರುಗಳನ್ನು ಮರೆಮಾಚಲಾಗಿತ್ತು. ಅಷ್ಟರ ಮಟ್ಟಿಗೆ ರಾಜಕಾರಣ ಮಾಡಲಾಗುತ್ತಿತ್ತು. ಈ ಸಂಬಂಧ ನಮ್ಮ ಸಂಘ ಹೋರಾಟ ಮುಂದುವರಿಸಲಿದೆ. ಆರ್ಥಿಕವಾಗಿ ಅನುದಾನ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಲೇಖಕಿ ಡಾ.ಎಂ.ಎಸ್.ವೇದಾ ಅಭಿನಂದನಾ ನುಡಿಗಳನ್ನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಂಜುಳಾ ಮಾನಸ, ಕನ್ನಡ ಲೇಖಕಿಯರ ಟ್ರಸ್ಟ್ ಕಾರ್ಯದರ್ಶಿ ಹೇಮಾ ನಂದೀಶ್, ಮೀನಾ ಮೈಸೂರು, ಸಂಘದ ಜಿಲ್ಲಾಧ್ಯಕ್ಷೆ ಉಷಾ ನರಸಿಂಹನ್, ಲಕ್ಷ್ಮೀ ಇತರರಿದ್ದರು.